Wednesday, September 23, 2026
HomeDistrictsBallariರೈತರ ಸಾಲ ಮನ್ನಾ ಮಾಡಿ, ಎಕರೆಗೆ ₹30 ಸಾವಿರ ಪರಿಹಾರ ನೀಡಿ: ರಾಜುನಾಯಕ

ರೈತರ ಸಾಲ ಮನ್ನಾ ಮಾಡಿ, ಎಕರೆಗೆ ₹30 ಸಾವಿರ ಪರಿಹಾರ ನೀಡಿ: ರಾಜುನಾಯಕ

[ವರದಿ : ಜಿ ಎಂ ಬಸಯ್ಯ]
ಕಂಪ್ಲಿ: ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಬರಪೀಡಿತ ಪ್ರದೇಶಗಳ ಪ್ರತಿ ರೈತನಿಗೆ ಎಕರೆಗೆ ₹30 ಸಾವಿರ ಪರಿಹಾರ ನೀಡುವುದರ ಜೊತೆಗೆ, ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜುನಾಯಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕಂಪ್ಲಿ ಪಟ್ಟಣದ ಅತಿಥಿ ಗೃಹದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಪ್ಲಿ ತಾಲೂಕು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬರದ ಪರಿಣಾಮ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಿಸಿರುವುದಷ್ಟೇ ಹೊರತು, ರೈತರ ನೆರವಿಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ರೈತರ ಸಮಸ್ಯೆಗಳ ಬಗ್ಗೆ ಕೇವಲ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ರೈತರ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನೇರವಾಗಿ ನೆರವಿಗೆ ನಿಂತು ಪರಿಹಾರ ಒದಗಿಸಿದಾಗ ಮಾತ್ರ ಅವರ ಬದುಕಿಗೆ ಆಸರೆಯಾಗಲಿದೆ. ಆದ್ದರಿಂದ ವಿಳಂಬ ಮಾಡದೆ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು ಹಾಗೂ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಮಿನಿ ವಿಧಾನಸೌಧ ಕಾಮಗಾರಿ ಗುಣಮಟ್ಟದ ಬಗ್ಗೆಯೂ ಪ್ರಶ್ನೆ:
ಕಂಪ್ಲಿಯಲ್ಲಿ ನಿರ್ಮಿಸಲಾಗಿರುವ ಮಿನಿ ವಿಧಾನಸೌಧದ ಕಾಮಗಾರಿ ಹಾಗೂ ಅದರ ಗುಣಮಟ್ಟದ ಬಗ್ಗೆಯೂ ರಾಜುನಾಯಕ ಪ್ರಶ್ನೆ ಎತ್ತಿದರು. ನೀರು ಬಸಿಯುವ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಲಾಗಿಲ್ಲ ಎಂದು ಆರೋಪಿಸಿದರು. ಕಟ್ಟಡ ನಿರ್ಮಾಣ ಪೂರ್ಣಗೊಂಡು ಹಲವು ವರ್ಷಗಳಾದರೂ ಉದ್ಘಾಟನೆಯಾಗದೆ ಇರುವುದರಿಂದ ಕಟ್ಟಡ ಪಾಳು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಅದೇ ರೀತಿ, ಸ್ಥಳೀಯ ಅತಿಥಿ ಗೃಹದ ಬಳಿ ನಿರ್ಮಿಸಲಾಗಿರುವ ನೂತನ ಅತಿಥಿ ಗೃಹದ ಕಟ್ಟಡದ ಕಾಮಗಾರಿಯೂ ಪೂರ್ಣಗೊಂಡು ವರ್ಷಗಳೇ ಕಳೆದಿದ್ದರೂ ಇನ್ನೂ ಉದ್ಘಾಟನೆಯಾಗಿಲ್ಲ. ಈ ಕಟ್ಟಡಗಳನ್ನು ಸಾರ್ವಜನಿಕ ಬಳಕೆಗೆ ತಕ್ಷಣ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.
ಕಂಪ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಒತ್ತಾಯ
ಕಂಪ್ಲಿಯ ಬಹುವರ್ಷಗಳ ಬೇಡಿಕೆಯಾಗಿರುವ ನೂತನ ಸೇತುವೆ ನಿರ್ಮಾಣಕ್ಕೂ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಜುನಾಯಕ ಆಗ್ರಹಿಸಿದರು.

ಪ್ರತಿ ಬಾರಿ ಪ್ರವಾಹದ ಸಂದರ್ಭದಲ್ಲಿ ಸೇತುವೆ ಮುಳುಗಿ ಸಂಚಾರಕ್ಕೆ ಅಡಚಣೆ: ಉಂಟಾಗುತ್ತಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಡಿಪಿಆರ್ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಜನರಿಗೆ ನೆಪ ಹೇಳುವುದನ್ನು ಬಿಟ್ಟು ಕಾಮಗಾರಿ ಆರಂಭಿಸಲು ಸರ್ಕಾರ ಮುಂದಾಗಬೇಕು ಎಂದರು.
ಬರ ಪರಿಸ್ಥಿತಿ ಇರುವ ಈ ಸಂದರ್ಭದಲ್ಲಿ ರೈತರು, ಸಾರ್ವಜನಿಕರು ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ಸ್ಥಳೀಯ ಶಾಸಕರು ಮತ್ತು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಂಡು ನೂತನ ಸೇತುವೆಗೆ ಅಡಿಗಲ್ಲು ಹಾಕಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಳ್ಳಾರಿ ನಗರ ಘಟಕ ಅಧ್ಯಕ್ಷ ಹೊನ್ನೂರಸ್ವಾಮಿ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ವಸಂತಕುಮಾರ, ಕಂಪ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹೆಚ್. ಮೇಘರಾಜ್, ಪ್ರಧಾನ ಕಾರ್ಯದರ್ಶಿ ಜಗದೀಶ ಪೂಜಾರ, ನಗರ ಘಟಕ ಅಧ್ಯಕ್ಷ ಇರ್ಫಾನ್ ಗುತ್ತಿ ಸೇರಿದಂತೆ ಜೆಡಿಎಸ್ ಮುಖಂಡರಾದ ಮಂಜುನಾಥ ಕುಕನೂರು, ಹಳ್ಳಿಗುಡಿ ಹನುಮಂತಪ್ಪ, ಬೇವೂರು ಈರಣ್ಣ, ವಿರುಪಾಕ್ಷಿ, ನಿಂಗಪ್ಪ, ವಿರೇಶ, ರಾಜೇಶ, ಸಂಗೇಶ, ಕೊಂಡಯ್ಯ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments