[ವರದಿ : ವಿಜಯವಾಣಿ]
ಹೊಸಪೇಟೆ: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳದಲ್ಲಿ ‘ಶುದ್ಧೀಕರಣ’ದ ಹೆಸರಿನಲ್ಲಿ ಹವನ ನಡೆಸಿರುವುದನ್ನು ಖಂಡಿಸಿ ಛಲವಾದಿ ಮಹಾಸಭಾದ ವಿಜಯನಗರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಆ.8ರಂದು ಮಲ್ಲಿಕಾರ್ಜುನ ಖರ್ಗೆ ಅವರು ಹಲ್ದ್ವಾನಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದರು. ಇದಾದ ಎರಡು ದಿನಗಳ ಬಳಿಕ, ಆ.10ರಂದು ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್ ಸಂಘಟನೆಯವರು ಅದೇ ಸ್ಥಳದಲ್ಲಿ ‘ಶುದ್ಧೀಕರಣ’ದ ಹೆಸರಿನಲ್ಲಿ ಹವನ ನಡೆಸಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ದಲಿತ ಸಮುದಾಯದ ಹಿರಿಯ ರಾಷ್ಟ್ರೀಯ ನಾಯಕರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸುವ ನೆಪದಲ್ಲಿ ನಡೆದಿರುವ ಈ ಕೃತ್ಯವು ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯತೆಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಛಲವಾದಿ ಮಹಾಸಭಾ ಆತಂಕ ವ್ಯಕ್ತಪಡಿಸಿದೆ.
ಘಟನೆಯ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಕೃತ್ಯದ ಹಿಂದೆ ಜಾತಿ ಆಧಾರಿತ ತಾರತಮ್ಯ ಅಥವಾ ಅಸ್ಪೃಶ್ಯತೆಯ ಉದ್ದೇಶವಿರುವುದು ತನಿಖೆಯಿಂದ ದೃಢಪಟ್ಟಲ್ಲಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಾಸಭಾ ಒತ್ತಾಯಿಸಿದೆ.
ಅಲ್ಲದೆ, ಸಂವಿಧಾನದ ವಿಧಿ 14ರ ಸಮಾನತೆ, ವಿಧಿ 15ರ ತಾರತಮ್ಯ ನಿಷೇಧ ಹಾಗೂ ವಿಧಿ 17ರ ಅಸ್ಪೃಶ್ಯತೆ ನಿಷೇಧದ ಆಶಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಅಸ್ಪೃಶ್ಯತೆ ವಿರೋಧಿ ಕಾನೂನುಗಳ ಕುರಿತು ವ್ಯಾಪಕ ಜನಜಾಗೃತಿ ಮೂಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ವಿಜಯನಗರ ಜಿಲ್ಲಾಧ್ಯಕ್ಷ ಅಜ್ಜಯ್ಯ ಹೊಟ್ಟೆರ್, ಪ್ರಧಾನ ಕಾರ್ಯದರ್ಶಿ ಸಿ. ರಮೇಶ್, ಉಪಾಧ್ಯಕ್ಷರಾದ ಮುನಿಯಪ್ಪ, ರಾಮಕೃಷ್ಣ, ಮತ್ತಿಹಳ್ಳಿ ಕೆಂಚಪ್ಪ, ನಾಗರಾಜ್, ಕೆಂಗರಾಜ್, ನರಸಿಂಗಿರಿ, ಪ್ರಹ್ಲಾದ್, ಜಿಲ್ಲಾ ಪತ್ರಕರ್ತ ವೆಂಕಟೇಶ್, ಮುಖಂಡರಾದ ಕಂಚಿಕೇರಿ ಹನುಮಂತಪ್ಪ, ಗುಂಡಗತಿ ಚಂದ್ರಪ್ಪ, ಸುಪುತ್ರ, ಸೋಗಿ ಮಹೇಶ್, ಈರಣ್ಣ ಸೇರಿದಂತೆ ವಿಜಯನಗರ ಜಿಲ್ಲೆಯ ಛಲವಾದಿ ಸಮುದಾಯದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
