Saturday, August 15, 2026
HomeVijayanagaraಹೊಸಪೇಟೆ ತಾಲೂಕಿನಲ್ಲಿ ಆ.15ರಿಂದ ಜಾಬ್ ಕಾರ್ಡ್ ಮೇಳ: ಎಂ.ಡಿ. ಆಲಂಬಾಷಾ

ಹೊಸಪೇಟೆ ತಾಲೂಕಿನಲ್ಲಿ ಆ.15ರಿಂದ ಜಾಬ್ ಕಾರ್ಡ್ ಮೇಳ: ಎಂ.ಡಿ. ಆಲಂಬಾಷಾ

ಹೊಸಪೇಟೆ: ಗ್ರಾಮೀಣ ಜನತೆಯ ವಲಸೆ ತಡೆಯುವುದರ ಜೊತೆಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಆರ್‌ಡಿಪಿಆರ್‌ ಇಲಾಖೆ ವತಿಯಿಂದ ಆಗಸ್ಟ್ 15ರಿಂದ ಹೊಸಪೇಟೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ. ಆಲಂಬಾಷಾ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜುಲೈ 1, 2026ರಿಂದ ಜಾರಿಗೆ ಬಂದಿರುವ ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ ಗ್ರಾಮೀಣ (ವಿಬಿ-ಜಿ ರಾಮ್ ಜಿ) ಯೋಜನೆಯಡಿ ನೋಂದಾಯಿಸಿಕೊಂಡು ಇ-ಕೆವೈಸಿ ಪೂರ್ಣಗೊಳಿಸಿರುವ ಕೂಲಿಕಾರರಿಗೆ ಅಕುಶಲ ಉದ್ಯೋಗ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹೊಸಪೇಟೆ ತಾಲೂಕಿನಲ್ಲಿ ಒಟ್ಟು 46,014 ಮಂದಿ ಉದ್ಯೋಗಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 27,266 ಕುಟುಂಬಗಳು ಮಾತ್ರ ಸಕ್ರಿಯವಾಗಿವೆ. ಸಕ್ರಿಯ ಕುಟುಂಬಗಳ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸಿ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪ್ರತಿದಿನ ಕನಿಷ್ಠ 100 ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಭಿಯಾನದ ಮೂಲಕ ವಿಬಿ-ಜಿ ರಾಮ್ ಜಿ ಯೋಜನೆಯಡಿ ಲಭ್ಯವಿರುವ ಅಕುಶಲ ಉದ್ಯೋಗ ಹಾಗೂ ವೈಯಕ್ತಿಕ ಸವಲತ್ತುಗಳ ಕುರಿತು ಗ್ರಾಮೀಣ ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಾಸಿಕವಾಗಿ 3ರಿಂದ 4 ಸಾವಿರ ಮಾನವ ದಿನಗಳ ಉದ್ಯೋಗ ಒದಗಿಸುವ ಮೂಲಕ ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ಹಾಗೂ ಜೀವನೋಪಾಯದ ಭದ್ರತೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಅಲ್ಲದೆ, ಬರ ಪರಿಸ್ಥಿತಿಯನ್ನು ಎದುರಿಸಲು ಜಲಸಂರಕ್ಷಣೆ, ಅಂತರ್ಜಲ ಮರುಪೂರಣ ಹಾಗೂ ದೀರ್ಘಕಾಲಿಕ ಜೀವನೋಪಾಯಕ್ಕೆ ನೆರವಾಗುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಆಲಂಬಾಷಾ ತಿಳಿಸಿದ್ದಾರೆ.

ಅಭಿಯಾನದ ಅವಧಿಯಲ್ಲಿ ಸಕ್ರಿಯವಾಗಿರದ ಕುಟುಂಬಗಳ ಪಟ್ಟಿಯನ್ನು ಸಿದ್ಧಪಡಿಸಿ ಮನೆಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಡಂಗೂರ ಸಾರುವುದು, ಸ್ವಚ್ಛತಾ ವಾಹನಗಳ ಮೂಲಕ ಜಿಂಗಲ್ಸ್‌ ಪ್ರಸಾರ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದೆ.

ಜಾಬ್ ಕಾರ್ಡ್ ಪಡೆಯಲು ಏನು ಮಾಡಬೇಕು?

ಜಾಬ್ ಕಾರ್ಡ್ ಹೊಂದಿರದ ಕುಟುಂಬಗಳು ತಮ್ಮ ಗ್ರಾಮ ಪಂಚಾಯಿತಿಯಲ್ಲಿ ನಮೂನೆ-1 ಪಡೆದು ಭರ್ತಿ ಮಾಡಬೇಕು. ಜೊತೆಗೆ ಇ-ಕೆವೈಸಿ ಪೂರ್ಣಗೊಂಡಿರುವ ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್, ರೇಷನ್ ಕಾರ್ಡ್‌ನ ನಕಲು ಪ್ರತಿ ಹಾಗೂ ಎರಡು ಭಾವಚಿತ್ರಗಳನ್ನು ಸಲ್ಲಿಸಿ ಹೊಸ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ಪಡೆಯಬಹುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ. ಆಲಂಬಾಷಾ ಮಾಹಿತಿ ನೀಡಿದ್ದಾರೆ.

ಗ್ರಾಮೀಣ ಭಾಗದ ಅರ್ಹ ಕೂಲಿಕಾರರು ಜಾಬ್ ಕಾರ್ಡ್ ಮೇಳದ ಸದುಪಯೋಗ ಪಡೆದುಕೊಂಡು ಸ್ಥಳೀಯ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕಿ ಕವಿತಾ ಕರ್ಣಂ, ತಾಲೂಕು ಪಂಚಾಯಿತಿ ಸಿಬ್ಬಂದಿ, ಐಇಸಿ ಸಂಯೋಜಕ ಹೆಚ್. ನಾಗರಾಜ, ತಾಂತ್ರಿಕ ಸಂಯೋಜಕ ಆನಂದ ಕುಮಾರ್ ಹಾಗೂ ನರೇಗಾ ಸಿಬ್ಬಂದಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments