ಹೊಸಪೇಟೆ: ತಾಲೂಕಿನ ಡಣನಾಯಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಣನಾಯಕನಕೆರೆ ಗ್ರಾಮದಲ್ಲಿ ಕೆರೆ ಪುನಶ್ಚೇತನ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್, ಐಎಎಸ್ ಹಾಗೂ ಉಪ ಕಾರ್ಯದರ್ಶಿ ಕೆ. ತಿಮ್ಮಪ್ಪ ಅವರು ಸೆ.23ರಂದು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ವಿಕಸಿತ ಭಾರತ–ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಗ್ಯಾರಂಟಿ ಯೋಜನೆಯಡಿ ನಡೆಯುತ್ತಿರುವ ಡಣನಾಯಕನಕೆರೆ ಕೆರೆ ಪುನಶ್ಚೇತನ ಕಾಮಗಾರಿ (ಕಾಮಗಾರಿ ಸಂಖ್ಯೆ: 1505004016/WH/VB/93393042892279350) ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸಿದರು.
ಈ ಕಾಮಗಾರಿಗೆ ಸಂಬಂಧಿಸಿದಂತೆ ಒಟ್ಟು 178 ಕೂಲಿ ಕಾರ್ಮಿಕರ NMR ತೆಗೆದುಕೊಳ್ಳಲಾಗಿದ್ದು, ಸ್ಥಳದಲ್ಲಿ 79 ಪುರುಷರು ಹಾಗೂ 46 ಮಹಿಳೆಯರು ಸೇರಿದಂತೆ ಒಟ್ಟು 125 ಕಾರ್ಮಿಕರು ಹಾಜರಿದ್ದು ಕೆಲಸ ನಿರ್ವಹಿಸುತ್ತಿರುವುದನ್ನು ಅಧಿಕಾರಿಗಳು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕ ಕೊಟ್ರೇಶ್ ಅವರು ನಿರಂತರವಾಗಿ ಕೆಲಸ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದಲ್ಲಿ ಅವರಿಗೆ ಕೆಲಸ ಒದಗಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
NMR ತೆಗೆದುಕೊಂಡಿರುವ ಎಲ್ಲ ಕೂಲಿ ಕಾರ್ಮಿಕರು ಶೇ.100ರಷ್ಟು ಹಾಜರಾಗಿ ಕೆಲಸ ನಿರ್ವಹಿಸಬೇಕು ಹಾಗೂ ಪ್ರತಿದಿನ ಎರಡು ಬಾರಿ ಹಾಜರಾತಿ ದಾಖಲಿಸುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.54.68ರಷ್ಟು ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು, ನೆರಳು ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಸೂಚಿಸಲಾಯಿತು. ವಿಶೇಷ ಚೇತನರಿಗೆ ಶೇ.50ರಷ್ಟು ರಿಯಾಯಿತಿ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಇದರ ಸದುಪಯೋಗವನ್ನು ಕೂಲಿ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ. ಆಲಂ ಭಾಷಾ, ಸಹಾಯಕ ನಿರ್ದೇಶಕಿ ಕವಿತಾ ಕರ್ಣಂ, ಎಡಿಪಿಸಿ ಬಸವರಾಜ, ಪಿಡಿಒ ಜಿಲಾನ್ ಸಾಬ್, ಹೆಚ್. ನಾಗರಾಜ್ (TIEC), ಆನಂದ ಕುಮಾರ್ (TC), ತಾಂತ್ರಿಕ ಸಹಾಯಕ ಸುರೇಶ್, ಕಾರ್ಯದರ್ಶಿ, ಬಿಎಫ್‌ಟಿ ದಾದಾ ಕಲಂದರ್, ಜಿಕೆಎಂ ಮಹೇಶಿ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಕೂಲಿ ಕಾರ್ಮಿಕರು ಹಾಗೂ ಕಾಯಕ ಬಂಧುಗಳು ಉಪಸ್ಥಿತರಿದ್ದರು.
