ಹೊಸಪೇಟೆ, ಆ.29: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಡಣನಾಯಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಳ್ಳಿ ಗ್ರಾಮದ ಬಸವನದುರ್ಗ ಕೆರೆಯ ಪುನಶ್ಚೇತನ ಕಾಮಗಾರಿಗೆ VB-G RAM G ಯೋಜನೆಯಡಿ ಚುರುಕು ದೊರೆತಿದ್ದು, ಕಾಮಗಾರಿಯಲ್ಲಿ ತೊಡಗಿರುವ 185 ಮಂದಿ ಕೂಲಿ ಕಾರ್ಮಿಕರು ಅಚ್ಚುಕಟ್ಟಾಗಿ ಹಾಗೂ ಗುಣಮಟ್ಟದಿಂದ ಕೆಲಸ ನಿರ್ವಹಿಸುತ್ತಿರುವುದಕ್ಕೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೊಲ್ಲರಹಳ್ಳಿ ಗ್ರಾಮದ ಬಸವನದುರ್ಗ ಕೆರೆಯಲ್ಲಿ ನಡೆಯುತ್ತಿರುವ ಪುನಶ್ಚೇತನ ಕಾಮಗಾರಿಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ. ಆಲಂಬಾಷಾ ಹಾಗೂ ಸಹಾಯಕ ನಿರ್ದೇಶಕಿ (ಗ್ರಾ.ಉ) ಕವಿತಾ ಕರ್ಣಂ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿಯ ಪ್ರಗತಿ, ಕಾರ್ಮಿಕರ ಹಾಜರಾತಿ ಹಾಗೂ ಕೆಲಸದ ಗುಣಮಟ್ಟವನ್ನು ಪರಿಶೀಲಿಸಿದ ಅಧಿಕಾರಿಗಳು, ಕಾಮಗಾರಿ ಉತ್ತಮ ರೀತಿಯಲ್ಲಿ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಕಾಮಗಾರಿಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರೊಂದಿಗೆ ಅಧಿಕಾರಿಗಳು ಕೆಲಕಾಲ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಕೆಲಸವನ್ನು ಅಚ್ಚುಕಟ್ಟಾಗಿ ಹಾಗೂ ಗುಣಮಟ್ಟದಿಂದ ನಿರ್ವಹಿಸುವಂತೆ ಸಲಹೆ ನೀಡಿದರು.
‘ಗುಳೆ ಹೋಗುವುದು ತಪ್ಪಿದೆ’ ಎಂದ ಕಾರ್ಮಿಕರು:
ಅಧಿಕಾರಿಗಳೊಂದಿಗೆ ಮಾತನಾಡಿದ ಕೂಲಿ ಕಾರ್ಮಿಕರಾದ ಹನುಮಂತ ಹಾಗೂ ಯಶೋಧ ಅವರು, ಯೋಜನೆಯಡಿ ಸ್ಥಳೀಯವಾಗಿಯೇ ನಿರಂತರವಾಗಿ ಉದ್ಯೋಗ ದೊರೆಯುತ್ತಿರುವುದರಿಂದ ಗುಳೆ ಹೋಗುವ ಪರಿಸ್ಥಿತಿ ತಪ್ಪಿದೆ ಎಂದು ಸಂತಸ ವ್ಯಕ್ತಪಡಿಸಿದರು.
“ಸ್ಥಳೀಯವಾಗಿ ಕೆಲಸ ದೊರೆಯುತ್ತಿರುವುದರಿಂದ ನಮ್ಮ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗಿದೆ. ಕೆಲಸಕ್ಕಾಗಿ ಬೇರೆ ಊರುಗಳಿಗೆ ಗುಳೆ ಹೋಗಬೇಕಾದ ಪರಿಸ್ಥಿತಿ ತಪ್ಪಿದೆ. ಇಲ್ಲಿನ ಕೆಲಸ ದೊರೆಯದೇ ಇದ್ದಿದ್ದರೆ ಶಾಲೆಗೆ ಹೋಗುವ ಮಕ್ಕಳನ್ನೂ ನಮ್ಮೊಂದಿಗೆ ಕರೆದುಕೊಂಡು ಬೇರೆಡೆಗೆ ಗುಳೆ ಹೋಗಬೇಕಾಗುತ್ತಿತ್ತು. ಈಗ ಸ್ಥಳೀಯವಾಗಿ 125 ದಿನಗಳವರೆಗೆ ಕೆಲಸ ದೊರೆಯುತ್ತಿದೆ. ದಿನಕ್ಕೆ ₹382 ಕೂಲಿ ಸಿಗುತ್ತಿದೆ” ಎಂದು ಅವರು ತಿಳಿಸಿದರು.
ಅಲ್ಲದೆ, ತಾವು ನಿರ್ವಹಿಸಿದ ಕೆಲಸದ ಕೂಲಿ ವೇತನವನ್ನು ಸಕಾಲದಲ್ಲಿ ಪಾವತಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಕಾರ್ಮಿಕರು ನಿರ್ವಹಿಸಿದ ಕೆಲಸಕ್ಕೆ ಅನುಗುಣವಾಗಿ ಅವರಿಗೆ ಪಾವತಿಸಬೇಕಾದ ಕೂಲಿ ಮೊತ್ತವನ್ನು ಪಾವತಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ಭರವಸೆ ನೀಡಿದರು.
ಮನೆ ಮನೆಗೆ ತೆರಳಿ ಜಾಬ್ ಕಾರ್ಡ್ ಅಭಿಯಾನ
ತಾಲ್ಲೂಕಿನಾದ್ಯಂತ VB-G RAM G ಯೋಜನೆಯ ಪ್ರಯೋಜನವನ್ನು ಅರ್ಹ ಗ್ರಾಮೀಣ ಕುಟುಂಬಗಳಿಗೆ ತಲುಪಿಸುವ ನಿಟ್ಟಿನಲ್ಲಿ ಆಗಸ್ಟ್ 15ರಿಂದ ಸೆಪ್ಟೆಂಬರ್ವರೆಗೆ ಜಾಬ್ ಕಾರ್ಡ್ ಮೇಳ ಅಭಿಯಾನ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಅಭಿಯಾನದಡಿ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಹಾಗೂ ಸಂಬಂಧಿಸಿದ ತಂಡಗಳು ಮನೆ ಮನೆಗೆ ಭೇಟಿ ನೀಡಿ ಯೋಜನೆಯ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಿದ್ದಾರೆ. ಹೊಸ ಜಾಬ್ ಕಾರ್ಡ್ ಪಡೆಯಲು ನಮೂನೆ-1ರಲ್ಲಿ ಅರ್ಜಿ ಸಲ್ಲಿಸುವ ಕುರಿತು ಅರಿವು ಮೂಡಿಸಲಾಗುತ್ತಿದೆ.
ಯೋಜನೆಯಡಿ ಲಭ್ಯವಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುತ್ತಿದ್ದು, ಒಟ್ಟು 318 ವಿವಿಧ ಕಾಮಗಾರಿಗಳ ಅವಕಾಶಗಳಿದ್ದು, ಅರ್ಹರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಅಧಿಕಾರಿಗಳು ಕರೆ ನೀಡಿದರು.
ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವ ಮೂಲಕ ಅವರ ಕುಟುಂಬಗಳ ಆರ್ಥಿಕ ಸ್ಥಿತಿಗೆ ನೆರವಾಗುವುದರ ಜೊತೆಗೆ, ಉದ್ಯೋಗಕ್ಕಾಗಿ ನಗರ ಹಾಗೂ ದೂರದ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಡೆಯಲು ಇಂತಹ ಯೋಜನೆಗಳು ಸಹಕಾರಿಯಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು.
ಕೂಲಿಕಾರರಿಂದ ರಾಖಿ ಕಟ್ಟಿಸಿ ರಕ್ಷಾ ಬಂಧನ ಆಚರಣೆ:
ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಳದಲ್ಲಿ ವಿಶೇಷ ಆತ್ಮೀಯ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮೀಣ ಕೂಲಿ ಕಾರ್ಮಿಕರು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆತ್ಮೀಯವಾಗಿ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು.
ಕಾರ್ಮಿಕರ ಈ ಆತ್ಮೀಯತೆಗೆ ಐಇಸಿ ಸಂಯೋಜಕರು ಧನ್ಯವಾದಗಳನ್ನು ಸಲ್ಲಿಸಿದರು. ಅಧಿಕಾರಿಗಳು ಮತ್ತು ಕೂಲಿ ಕಾರ್ಮಿಕರ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿದ್ದು, ಕಾಮಗಾರಿ ಸ್ಥಳದಲ್ಲಿ ಹಬ್ಬದ ಸಂಭ್ರಮವೂ ಕಂಡುಬಂತು.
ಈ ಸಂದರ್ಭದಲ್ಲಿ ಡಣನಾಯಕನಕೆರೆ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿಲಾನ್ ಸಾಹೇಬ್, ತಾಲ್ಲೂಕು ಪಂಚಾಯಿತಿ ಐಇಸಿ ಸಂಯೋಜಕ ಹೆಚ್. ನಾಗರಾಜ್, ತಾಂತ್ರಿಕ ಸಂಯೋಜಕ ಆನಂದಕುಮಾರ್ ಎ.ಎಸ್., ತಾಂತ್ರಿಕ ಸಹಾಯಕ ಸುರೇಶ್, ಬಿಎಫ್ಟಿ ದಾದಕಲಂದರ್, ಜಿಕೆಎಂ ಮಹೇಶಿ, ಕಾಯಕಬಂಧುಗಳಾದ ನಾಗರಾಜ್, ಶಿವರಾಜ್, ಕುಮಾರ್, ಮಂಜುನಾಥ್, ಬಿ. ಕಾಳೇಶ್ರಿ ಸೇರಿದಂತೆ VB-G RAM G ಯೋಜನೆಯ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.
