[ವರದಿ: ಜಿ.ಎಂ. ಬಸಯ್ಯ]
ಪಟ್ಟಣ: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುದೀರ್ಘ 21 ವರ್ಷಗಳ ಕಾಲ ಭೂಗೋಳ ಶಾಸ್ತ್ರ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕಿ ರತ್ನಾಪ್ರಭಾ ಆರ್. ಮಳೇಕರ್ ಅವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು.
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ರತ್ನಾಪ್ರಭಾ ಆರ್. ಮಳೇಕರ್, “21 ವರ್ಷಗಳ ಕಾಲ ಶಿಕ್ಷಕಿಯಾಗಿ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಿರುವುದು ನನಗೆ ಅತ್ಯಂತ ಸಂತಸ ಹಾಗೂ ತೃಪ್ತಿ ನೀಡಿದೆ. ಮಕ್ಕಳು ಹಾಗೂ ಸಹೋದ್ಯೋಗಿ ಶಿಕ್ಷಕರು ತೋರಿದ ಪ್ರೀತಿ ಮತ್ತು ಗೌರವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಭಾವುಕರಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರು ರತ್ನಾಪ್ರಭಾ ಅವರಿಗೆ ಶುಭಾಶಯಗಳನ್ನು ಕೋರಿ, ಸನ್ಮಾನಿಸಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ವೇಣುಗೋಪಾಲ್ ಎನ್.ಎಸ್. ವಹಿಸಿದ್ದರು. ಸಹ ಶಿಕ್ಷಕರಾದ ಹೆಚ್.ಜಿ. ವಿಶ್ವನಾಥ್ ಗೌಡ, ಗುರುಜಿ ನಡುವಿ, ವೀರೇಶ್, ರಾಘವೇಂದ್ರ ಹಾಗೂ ಮಲ್ಲಿಕಾರ್ಜುನ ಅವರು ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಸಮಾರಂಭದಲ್ಲಿ ಕಾಲೇಜಿನ ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಹಿರಿಯ ಶಿಕ್ಷಕಿಯ ಸೇವೆಯನ್ನು ಸ್ಮರಿಸಿ ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡಿದರು.
