Sunday, October 18, 2026
HomeVijayanagaraನೂತನ ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ರಚಿಸಿ -ಮೋಹನ್ ಕುಮಾರ್ ದಾನಪ್ಪ

ನೂತನ ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ರಚಿಸಿ -ಮೋಹನ್ ಕುಮಾರ್ ದಾನಪ್ಪ

ಬೆಂಗಳೂರು: ಅ17, ರಾಜ್ಯದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ನೂತನ ವಿಜಯನಗರ ಜಿಲ್ಲೆಗೆ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವನ್ನು ರಚಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ

ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವನ್ನು ಭಾರತದ ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿರುವ ನಿರ್ದೇಶನಗಳ ಪ್ರಕಾರ ಅಸ್ತಿತ್ವಕ್ಕೆ ಬಂದಿದ್ದು ಅದರಂತೆ ಕರ್ನಾಟಕ ಪೊಲೀಸ್ ಕಾಯ್ದೆ-1963ಕ್ಕೆ ತಿದ್ದುಪಡಿ ಮಾಡುವ ಮೂಲಕ ರಾಜ್ಯ ಮತ್ತು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ರಚನೆ, ಕರ್ತವ್ಯ, ಅಧಿಕಾರ ವ್ಯಾಪ್ತಿಯನ್ನು ನೀಡಿದ್ದರನ್ವಯ ಕರ್ನಾಟಕ ಸರ್ಕಾರ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವನ್ನು ರಚಿಸಿ ಆದೇಶ ಹೊರಡಿಸಿದ್ದರನ್ವಯ 2013ರಲ್ಲಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ, ಸದರಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳ ಮತ್ತು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಡಿವೈಎಸ್‌ಪಿ ಮತ್ತು ಅದಕ್ಕಿಂತ ಕೆಳದರ್ಜೆಯ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಪೊಲೀಸ್ ಅಭಿರಕ್ಷೆಯಲ್ಲಿ ಸಾವು, ಗಂಭೀರ ಸ್ವರೂಪದ ಗಾಯ, ಅತ್ಯಾಚಾರ ಅಥವಾ ಅತ್ಯಾಚಾರವೆಸಗಲು ಪ್ರಯತ್ನ ಮತ್ತು ಯುಕ್ತ ಕಾನೂನು ಪ್ರಕ್ರಿಯೆಯಿಲ್ಲದೆ ದಸ್ತಗಿರಿ ಮಾಡುವುದು/ಅಕ್ರಮವಾಗಿ ಬಂಧಿಸುವ ಪ್ರಕರಣಗಳಲ್ಲಿನ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ವಿರುದ್ಧದ ದೂರುಗಳ ವಿಚಾರಣೆಗಳನ್ನು ಮಾಡುವ ಅಧಿಕಾರದ ವ್ಯಾಪ್ತಿಯನ್ನು ಹೊಂದಿದ್ದು ಪ್ರಸ್ತುತ ರಾಜ್ಯದ 30 ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ರಚನೆಗೊಂಡು ಕಾರ್ಯನಿರ್ವಹಿಸುತ್ತಿರುತ್ತದೆ,

ಪ್ರಸ್ತುತ ರಾಜ್ಯದ 31ನೇ ನೂತನ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಯು 2021ನೇ ಸಾಲಿನಲ್ಲಿ ಅಸ್ಥಿತ್ವಕ್ಕೆ ಬಂದಿದ್ದು ಅದರಂತೆ ಜಿಲ್ಲಾಧಿಕಾರಿ ಕಛೇರಿ, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಯ ಕಛೇರಿಗಳು ಕಾರ್ಯನಿರ್ವಹಿಸುತ್ತಿರುತ್ತವೆ, ಆದರೆ ವಿಜಯನಗರ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ರಚನೆಯಾಗದಿರುವುದ್ದರಿಂದ ಸದರಿ ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ವಿರುದ್ಧದ ದೂರುಗಳು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಕಛೇರಿಗೆ ಸ್ವೀಕೃತವಾಗುತ್ತಿದ್ದು ರಾಜ್ಯ ಪ್ರಾಧಿಕಾರವು ನಿಯಮಾನುಸಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆಗಿಂತ ಕಡಿಮೆ ದರ್ಜೆಯ ಅಧಿಕಾರಿ ಸಿಬ್ಬಂದಿಗಳ ವಿರುದ್ಧದ ದೂರುಗಳನ್ನು ಪ್ರಸ್ತುತದವರೆಗೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯನ್ನೊಳಗೊಂಡ ಅಖಂಡ ಬಳ್ಳಾರಿ ಜಿಲ್ಲೆಯಿದ್ದ ಸಂದರ್ಭದಲ್ಲಿ ರಚಿತವಾದ ಬಳ್ಳಾರಿ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ವರ್ಗಾಯಿಸುತ್ತಿರುವುದ್ದರಿಂದ ಸದರಿ ವಿಜಯನಗರ ಜಿಲ್ಲೆಯ ಸಾರ್ವಜನಿಕರು ದೂರು ಸಲ್ಲಿಸಲು ಮತ್ತು ವಿಚಾರಣೆಗೆ ಹಾಜರಾಗಲು ಬಳ್ಳಾರಿಗೆ ಪ್ರಯಾಣಿಸಬೇಕಾಗಿರುತ್ತದೆ,

ರಾಜ್ಯದ ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವುದು ಹಾಗೂ ಸಾರ್ವಜನಿಕರಿಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ದುರ್ನಡತೆಯ ವಿರುದ್ಧ ಸುಲಭವಾಗಿ ದೂರು ಸಲ್ಲಿಸಲು ಸೂಕ್ತ ಅವಕಾಶ ಮತ್ತು ವ್ಯವಸ್ಥೆಯನ್ನು ಕಲ್ಪಿಸುವುದು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಪ್ರಮುಖ ಉದ್ದೇಶವಾಗಿರುವುದ್ದರಿಂದ ತ್ವರಿತವಾಗಿ ನೂತನ ವಿಜಯನಗರ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವನ್ನು ರಚನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ!

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments