Monday, July 27, 2026
HomeDistrictsBallariಹಂಪಿ ಸಾವಿರ ಮಠದಲ್ಲಿ ಸಂತ ಶಿಶುನಾಳ ಶರೀಫರ ಹಾಗೂ ಸಿದ್ಧಾಂತ ಶಿಖಾಮಣಿ ಪ್ರವಚನ ಪುರಾಣ ಪ್ರಾರಂಭೋತ್ಸವ

ಹಂಪಿ ಸಾವಿರ ಮಠದಲ್ಲಿ ಸಂತ ಶಿಶುನಾಳ ಶರೀಫರ ಹಾಗೂ ಸಿದ್ಧಾಂತ ಶಿಖಾಮಣಿ ಪ್ರವಚನ ಪುರಾಣ ಪ್ರಾರಂಭೋತ್ಸವ

ವರದಿ: ವಿ.ಎಂ. ಗಣೇಶ್, ಕಂಪ್ಲಿ

ಕಂಪ್ಲಿ: ಸತ್ಯದ ಮಾರ್ಗದಲ್ಲಿ ಸಾಗಲು ಆಧ್ಯಾತ್ಮಿಕ ಪ್ರವಚನಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದ್ದು, ಅವು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ ಎಂದು ಹಂಪಿ ಸಾವಿರ ಮಠದ ಪೀಠಾಧಿಪತಿ ವಾಮದೇವ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಸಮೀಪದ ಎಮ್ಮಿಗನೂರು ಗ್ರಾಮದ ಹಂಪಿ ಸಾವಿರ ದೇವರ ಮಹಂತರ ಮಠದಲ್ಲಿ ಭಾನುವಾರ, ಲಿಂಗೈಕ್ಯ ಶ್ರೀ ಗುರು ಸಿದ್ದಲಿಂಗ ಶಿವಾಚಾರ್ಯರ 25ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಆಯೋಜಿಸಿದ್ದ ಭಾವೈಕ್ಯ ಚಕ್ರವರ್ತಿ ಸಂತ ಶಿಶುನಾಳ ಶರೀಫರ ಹಾಗೂ ಸಿದ್ಧಾಂತ ಶಿಖಾಮಣಿ ಪ್ರವಚನ ಪುರಾಣ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂತ ಶಿಶುನಾಳ ಶರೀಫರು ತಮ್ಮ ತತ್ವಪದಗಳ ಮೂಲಕ ಸಮಾಜಕ್ಕೆ ಅಮೂಲ್ಯ ಸಂದೇಶಗಳನ್ನು ನೀಡಿದ್ದು, ಮೂಢನಂಬಿಕೆಗಳನ್ನು ವಿರೋಧಿಸಿ, ಜಾತಿ ವ್ಯವಸ್ಥೆಯನ್ನು ಖಂಡಿಸಿ, ಹಿಂದೂ–ಮುಸ್ಲಿಂ ಭಾವೈಕ್ಯತೆಗೆ ಶ್ರಮಿಸಿದ ಮಹಾನ್ ಸಂತರು ಎಂದು ಅವರು ಹೇಳಿದರು. “ಸೊರುತಿಹುದು ಮನೆಯ ಮಾಳಿಗೆ”, “ಗುಡುಗುಡಿಯ ಸೇದಿ ನೋಡು”, “ಕೋಳಿ ಕೂಗಿತೋ” ಸೇರಿದಂತೆ ಅವರ ಅನೇಕ ತತ್ವಪದಗಳು ಇಂದಿಗೂ ಜನಮನಗಳಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಮಸ್ಕಿಯ ರುದ್ರಮುನಿ ಶಿವಾಚಾರ್ಯರು ಉದ್ಘಾಟಿಸಿ ಮಾತನಾಡಿ, ಮನುಷ್ಯನ ಬದುಕು ಸನ್ಮಾರ್ಗದಲ್ಲಿ ಸಾಗಬೇಕಾದರೆ ಪ್ರತಿಯೊಬ್ಬರೂ ಮಂಗಳಕರ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಚ್. ವೀರಾಪುರ ಜ್ಞಾನಜ್ಯೋತಿ ಶಿವಲಿಂಗ ಜಡೇಶ ತಾತ, ಇಟಗಿಯ ಭೂಕೈಲಾಸ ಮಠದ ಶ್ರೀ ಗುರು ಶಾಂತವೀರ ಶಿವಾಚಾರ್ಯರು, ಗುಲ್ಬರ್ಗದ ಚಂದ್ರಶೇಖರ ಸ್ವಾಮಿಗಳು, ಪೂರತಗೇರಿಯ ಕೈಲಾಸಲಿಂಗ ಶಿವಾಚಾರ್ಯರು, ಬಳ್ಳಾರಿಯ ಹೃದಯ ತಜ್ಞ ವೈದ್ಯ ಡಾ. ಎನ್. ಕೊಟ್ರೇಶ್, ಎಲುಬು ಮತ್ತು ಕೀಲು ತಜ್ಞ ಡಾ. ಎಚ್. ದೇವೇಂದ್ರಪ್ಪ, ಸಿರುಗುಪ್ಪದ ಚಿಂತಗುಂಟ ಸಿದ್ದೇಶ್, ಕುರೆಕೊಪ್ಪದ ಶರಣಪ್ಪ ತಾತ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗುತ್ತಿಗನೂರು, ಕಂಪ್ಲಿ, ಕುರುಗೋಡು, ಬಾದನಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಎಸ್. ರಾಮು ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments