Thursday, October 8, 2026
HomeDistrictsBallariಹರಗಿನಡೋಣಿಯಲ್ಲಿ ಭೂ ಸರ್ವೆಗೆ ತಡೆ, ಎಪ್ಸಿಲಿನ್ ಕಂಪನಿ ವಿರುದ್ಧ ಭೂ ಸಂತ್ರಸ್ತರ ಪ್ರತಿಭಟನೆ

ಹರಗಿನಡೋಣಿಯಲ್ಲಿ ಭೂ ಸರ್ವೆಗೆ ತಡೆ, ಎಪ್ಸಿಲಿನ್ ಕಂಪನಿ ವಿರುದ್ಧ ಭೂ ಸಂತ್ರಸ್ತರ ಪ್ರತಿಭಟನೆ

[ವರದಿ : ಜಿ ಎಂ ಬಸಯ್ಯ]
ಕುರುಗೋಡು: ಲಕ್ಷ್ಮಿ ಮಿತ್ತಲ್ ಕಾರ್ಖಾನೆ ಸ್ಥಾಪನೆಗಾಗಿ ಕುಡತಿನಿ ಹಾಗೂ ಹರಗಿನಡೋಣಿ ಭಾಗದ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳ ವಿಚಾರದಲ್ಲಿ ಸರ್ಕಾರ ಹಾಗೂ ಕೈಗಾರಿಕಾ ಸಂಸ್ಥೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಭೂ ಸಂತ್ರಸ್ತರು, ಹರಗಿನಡೋಣಿ ಗ್ರಾಮದಲ್ಲಿ ಎಪ್ಸಿಲಿನ್ ಕಂಪನಿಯ ಭೂ ಸರ್ವೆ ಕಾರ್ಯಕ್ಕೆ ತಡೆವೊಡ್ಡಿ ಪ್ರತಿಭಟನೆ ನಡೆಸಿದರು.

ಕುರುಗೋಡು ಸಮೀಪದ ಕುಡತಿನಿ ಹಾಗೂ ಹರಗಿನಡೋಣಿ ಭಾಗದಲ್ಲಿ ಅರ್ಸೆಲರ್ ಮಿತ್ತಲ್ ಕಂಪನಿಗಾಗಿ 2010ರಲ್ಲಿ ಸುಮಾರು 5,365 ಎಕರೆ ಜಮೀನನ್ನು ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ವರ್ಷಗಳು ಕಳೆದರೂ ನಿರೀಕ್ಷಿತ ಕೈಗಾರಿಕೆ ಸ್ಥಾಪನೆಯಾಗಿಲ್ಲ. ಸ್ಥಳೀಯರಿಗೆ ಉದ್ಯೋಗಾವಕಾಶವೂ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸ್ವಾಧೀನಪಡಿಸಿಕೊಂಡ ಜಮೀನನ್ನು ರೈತರಿಗೆ ಮರಳಿ ನೀಡುವ ಬದಲು ಜಿಂದಾಲ್ ಹಾಗೂ ಅದರ ಸಹೋದರ ಕಂಪನಿಗಳಿಗೆ ಕೆಐಎಡಿಬಿ ಮೂಲಕ ಪರಭಾರೆ ಮಾಡಲಾಗುತ್ತಿದೆ ಎಂದು ಅವರು ಆಕ್ಷೇಪಿಸಿದರು. ಈ ಹಿನ್ನೆಲೆಯಲ್ಲಿ ಹರಗಿನಡೋಣಿ ಗ್ರಾಮದಲ್ಲಿರುವ ಸುಮಾರು 32ರಿಂದ 37 ಎಕರೆ ಜಮೀನಿನ ಸರ್ವೆ ಕಾರ್ಯಕ್ಕೆ ಮುಂದಾಗಿರುವುದನ್ನು ಖಂಡಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಭೂ ಸಂತ್ರಸ್ತರ ಹೋರಾಟ ಸಮಿತಿ ಸೇರಿದಂತೆ ಕನ್ನಡಪರ, ದಲಿತಪರ ಹಾಗೂ ಮಹಿಳಾಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ, ಸರ್ವೆ ಕಾರ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಎಪ್ಸಿಲಿನ್ ಕಂಪನಿಯು ಹರಗಿನಡೋಣಿ ಗ್ರಾಮದ ಜಮೀನಿನ ಸರ್ವೆ ನಡೆಸಲು ನ್ಯಾಯಾಲಯದ ಆದೇಶ ಪಡೆದುಕೊಂಡಿದ್ದು, ಪೊಲೀಸ್ ಭದ್ರತೆಯೊಂದಿಗೆ ಜಮೀನಿಗೆ ಪ್ರವೇಶಿಸಲು ಮುಂದಾಗಿದೆ. ಆದರೆ ರೈತರ ಸಮಸ್ಯೆಗಳನ್ನು ಬಗೆಹರಿಸದೆ ಸರ್ವೆ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಸೂಕ್ತ ಪರಿಹಾರ ಹಾಗೂ ನ್ಯಾಯ ಒದಗಿಸದೆ ಜಮೀನುಗಳನ್ನು ಪರಭಾರೆ ಮಾಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ರೈತರೊಂದಿಗೆ ಚರ್ಚಿಸದೆ ಯಾವುದೇ ರೀತಿಯ ಸರ್ವೆ ಅಥವಾ ಭೂ ಪರಭಾರೆಗೆ ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಆಡಳಿತವನ್ನು ಒತ್ತಾಯಿಸಿದರು.

ಸಚಿವರ ಭರವಸೆ ಇನ್ನೂ ಈಡೇರಿಲ್ಲ:
ಸುಮಾರು ಎರಡು ತಿಂಗಳ ಹಿಂದೆ ಬಳ್ಳಾರಿಗೆ ಭೇಟಿ ನೀಡಿದ್ದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ರೈತರೊಂದಿಗೆ ಚರ್ಚೆ ನಡೆಸಿ, ಶಾಸಕರಾದ ನಾಗೇಂದ್ರ ಹಾಗೂ ಸಂಸದ ತುಕಾರಾಂ ಅವರೊಂದಿಗೆ ಜಂಟಿಯಾಗಿ ಚರ್ಚಿಸಿ ಭೂಮಿಯ ಬೆಲೆಯಲ್ಲಿ ಆಗಿರುವ ಅನ್ಯಾಯ ಹಾಗೂ ಇತರ ಸಮಸ್ಯೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಆದರೆ ಸಚಿವರ ಭರವಸೆಗೆ ಎರಡು ತಿಂಗಳು ಕಳೆದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಅರ್ಸೆಲರ್ ಮಿತ್ತಲ್ ಕಂಪನಿಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳ ಅಕ್ರಮ ವರ್ಗಾವಣೆ ಹಾಗೂ ಪರಭಾರೆ ಪ್ರಕ್ರಿಯೆಯನ್ನು ತಕ್ಷಣವೇ ತಡೆಯಬೇಕು. ರೈತರೊಂದಿಗೆ ಸಮಗ್ರವಾಗಿ ಚರ್ಚಿಸಿ, ಭೂಮಿಯ ಬೆಲೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಹಾಗೂ ಭೂ ಸಂತ್ರಸ್ತರ ಹೋರಾಟ ಸಮಿತಿಯ ಗೌರವಾಧ್ಯಕ್ಷ ಯು. ಬಸವರಾಜ ಮಾತನಾಡಿ, ರೈತರ ಸಮಸ್ಯೆಗಳನ್ನು ಬಗೆಹರಿಸದೆ ಯಾವುದೇ ಕಾರಣಕ್ಕೂ ಜಮೀನುಗಳ ಸರ್ವೆ ಅಥವಾ ಪರಭಾರೆಗೆ ಅವಕಾಶ ನೀಡಬಾರದು. ಸಚಿವ ಎಂ.ಬಿ. ಪಾಟೀಲ್ ಅವರು ನೀಡಿರುವ ಭರವಸೆಯನ್ನು ಕೂಡಲೇ ಈಡೇರಿಸಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತರ ಜಮೀನಿನ ವಿಚಾರದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ, ಭೂ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments