Sunday, July 26, 2026
HomeDistrictsBallariರಜಾ ದಿನಗಳಲ್ಲೂ ಗ್ರಾಮಗಳಿಗೆ ದಾವಿಸಿದ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ

ರಜಾ ದಿನಗಳಲ್ಲೂ ಗ್ರಾಮಗಳಿಗೆ ದಾವಿಸಿದ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ

ಬರಗಾಲ ಎದುರಿಸಲು ಕಾರ್ಮಿಕರಿಗೆ ಧೈರ್ಯ, ವಲಸೆ ತಡೆಯಲು ಮನವಿ

ಸಂಡೂರು, ಜು. 26: ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕರ ವಲಸೆ ತಡೆಗಟ್ಟುವುದು ಹಾಗೂ
ವಿಬಿ ಜಿ ರಾಮ್ ಜಿ ಯೋಜನೆಯಡಿ
ಕಾಮಗಾರಿಗಳ ಪ್ರಗತಿ ಪರಿಶೀಲಿಸುವ ಉದ್ದೇಶದಿಂದ ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮೊಹಮ್ಮದ್ ಹ್ಯಾರಿಸ್ ಸುಮೇರ್ ಅವರು ರಜಾ ದಿನಗಳಾದ ಶನಿವಾರ ಹಾಗೂ ಭಾನುವಾರ ಸಂಡೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಸಿಇಒ ಅವರು ಅಂತಾಪುರ, ವಿಠ್ಠಲಾಪುರ ಹಾಗೂ ಚೋರನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಬರಗಾಲ ನಿರ್ವಹಣೆಗೆ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.

ವಿಠ್ಠಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಲಾಪುರ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ದಮ್ಮೂರು ಸ್ವಾಮಿಯಪ್ಪ ಅವರ ಹೊಲದ ಸಮೀಪ ನಿರ್ಮಿಸಲಾಗುತ್ತಿರುವ ಸಣ್ಣ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿ, ಕಾರ್ಮಿಕರ ಎನ್‌ಎಂಎಂಎಸ್ (NMMS) ಹಾಜರಾತಿಯನ್ನು ಪರಿಶೀಲಿಸಿದರು.

ನಂತರ ಅಂತಾಪುರ ಹಾಗೂ ಚೋರುನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ವಡ್ಡಿನಕಟ್ಟೆ ಗ್ರಾಮದಲ್ಲಿರುವ ವಡ್ಡಿನಕಟ್ಟೆ ಕೆರೆಯ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿ, ಕಾಮಗಾರಿಯ ಗುಣಮಟ್ಟ, ಪ್ರಗತಿ ಹಾಗೂ ಕಾರ್ಮಿಕರಿಗೆ ಕಲ್ಪಿಸಿರುವ ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಇಒ ಮೊಹಮ್ಮದ್ ಹ್ಯಾರಿಸ್ ಸುಮೇರ್ ಅವರು, “ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ಗ್ರಾಮೀಣ ಜನರೊಂದಿಗೆ ಸರ್ಕಾರ ಇದೆ. ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗದೆ ಗ್ರಾಮದಲ್ಲಿಯೇ ಲಭ್ಯವಿರುವ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸ ನಿರ್ವಹಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಿ” ಎಂದು ಕಾರ್ಮಿಕರಿಗೆ ಮನವಿ ಮಾಡಿದರು.

ವಿಬಿ ಜಿ ರಾಮ್ ಜಿ ಯೋಜನೆಯಡಿ ಪ್ರತಿ ಕಾರ್ಮಿಕರಿಗೆ ದಿನಕ್ಕೆ ₹382 ಕೂಲಿ ದೊರೆಯುತ್ತಿದ್ದು, ಒಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳ ಉದ್ಯೋಗ ಕಲ್ಪಿಸಲಾಗುತ್ತದೆ. ಅರ್ಹ ಫಲಾನುಭವಿಗಳು ಯೋಜನೆಯಡಿ ಕೆಲಸಕ್ಕೆ ಹಾಜರಾಗಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಜೊತೆಗೆ ವೈಯಕ್ತಿಕ ಕಾಮಗಾರಿಗಳನ್ನೂ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.

ಭೇಟಿಯ ವೇಳೆ ಗ್ರಾಮೀಣ ಉದ್ಯೋಗ ಇಲಾಖೆಯ ಸಹಾಯಕ ನಿರ್ದೇಶಕ ವಸಂತ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರಂಗಸ್ವಾಮಿ (ವಿಠ್ಠಲಾಪುರ ಮತ್ತು ಅಂತಾಪುರ), ಚೋರನೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ, ತಾಂತ್ರಿಕ ಸಂಯೋಜಕ ಕೇಶವಮೂರ್ತಿ, ತಾಂತ್ರಿಕ ಸಹಾಯಕರಾದ ಸುಭಾಷ್ ಮತ್ತು ವೀರೇಶ್, ಐಇಸಿ ಸಂಯೋಜಕ ಯಂಕಪ್ಪ, ಬಿಎಫ್‌ಟಿ ಸಿಬ್ಬಂದಿ, ಜಿಕೆಎಂಎಸ್ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬರಗಾಲದಂತಹ ಸಂಕಷ್ಟದ ಸಮಯದಲ್ಲಿಯೂ ರಜಾ ದಿನಗಳನ್ನು ಲೆಕ್ಕಿಸದೆ ಗ್ರಾಮಗಳಿಗೆ ಭೇಟಿ ನೀಡಿ ಕಾರ್ಮಿಕರಲ್ಲಿ ಆತ್ಮವಿಶ್ವಾಸ ಮೂಡಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಅವರ ಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments