Thursday, October 8, 2026
HomeDistrictsBallariಶಿರಿಗೇರಿ ಪಿಎಸ್‌ಐ ವೈ. ಶಶಿಧರ್ ನಾಯಕ್ ಬಳ್ಳಾರಿ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆ

ಶಿರಿಗೇರಿ ಪಿಎಸ್‌ಐ ವೈ. ಶಶಿಧರ್ ನಾಯಕ್ ಬಳ್ಳಾರಿ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆ

[ವರದಿ : ಜಿ ಎಂ ಬಸಯ್ಯ]
ಸಿರಿಗೇರಿ: ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೈ. ಶಶಿಧರ್ ನಾಯಕ್ ಅವರು ಬಳ್ಳಾರಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಪಿಎಸ್‌ಐ ಆಗಿ ವರ್ಗಾವಣೆಗೊಂಡಿದ್ದಾರೆ.

ವರ್ಗಾವಣೆ ಹಿನ್ನೆಲೆಯಲ್ಲಿ ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿ ಸೋಮವಾರ ಸಂಜೆ ಮತ್ತು ಮಂಗಳವಾರ ಠಾಣೆಗೆ ಭೇಟಿ ನೀಡಿ, ಶಶಿಧರ್ ನಾಯಕ್ ಅವರಿಗೆ ಶುಭ ಹಾರೈಸಿ ಸನ್ಮಾನಿಸಿ ಗೌರವಿಸಿದರು.

ಪಿಎಸ್‌ಐ ವೈ. ಶಶಿಧರ್ ನಾಯಕ್ ಅವರು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೆ, ಠಾಣೆಯ ಮೂಲಸೌಕರ್ಯ ಹಾಗೂ ವಾತಾವರಣವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದರು. ವಿಶೇಷವಾಗಿ ಹಳೆಯ ಪೊಲೀಸ್ ಠಾಣೆಯನ್ನು ನವೀಕರಿಸುವ ಕಾರ್ಯಕ್ಕೆ ಒತ್ತು ನೀಡಿದ್ದನ್ನು ಸ್ಥಳೀಯರು ಸ್ಮರಿಸಿದರು.

ಈ ಹಿನ್ನೆಲೆಯಲ್ಲಿ ಸ್ಥಳೀಯ “ನಿಮಗಾಗಿ ನಾವು” ಸಂಸ್ಥೆಯ ಗ್ರಾಮ ಘಟಕದ ಪದಾಧಿಕಾರಿಗಳು ಪಿಎಸ್‌ಐ ಶಶಿಧರ್ ನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಠಾಣೆಯ ಅಭಿವೃದ್ಧಿಗೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿ, ಮುಂದಿನ ಕರ್ತವ್ಯದಲ್ಲಿಯೂ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಎಸ್‌ಐ ವೈ. ಶಶಿಧರ್ ನಾಯಕ್, ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಾರ್ವಜನಿಕರು, ಗ್ರಾಮಸ್ಥರು, ಸಂಘ-ಸಂಸ್ಥೆಗಳು ಹಾಗೂ ವಿವಿಧ ಮುಖಂಡರು ನೀಡಿದ ಸಹಕಾರವನ್ನು ಸ್ಮರಿಸಿದರು. ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಸಿರಿಗೇರಿಯಲ್ಲಿ ದೊರೆತ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ “ನಿಮಗಾಗಿ ನಾವು” ಸಂಸ್ಥೆಯ ಅಧ್ಯಕ್ಷ ಕೊಳ್ಳಿ ಶೇಖರ್, ವಿ. ಹನುಮೇಶ್, ಆಲಂಬಾಷಾ, ಶಿವಾಜಿರಾವ್, ಸ್ವಾಮಿ, ವಿ. ನಾಗರಾಜ್ ಸೇರಿದಂತೆ ವಿವಿಧ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಬಳ್ಳಾರಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುವ ಪಿಎಸ್‌ಐ ವೈ. ಶಶಿಧರ್ ನಾಯಕ್ ಅವರಿಗೆ ಸಿರಿಗೇರಿ ಭಾಗದ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಶುಭ ಹಾರೈಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments