Friday, July 24, 2026
HomeVijayanagaraದೆಹಲಿ ಪೊಲೀಸರ ದೌರ್ಜನ್ಯ ಖಂಡಿಸಿ ಹೊಸಪೇಟೆಯಲ್ಲಿ ಎಐಡಿಎಸ್‌ಒ ಪ್ರತಿಭಟನೆ

ದೆಹಲಿ ಪೊಲೀಸರ ದೌರ್ಜನ್ಯ ಖಂಡಿಸಿ ಹೊಸಪೇಟೆಯಲ್ಲಿ ಎಐಡಿಎಸ್‌ಒ ಪ್ರತಿಭಟನೆ

[ವರದಿ : ವಿಜಯವಾಣಿ]
ಹೊಸಪೇಟೆ, ಜು. 22: ನವದೆಹಲಿಯಲ್ಲಿ ನೀಟ್ (NEET-UG) ಪರೀಕ್ಷೆಯಲ್ಲಿನ ಅಕ್ರಮ ಹಾಗೂ ಭ್ರಷ್ಟಾಚಾರವನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ಹಲ್ಲೆಯನ್ನು ಖಂಡಿಸಿ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (AIDSO) ವಿಜಯನಗರ ಜಿಲ್ಲಾ ಸಮಿತಿಯು ಹೊಸಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಪ್ರತಿಭಟನಾಕಾರರು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಅಶ್ರುವಾಯು (ಟಿಯರ್ ಗ್ಯಾಸ್), ಪೆಲ್ಲೆಟ್ ಗನ್ ಹಾಗೂ ಶಾಕ್ ಬಟನ್‌ಗಳನ್ನು ಬಳಸಿ ನಡೆಸಲಾಗಿದೆ ಎಂದು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹೊಸಪೇಟೆ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾಧ್ಯಕ್ಷ ರವಿಕಿರಣ್ ಜೆ.ಪಿ., ವೈದ್ಯರಾಗುವ ಕನಸು ಹೊತ್ತು ಕಠಿಣ ಪರಿಶ್ರಮ ಪಡುವ ಬಡ ಹಾಗೂ ಮಧ್ಯಮ ವರ್ಗದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕೋಚಿಂಗ್ ಮಾಫಿಯಾ ಮತ್ತು ಭ್ರಷ್ಟ ಎನ್‌ಟಿಎ (NTA) ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಪೋಷಕರು ತಮ್ಮ ಆಸ್ತಿ-ಪಾಸ್ತಿಯನ್ನು ಮಾರಿ ವರ್ಷಕ್ಕೆ ₹80 ಸಾವಿರದಿಂದ ₹3 ಲಕ್ಷದವರೆಗೆ ಕೋಚಿಂಗ್ ಕೇಂದ್ರಗಳಿಗೆ ಖರ್ಚು ಮಾಡುತ್ತಿದ್ದಾರೆ. ಆದರೆ ಪರೀಕ್ಷಾ ವ್ಯವಸ್ಥೆಯೇ ಹಣದ ಪ್ರಭಾವಕ್ಕೆ ಒಳಗಾಗಿರುವುದು ಗಂಭೀರ ವಿಚಾರವಾಗಿದೆ ಎಂದು ಅವರು ಹೇಳಿದರು.

ದೆಹಲಿಯಲ್ಲಿ ನಿರಾಯುಧ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ದೇಶದ ಶಿಕ್ಷಣ ವ್ಯವಸ್ಥೆಯ ದುಸ್ಥಿತಿಯನ್ನು ತೋರಿಸುತ್ತದೆ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಎನ್‌ಟಿಎ ಅನ್ನು ತಕ್ಷಣ ರದ್ದುಗೊಳಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಯು. ಉಮಾದೇವಿ ವಹಿಸಿದ್ದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡರಾದ ವೈಷ್ಣವಿ, ಸೈಯದ್ ಸಮೀರ್, ಮೀನಾಕ್ಷಿ, ನಿರ್ಮಲ ಶ್ರೀನಿವಾಸ್, ಹುಲಿಗೆಮ್ಮ, ವಿದ್ಯಾಶ್ರೀ ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments