ಬೆಂಗಳೂರು, ಸೆ.17: ರಾಜ್ಯದ ಪೊಲೀಸ್ ಠಾಣೆಗಳಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಹಂತದವರೆಗೆ ನಡೆಯುವ ಎಸ್ಸಿ–ಎಸ್ಟಿ ಕುಂದುಕೊರತೆ ಸಭೆಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕೃತ ಪತ್ರ ವ್ಯವಹಾರಗಳಲ್ಲಿ ಅಸಂವಿಧಾನಿಕ ‘ದಲಿತ’ ಪದವನ್ನು ಬಳಸದಂತೆ ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಪೊಲೀಸ್ ಇಲಾಖೆಯ ಅಧಿಕೃತ ಸಭೆಗಳು ಮತ್ತು ಪತ್ರ ವ್ಯವಹಾರಗಳಲ್ಲಿ ‘ದಲಿತ’ ಪದದ ಬದಲು ಸಂವಿಧಾನಾತ್ಮಕವಾಗಿ ಮಾನ್ಯವಾಗಿರುವ ಎಸ್ಸಿ–ಎಸ್ಟಿ (SC–ST) ಪದಗಳನ್ನು ಬಳಸುವಂತೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ಅವರು ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ಅಧೀಕ್ಷಕರು, ವಲಯ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇದರೊಂದಿಗೆ ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಲ್ಲಿ ನಡೆಯುವ ಎಸ್ಸಿ–ಎಸ್ಟಿ ಕುಂದುಕೊರತೆ ಸಭೆಗಳು ಹಾಗೂ ಅಧಿಕೃತ ಪತ್ರ ವ್ಯವಹಾರಗಳಲ್ಲಿ ‘ದಲಿತ’ ಪದ ಬಳಕೆಯನ್ನು ತಪ್ಪಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
