ಬಳ್ಳಾರಿ,ಅ.15:ದೀರ್ಘಕಾಲಿಕ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಉಪಶಾಮಕ ಆರೈಕೆ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಲಕಾನಂದ ಡಿ. ಮಳಗಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕೋಶ, ಜಿಲ್ಲಾ ಆಸ್ಪತ್ರೆ, ಬಳ್ಳಾರಿ ಹಾಗೂ ರಾಷ್ಟಿçÃಯ ಉಪಶಮನ ಆರೈಕೆ ಕಾರ್ಯಕ್ರಮ ಸಂಯುಕ್ತ ಆಶ್ರಯದಲ್ಲಿ ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿಶ್ವ ಉಪಶಮನ ಆರೈಕೆ ದಿನಾಚರಣೆ’ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಅಕ್ಟೋಬರ್ ತಿಂಗಳ 10ನೇ ತಾರೀಖಿನಂದು ವಿಶ್ವಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್, ಏಡ್ಸ್, ನರಸಂಬAಧಿ ಕಾಯಿಲೆಗಳು ಹಾಗೂ ಇತರ ದೀರ್ಘಕಾಲಿಕ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಉಪಶಾಮಕ ಆರೈಕೆ ಹಾಗೂ ಹಾಸ್ಪಿಸ್ ಸೇವೆಗಳ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗುಣಪಡಿಸಲಾಗದ ಅಥವಾ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ದೈಹಿಕ ನೋವು, ಮಾನಸಿಕ ಒತ್ತಡ ಹಾಗೂ ಭಾವನಾತ್ಮಕ ಯಾತನೆಯನ್ನು ಕಡಿಮೆ ಮಾಡುವುದು ಉಪಶಮನ ಆರೈಕೆಯ ಮುಖ್ಯ ಉದ್ದೇಶವಾಗಿದೆ. ಇದು ರೋಗಿಯ ನೋವು ನಿವಾರಿಸುವುದಷ್ಟೇ ಅಲ್ಲದೆ, ರೋಗಿ ಹಾಗೂ ಅವರ ಕುಟುಂಬದವರಿಗೆ ಸಾಂತ್ವನ ಮತ್ತು ಧೈರ್ಯ ತುಂಬುವ ಮಾನವೀಯ ಸೇವೆಯಾಗಿದೆ. ರೋಗಿಯ ಬದುಕಿನ ಕೊನೆಯ ದಿನಗಳನ್ನು ನೋವಿಲ್ಲದೆ, ಅತ್ಯಂತ ಗೌರವಯುತವಾಗಿ ಕಳೆಯುವಂತೆ ಮಾಡಲು ಇದು ನೆರವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕದ ವತಿಯಿಂದ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.
ಜಿಲ್ಲಾ ಶಸ್ತçಚಿಕಿತ್ಸಕ ಡಾ. ಎನ್. ಬಸರೆಡ್ಡಿ ಅವರು ಮಾತನಾಡಿ, ಉಪಶಾಮಕ ಆರೈಕೆ ಕುರಿತು ಸಮಾಜದಲ್ಲಿ ಮತ್ತು ಸರ್ಕಾರಿ ಮಟ್ಟದಲ್ಲಿ ಸೂಕ್ತ ನೀತಿಗಳನ್ನು ರೂಪಿಸಲು ಜಾಗೃತಿ ಮೂಡಿಸುವುದು, ಅಗತ್ಯ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಹಾಗೂ ರೋಗಿಯ ಆರೈಕೆ ಮಾಡುವ ಕುಟುಂಬದ ಸದಸ್ಯರಿಗೂ ಮಾನಸಿಕ ಮತ್ತು ವೈದ್ಯಕೀಯ ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಉಪಶಾಮಕ ಆರೈಕೆಯು ಕೇವಲ ವೈದ್ಯಕೀಯ ಚಿಕಿತ್ಸೆಯಲ್ಲ, ಅದೊಂದು ಮಾನವೀಯ ಸ್ಪರ್ಶ ಹಾಗೂ ಕಷ್ಟದ ಸಮಯದಲ್ಲಿ ರೋಗಿಗಳಿಗೆ ನೀಡುವ ನೈತಿಕ ಬೆಂಬಲವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಜ್ಞ ವೈದ್ಯ ಡಾ. ಶ್ರೀಧರ್, ಆರ್.ಎಂ.ಒ ಡಾ. ಮಲ್ಲಿಕಾರ್ಜುನ, ಹಿರಿಯ ತಜ್ಞ ವೈದ್ಯರಾದ ಡಾ. ಬಾಲು ವೆಂಕಟನಾಗಶಿವಶೇಷ, ಡಾ. ರಾಕೇಶ್, ಡಾ. ಜಬೀನ್ ತಾಜ್, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಜಡಗಣ್ಣನವರ, ಕಾರ್ಯಕ್ರಮ ವ್ಯವಸ್ಥಾಪಕರಾದ ಸಣ್ಣ ಕೇಶವ ಕಭಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ ಸೇರಿದಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
