[ವರದಿ : ಶಿವರಾಜ್ ಕನ್ನಡಿಗ]
ಕೊಟ್ಟೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಬಿಡಿಸಿಸಿ ಬ್ಯಾಂಕ್ನ ನೂತನ ಶಾಖೆಯನ್ನು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜ ದೇಶಿಕೇಂದ್ರಿ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ತಿಪ್ಪೇಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಟ್ಟೂರು ಎಪಿಎಂಸಿ ಆವರಣದಲ್ಲಿ ಬಿಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಇದೀಗ ಈ ಬೇಡಿಕೆ ಈಡೇರಿದ್ದು, ರೈತರು, ದಲಾಲರು, ವರ್ತಕರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ನೂತನ ಶಾಖೆಯು ಬೆಳಿಗ್ಗೆ 11ರಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸಲಿದೆ. ಇದರಿಂದ ಮಧ್ಯಮ ಹಾಗೂ ಕೆಳವರ್ಗದ ಜನರು ಸೇರಿದಂತೆ ವಿವಿಧ ವರ್ಗಗಳ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ಪಡೆಯಲು ಅನುಕೂಲವಾಗಲಿದೆ ಎಂದರು.
ಬ್ಯಾಂಕ್ ವತಿಯಿಂದ ವಾಹನ ಸಾಲ, ಚಿನ್ನದ ಸಾಲ, ವೈಯಕ್ತಿಕ ಸಾಲ, ಪಿಗ್ಮಿ ಸಾಲ ಹಾಗೂ ಗೃಹ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಹೊಸ ಯೋಜನೆಗಳ ಸೌಲಭ್ಯಗಳೂ ಶಾಖೆಯಲ್ಲಿ ಲಭ್ಯವಾಗಲಿವೆ. ಬ್ಯಾಂಕ್ ನೌಕರರಿಗೆ ₹1 ಕೋಟಿ ವಿಮಾ ಪಾಲಿಸಿಯ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ರೈತರು, ವರ್ತಕರು ಹಾಗೂ ಸಾರ್ವಜನಿಕರಿಗೆ ಉತ್ತಮ ಮತ್ತು ಪರಿಣಾಮಕಾರಿ ಸೇವೆ ಒದಗಿಸುವುದು ನೂತನ ಶಾಖೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ. ದಾರುಕೇಶ್, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ, ಅಗಡಿ ಪಂಪಾಪತಿ ಸೇರಿದಂತೆ ಬ್ಯಾಂಕ್ ಶಾಖೆಯ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.
