ಬಳ್ಳಾರಿ,ಸೆ.16:2026ನೇ ಸಾಲಿನ ಶ್ರೀ ಗೌರಿ ಗಣೇಶ ಹಬ್ಬ ಹಾಗೂ ಗಣಪತಿ ವಿಸರ್ಜನೆ ಮೆರವಣಿಗೆಗಳು ಶಾಂತಿಯುತವಾಗಿ ನಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯಾದ್ಯಂತ ನಿಯಮಿತ ದಿನಗಳಂದು ಮದ್ಯ ಮಾರಾಟ, ಸಾಗಾಣಿಕೆ ಹಾಗೂ ಬಾರ್, ರೆಸ್ಟೋರೆಂಟ್‌ಗಳನ್ನು ಮುಚ್ಚುವಂತೆ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ನಿಷೇಧಾಜ್ಞೆ ಹೊರಡಿಸಿದ್ದಾರೆ.
ಅವರು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯನ್ನಾಧರಿಸಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
■ಮದ್ಯ ನಿಷೇಧದ ವಿವರಗಳು ಹಾಗೂ ಸಮಯ:
3ನೇ ದಿನದ ಗಣಪತಿ ವಿಸರ್ಜನೆ (ಸೆಪ್ಟೆಂಬರ್ 16): ಬಳ್ಳಾರಿ ಜಿಲ್ಲೆಯಾದ್ಯಂತ ಸೆ.16 ರ ಬೆಳಿಗ್ಗೆ 6 ರಿಂದ ಸೆ.17 ರ ಬೆಳಿಗ್ಗೆ 06 ಗಂಟೆಯವರೆಗೆ.
5ನೇ ದಿನದ ಗಣಪತಿ ವಿಸರ್ಜನೆ (ಸೆಪ್ಟೆಂಬರ್ 18): ಬಳ್ಳಾರಿ ಜಿಲ್ಲೆಯಾದ್ಯಂತ ಸೆ.18 ರ ಬೆಳಿಗ್ಗೆ 6 ರಿಂದ ಸೆ.19 ರ ಬೆಳಿಗ್ಗೆ 6 ಗಂಟೆಯವರೆಗೆ.
7ನೇ ದಿನದ ಗಣಪತಿ ವಿಸರ್ಜನೆ (ಸೆಪ್ಟೆಂಬರ್ 20): ಬಳ್ಳಾರಿ ನಗರದಾದ್ಯಂತ ಸೆ.20 ರ ಬೆಳಿಗ್ಗೆ 6 ರಿಂದ ಸೆ.21 ರ ಬೆಳಿಗ್ಗೆ 6 ಗಂಟೆಯವರೆಗೆ.
11ನೇ ದಿನದ ಗಣಪತಿ ವಿಸರ್ಜನೆ (ಸೆಪ್ಟೆಂಬರ್ 24): ಸಿರುಗುಪ್ಪ ನಗರದಾದ್ಯಂತ ಹಾಗೂ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಸೆ.24 ರ ಬೆಳಿಗ್ಗೆ 6 ರಿಂದ ಸೆ.25 ರ ಬೆಳಿಗ್ಗೆ 6 ಗಂಟೆಯವರೆಗೆ.
13ನೇ ದಿನದ ಗಣಪತಿ ವಿಸರ್ಜನೆ (ಸೆಪ್ಟೆಂಬರ್ 26): ಕಂಪ್ಲಿ ಪಟ್ಟಣ ಹಾಗೂ 10 ಕಿ.ಮೀ ಸುತ್ತಮುತ್ತಲಿನ ಪ್ರದೇಶ ಮತ್ತು ತೆಕ್ಕಲಕೋಟೆ ಪಟ್ಟಣಾದ್ಯಂತ ಸೆ.26 ರ ಬೆಳಿಗ್ಗೆ 6 ರಿಂದ ಸೆ.27 ರ ಬೆಳಿಗ್ಗೆ 6 ಗಂಟೆಯವರೆಗೆ.
ಈ ಆದೇಶವು ಡಿಸ್ಟಿಲರೀಸ್‌ಗಳಿಂದ ರಾಜ್ಯದ ವಿವಿಧ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಿಗೆ ದಾಸ್ತಾನು ವಿಲೇವಾರಿ ಮಾಡುವುದಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
