ಸಂಡೂರು, ಜು.31: ರಾಜ್ಯದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬರ ಪರಿಸ್ಥಿತಿ ಪರಿಶೀಲನೆ ಪ್ರವಾಸದ ಎರಡನೇ ದಿನದ ಅಂಗವಾಗಿ ಬಳ್ಳಾರಿ ಜಿಲ್ಲೆಯ ಕರೆಕಲ್ ಗ್ರಾಮಕ್ಕೆ ಭೇಟಿ ನೀಡಿ, ಬರದಿಂದ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಲಾಯಿತು.
ಅಧಿಕಾರಿಗಳೊಂದಿಗೆ ರೈತರ ಹೊಲಗಳಿಗೆ ತೆರಳಿದ ಅವರು, ಬೆಳೆ ನಷ್ಟದ ಪ್ರಮಾಣವನ್ನು ವೀಕ್ಷಿಸಿ ರೈತರ ಅಹವಾಲುಗಳನ್ನು ಆಲಿಸಿದರು.
ಹೊಲದ ಮಧ್ಯೆ ಒಣಗಿ ನಿಂತಿದ್ದ ಬೆಳೆಗಳು, ನೀರಿನ ಕೊರತೆಯಿಂದ ಬಾಡಿಹೋಗಿರುವ ಜಮೀನುಗಳು ಹಾಗೂ ಕಣ್ಣೀರಿನಲ್ಲಿ ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದ ರೈತರನ್ನು ಕಂಡು ಮನಸ್ಸಿಗೆ ಅಪಾರ ನೋವಾಗಿದೆ ಎಂದು ಆರ್. ಅಶೋಕ್ ಹೇಳಿದರು.

ತಿಂಗಳುಗಳ ಕಾಲ ಶ್ರಮಪಟ್ಟು, ಸಾಲ ಮಾಡಿ, ಅಪಾರ ನಿರೀಕ್ಷೆಯೊಂದಿಗೆ ಬೆಳೆ ಬೆಳೆದ ರೈತರು ಇಂದು ಸಂಪೂರ್ಣ ನಷ್ಟ ಅನುಭವಿಸುವಂತಾಗಿದೆ. ಇದು ಅನ್ನದಾತನ ಅಸಹಾಯಕ ಪರಿಸ್ಥಿತಿಗೆ ಜೀವಂತ ಸಾಕ್ಷಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಅನೇಕ ಭಾಗಗಳಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ರೈತರು ಮತ್ತು ಗ್ರಾಮೀಣ ಜನತೆ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ತಕ್ಷಣ ಸ್ಪಂದಿಸಿ ರೈತರ ನೆರವಿಗೆ ಧಾವಿಸಬೇಕಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಸಂಕಷ್ಟಕ್ಕಿಂತ ಅಧಿಕಾರದ ರಾಜಕೀಯವೇ ಮುಖ್ಯವಾಗಿದೆ ಎಂದು ಅವರು ಆರೋಪಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಅಧಿಕಾರ ಹಂಚಿಕೆ ಮತ್ತು ರಾಜಕೀಯ ಚರ್ಚೆಗಳಲ್ಲಿ ನಿರತರಾಗಿದ್ದು, ರಾಜ್ಯದ ರೈತರ ಸಂಕಷ್ಟವನ್ನು ಕಡೆಗಣಿಸಿರುವುದು ಅತ್ಯಂತ ದುರಾದೃಷ್ಟಕರ ಬೆಳವಣಿಗೆಯಾಗಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಕೂಡಲೇ ಬರಪೀಡಿತ ಪ್ರದೇಶಗಳಲ್ಲಿ ಸಮಗ್ರ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು. ರೈತರಿಗೆ ಯಾವುದೇ ವಿಳಂಬವಿಲ್ಲದೆ ಬೆಳೆ ಪರಿಹಾರ, ಬೆಳೆ ವಿಮೆ, ಬಡ್ಡಿರಹಿತ ಸಾಲ ಸೌಲಭ್ಯ ಹಾಗೂ ಅಗತ್ಯ ಪರಿಹಾರ ಪ್ಯಾಕೇಜ್ ಘೋಷಿಸಿ ನೆರವು ನೀಡಬೇಕು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಅನ್ನದಾತನ ಬದುಕು ಉಳಿಸುವುದು ಯಾವುದೇ ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದರು.
ಪರಿಶೀಲನೆ ವೇಳೆ ರೈತರು ತಮ್ಮ ಸಮಸ್ಯೆಗಳು, ಬೆಳೆ ನಷ್ಟ, ನೀರಿನ ಅಭಾವ ಹಾಗೂ ಸರ್ಕಾರದಿಂದ ಸಮರ್ಪಕ ಪರಿಹಾರ ದೊರೆಯದಿರುವ ಕುರಿತು ಅಹವಾಲು ಸಲ್ಲಿಸಿದರು. ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಆರ್. ಅಶೋಕ್, ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ದೊರಕಿಸಲು ಹೋರಾಟ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ. ಜನಾರ್ಧನ್ ರೆಡ್ಡಿ, ಬಿ.ಪಿ. ಹರೀಶ್, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಕೃಷ್ಣ ನಾಯಕ್, ಕೆ.ಎಸ್. ನವೀನ್, ಸೋಮಶೇಖರ್ ರೆಡ್ಡಿ, ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ತಾಲೂಕು ಅಧ್ಯಕ್ಷ ಅಶೋಕ್ ಕುಮಾರ್, ಸಂಬಂಧಿತ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಉಪಸ್ಥಿತರಿದ್ದರು.
