Thursday, August 6, 2026
HomeDistrictsBallariಹೆರಿಗೆಯಾದ ಒಂದು ತಾಸಿನೊಳಗೆ ತಾಯಿಯ ಎದೆಹಾಲು ನೀಡಬೇಕು: ಶಿವಾನಂದ ವಿ.ಪಿ

ಹೆರಿಗೆಯಾದ ಒಂದು ತಾಸಿನೊಳಗೆ ತಾಯಿಯ ಎದೆಹಾಲು ನೀಡಬೇಕು: ಶಿವಾನಂದ ವಿ.ಪಿ

ಬಳ್ಳಾರಿ,ಆ.06: ಹೆರಿಗೆಯಾದ ಒಂದು ತಾಸಿನೊಳಗೆ ನವಜಾತ ಶಿಶುವಿಗೆ ತಾಯಿಯ ಎದೆಹಾಲು ಮಾತ್ರ ನೀಡಬೇಕು. ಜನನದ ನಂತರ ಮೊದಲ ಆರು ತಿಂಗಳವರೆಗೆ ಎದೆಹಾಲನ್ನು ಮಾತ್ರ ಕುಡಿಸಿ, ಬೇರೆ ಯಾವುದೇ ದ್ರವ ಪದಾರ್ಥ ಅಥವಾ ನೀರನ್ನು ಸಹ ನೀಡಬಾರದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್‌ಸಿಎಚ್ ವಿಭಾಗ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮರಿಸ್ವಾಮಿ ಮಠ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬೀರಪ್ಪ ಮಠ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎದೆಹಾಲು ಮಗುವಿನ ಸಂಪೂರ್ಣ ಬೆಳವಣಿಗೆಗೆ ಅತ್ಯುತ್ತಮ ಪೌಷ್ಟಿಕ ಆಹಾರವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅತಿಸಾರ ಸೇರಿದಂತೆ ವಿವಿಧ ಸೋಂಕುಗಳಿAದ ಮಗುವನ್ನು ರಕ್ಷಿಸುವುದರ ಜೊತೆಗೆ ತಾಯಿ-ಮಗುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಆರು ತಿಂಗಳ ನಂತರ ಒಂದು ವರ್ಷದವರೆಗೆ ಎದೆಹಾಲಿನ ಜೊತೆಗೆ ಮನೆಯಲ್ಲೇ ತಯಾರಿಸಿದ ಗಂಜಿ ಹಾಗೂ ಪೂರಕ ಆಹಾರವನ್ನು ನೀಡಬೇಕು. ಒಂದು ವರ್ಷದಿಂದ ಎರಡು ವರ್ಷದವರೆಗೆ ಎದೆಹಾಲಿನೊಂದಿಗೆ ಮೃದು ಆಹಾರವನ್ನು ನೀಡುವುದು ಅಗತ್ಯ ಎಂದು ಹೇಳಿದರು.

ಎದೆ ಹಾಲುಣಿಸುವುದರಿಂದ ತಾಯಿಯ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿದ್ದು, ಸ್ತನ ಕ್ಯಾನ್ಸರ್ ಅಪಾಯ ಕಡಿಮೆಯಾಗುವುದರ ಜೊತೆಗೆ ಮುಂದಿನ ಗರ್ಭಧಾರಣೆ ಸ್ವಾಭಾವಿಕವಾಗಿ ಮುಂದೂಡಲು ಸಹಕಾರಿಯಾಗುತ್ತದೆ. ಶಿಶು ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ಸ್ತನ್ಯಪಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

‘ಸ್ತನ್ಯಪಾನ-ತಾಯಿಯ ಮಮತೆಯ ಪ್ರತೀಕ, ಸ್ತನ್ಯಪಾನ ರಕ್ಷಣೆ ಎಲ್ಲರ ಜವಾಬ್ದಾರಿ’ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಈ ವರ್ಷದಿಂದ ವಿಶ್ವ ಸ್ತನ್ಯಪಾನ ಸಪ್ತಾಹದ ಘೋಷ್ಯವಾಕ್ಯ ‘ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ: ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ’ ಎಂಬುದಾಗಿದ್ದು, ತಾಯಿಯ ಹಾಲನ್ನೇ ನೀಡುವ ಪದ್ಧತಿಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಮಕ್ಕಳಿಗೆ ಉತ್ತಮ ಪೌಷ್ಟಿಕತೆ ಮತ್ತು ರೋಗ ನಿರೋಧಕ ಶಕ್ತಿ ಒದಗಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಎಸ್. ಕರ್ಜಗಿ ಮಾತನಾಡಿ, ಗರ್ಭಿಣಿಯರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರ ಜೊತೆಗೆ ಪೌಷ್ಟಿಕ ಆಹಾರ ಸೇವಿಸಬೇಕು. ಆಹ್ಲಾದಕರ ಕುಟುಂಬ ವಾತಾವರಣದಲ್ಲಿ ಇರುವುದರಿಂದ ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉತ್ತಮವಾಗುತ್ತದೆ ಎಂದರು.
ಬಾಣಂತಿಯರು ಎದೆಹಾಲುಣಿಸಿದರೆ ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆಗೆ ಅವಕಾಶ ನೀಡಬಾರದು. ಎದೆಹಾಲುಣಿಸುವುದರಿಂದ ತಾಯಿಯ ಆರೋಗ್ಯ ಉತ್ತಮವಾಗುವುದರ ಜೊತೆಗೆ ಸ್ತನ ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗುತ್ತದೆ. ಗರ್ಭಿಣಿಯರು ಕಡ್ಡಾಯವಾಗಿ ಅಯೋಡಿನ್‌ಯುಕ್ತ ಉಪ್ಪನ್ನೇ ಬಳಸಬೇಕು ಹಾಗೂ ಮಕ್ಕಳಿಗೆ 12 ಮಾರಕ ರೋಗಗಳಿಂದ ರಕ್ಷಣೆ ನೀಡುವ ಎಲ್ಲಾ ಲಸಿಕೆಗಳನ್ನು ನಿಗದಿತ ವೇಳೆಗೆ ತಪ್ಪದೇ ಹಾಕಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಸಿಮ್ರಾನ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಹಾಂಕಾಳಿ, ಶೋಭಾ ವಿ., ಹನುಮಂತಮ್ಮ, ಶಾಲಾ ಶಿಕ್ಷಕಿ ನಜ್ಮಾಭಾನು, ಅಂಗನವಾಡಿ ಕಾರ್ಯಕರ್ತೆ ಮಹಾಲಕ್ಷ್ಮಿ ಹಾಗೂ ಆಶಾ ಕಾರ್ಯಕರ್ತೆಯರಾದ ಮಂಜುಳಾ, ಶಂಕ್ರಮ್ಮ, ಮಹಾಲಕ್ಷ್ಮಿ ಮತ್ತು ಗೀತಾ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments