[ವರದಿ : ಜಿ ಎಂ ಬಸಯ್ಯ]
ಕುರುಗೋಡು: ಡಿ–7 ಕಾಲುವೆಗೆ 600 ಕ್ಯೂಸೆಕ್ಗೂ ಅಧಿಕ ನೀರು ಹರಿಸಿ ರೈತರ ಬೆಳೆಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿ AIKKMS ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಕುರುಗೋಡಿನ ನೀರಾವರಿ ಇಲಾಖೆಯ ಕಚೇರಿ ಬಳಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ AIKKMS ಜಿಲ್ಲಾಧ್ಯಕ್ಷ ಗೋವಿಂದ ಹಾಗೂ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ಮಾತನಾಡಿ, ಡಿ–7 ಕಾಲುವೆಯನ್ನು ಅವಲಂಬಿಸಿರುವ ಸಾವಿರಾರು ರೈತರು ನೀರಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ರೈತರು ಇದುವರೆಗೂ ಬಿತ್ತನೆ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. ಹಲವಾರು ರೈತರ ಜಮೀನುಗಳಿಗೆ ಇದುವರೆಗೂ ಒಂದು ಹನಿ ನೀರು ಕೂಡ ತಲುಪಿಲ್ಲ ಎಂದು ಆರೋಪಿಸಿದರು.

ಈಗಾಗಲೇ ಬಿತ್ತನೆ ಮಾಡಿರುವ ರೈತರ ಬೆಳೆಗಳೂ ನೀರಿನ ಕೊರತೆಯಿಂದ ಒಣಗುವ ಹಂತದಲ್ಲಿದ್ದು, ಬೆಳೆಗಳನ್ನು ಉಳಿಸಿಕೊಳ್ಳಲು ತಕ್ಷಣ ಅಗತ್ಯ ಪ್ರಮಾಣದ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ರೈತರ ಬೆಳೆ ಸಂಪೂರ್ಣವಾಗಿ ಕೈ ಸೇರುವವರೆಗೆ ಕಾಲುವೆಗೆ ಸಮರ್ಪಕ ಪ್ರಮಾಣದಲ್ಲಿ ನೀರು ಹರಿಸಬೇಕು. ನೀರಿನ ಹಂಚಿಕೆಯಲ್ಲಿ ಕೃಷಿಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
“ನೀರು ರೈತರ ಬದುಕಿನ ಹಕ್ಕು. ಡಿ–7 ಕಾಲುವೆಗೆ 600 ಕ್ಯೂಸೆಕ್ಗೂ ಅಧಿಕ ನೀರು ಹರಿಸಿ ರೈತರ ಬೆಳೆಗಳನ್ನು ರಕ್ಷಿಸಬೇಕು. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಧರಣಿಯಲ್ಲಿ ಸಂಘದ ರೈತ ಮುಖಂಡ ಕಲಕಂಬ ಪಂಪಾಪತಿ, ತಾಲೂಕು ಕಾರ್ಯದರ್ಶಿ ಬಸವರಾಜ್, ರೈತರಾದ ಕೀರ್ತಿ ರೆಡ್ಡಿ, ನಾಗೇಶ್ವರ, ಹೇಮರೆಡ್ಡಿ, ಏರಿಸ್ವಾಮಿ, ಮಲ್ಲಿಕಾರ್ಜುನರೆಡ್ಡಿ, ಹನುಮಂತ, ಮಾಬುಸಾಬ್, ನಾರಾಯಣ ರೆಡ್ಡಿ, ಕೃಷ್ಣಾರೆಡ್ಡಿ, ಬಸವನಗೌಡ, ಜಡಪ್ಪ ಸೇರಿದಂತೆ ವಿವಿಧ ಗ್ರಾಮಗಳ ಹಲವಾರು ರೈತರು ಭಾಗವಹಿಸಿದ್ದರು.
