Sunday, October 18, 2026
HomeSandurಸಂವಿಧಾನದ ಮೌಲ್ಯ ಅರಿತು, ನಾಯಕತ್ವ ಬೆಳೆಸಿಕೊಳ್ಳಿ: ಬಿಇಓ ಡಾ.ಐ ಆರ್ ಅಕ್ಕಿ

ಸಂವಿಧಾನದ ಮೌಲ್ಯ ಅರಿತು, ನಾಯಕತ್ವ ಬೆಳೆಸಿಕೊಳ್ಳಿ: ಬಿಇಓ ಡಾ.ಐ ಆರ್ ಅಕ್ಕಿ

ಸಂಡೂರು, ಅ. 15: ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಸಾರ್ಥಕ ಹಾಗೂ ಅರ್ಥಪೂರ್ಣ ಚರ್ಚೆಗಳಲ್ಲಿ ಅಡಗಿದೆ. ಕೇವಲ ಗದ್ದಲ ಎಬ್ಬಿಸುವುದಕ್ಕಿಂತ ವಿಷಯಾಧಾರಿತ ಮತ್ತು ರಚನಾತ್ಮಕ ಚರ್ಚೆಗಳಿಗೆ ಆದ್ಯತೆ ನೀಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ಹೇಳಿದರು.

ಸಂಡೂರು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಸಂಡೂರು ಇವರ ಸಂಯುಕ್ತಾಶ್ರಯದಲ್ಲಿ ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಅಂಗವಾಗಿ ಪಟ್ಟಣದ ಬಿಕೆಜಿ ಗ್ಲೋಬಲ್ ಸ್ಕೂಲ್‌ನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಂಡೂರು ತಾಲೂಕು ಮಟ್ಟದ ‘ಯುವ ಸಂಸತ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಸ್ತುತ ಶಾಸನಸಭೆಗಳಲ್ಲಿ ಕೇವಲ ಗದ್ದಲ ಹಾಗೂ ವಿರೋಧಕ್ಕಾಗಿಯೇ ವಿರೋಧ ವ್ಯಕ್ತಪಡಿಸುವ ಪ್ರವೃತ್ತಿ ಹೆಚ್ಚುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಯುವಜನತೆ ಸಂವಿಧಾನದ ಮೌಲ್ಯಗಳನ್ನು ಅರಿತುಕೊಂಡು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೇವಲ ಗದ್ದಲ ಎಬ್ಬಿಸುವುದಕ್ಕಿಂತ ವಿಷಯಾಧಾರಿತ, ರಚನಾತ್ಮಕ ಚರ್ಚೆಗಳು ನಡೆಯುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಕಾನೂನುಗಳನ್ನು ರೂಪಿಸುವ ಮುನ್ನ ಅವುಗಳ ಸಾಧಕ-ಬಾಧಕಗಳ ಕುರಿತು ಆಳವಾದ ಚರ್ಚೆಗಳು ನಡೆಯಬೇಕು. ಎದುರಾಳಿ ಅಥವಾ ವಿರೋಧ ಪಕ್ಷಗಳ ಅಭಿಪ್ರಾಯಗಳಿಗೆ ಗೌರವ ನೀಡುವ ‘ಒಪ್ಪಂದದ ಭಿನ್ನಾಭಿಪ್ರಾಯ’ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಕೇವಲ ಪರಸ್ಪರ ದ್ವೇಷ ಸಾಧಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಇಡೀ ಜಗತ್ತಿಗೆ ಮಾದರಿಯಾಗಿದೆ. ಸಂವಿಧಾನವೇ ದೇಶದ ಸರ್ವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಮಾರ್ಗದರ್ಶಿಯಾಗಿದೆ ಎಂದು ಸ್ಮರಿಸಿದ ಅವರು, ಸಾರ್ವಜನಿಕವಾಗಿ ನಿಂತು ಮಾತನಾಡುವ ಕಲೆ ಯುವಜನರಲ್ಲಿ ನಾಯಕತ್ವದ ಗುಣ ಹಾಗೂ ಧೈರ್ಯವನ್ನು ಬೆಳೆಸುತ್ತದೆ. ಇಂತಹ ಯುವ ಸಂಸತ್ ಕಾರ್ಯಕ್ರಮಗಳು ಯುವಕರಲ್ಲಿ ಪ್ರಜಾಸತ್ತಾತ್ಮಕ ಚಿಂತನೆ ಬೆಳೆಸಲು ಪ್ರೇರಕವಾಗಿವೆ ಎಂದು ಪ್ರಶಂಸಿಸಿದರು.

ಪ್ರಜಾಪ್ರಭುತ್ವ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ:
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಮಾತನಾಡಿ, ಪ್ರಜಾಪ್ರಭುತ್ವ ಎಂದರೆ ಕೇವಲ ಮತದಾನ ಮಾಡುವುದು ಅಥವಾ ಆಡಳಿತ ವ್ಯವಸ್ಥೆಗೆ ಸೀಮಿತವಾಗಿರುವುದಲ್ಲ. ಅದು ಪ್ರತಿಯೊಬ್ಬರ ಜೀವನ ವಿಧಾನವಾಗಿದ್ದು, ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.

2007ರಲ್ಲಿ ವಿಶ್ವಸಂಸ್ಥೆಯು ಸೆಪ್ಟೆಂಬರ್ 15 ಅನ್ನು ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಎಂದು ಘೋಷಿಸಿತು. 2008ರಿಂದ ಪ್ರತಿವರ್ಷ ವಿಶ್ವದಾದ್ಯಂತ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ಮಾನವ ಹಕ್ಕುಗಳ ರಕ್ಷಣೆಗಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮತ್ತು ಮುಷ್ಕರ ಮಾಡುವ ಹಕ್ಕು ಜನರಿಗೆ ನೀಡಲಾಗಿರುವ ಪ್ರಮುಖ ಅಸ್ತ್ರವಾಗಿದೆ. ಆದರೆ ಯಾವುದೇ ಹಕ್ಕನ್ನು ಚಲಾಯಿಸುವ ಮುನ್ನ ಕಾನೂನನ್ನು ಕೈಗೆತ್ತಿಕೊಳ್ಳದೆ, ಜವಾಬ್ದಾರಿಯುತವಾಗಿ ವರ್ತಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಕರೆ ನೀಡಿದರು.

ಯುವಜನತೆ ರಾಜಕೀಯ ನಾಯಕತ್ವದ ಕನಸು ಕಾಣಲಿ:
ತಹಸೀಲ್ದಾರ್ ಅನಿಲ್ ಕುಮಾರ್ ಜೆ. ಮಾತನಾಡಿ, ವಿಶ್ವದಲ್ಲೇ ಅತ್ಯಂತ ಬಲಿಷ್ಠ ಹಾಗೂ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತವು ಜಗತ್ತಿಗೆ ಮಾದರಿಯಾಗಿದೆ. ಸುಮಾರು 140 ಕೋಟಿ ಜನಸಂಖ್ಯೆ ಹೊಂದಿದ್ದರೂ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿ ಮುನ್ನಡೆಯಲು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಮೂಲ ಆಧಾರವಾಗಿದೆ ಎಂದು ಸ್ಮರಿಸಿದರು.

ವೈದ್ಯರು, ಎಂಜಿನಿಯರ್‌ಗಳು ಮತ್ತು ವಕೀಲರಾಗುವ ಕನಸು ಕಾಣುವಷ್ಟೇ ಉತ್ಸಾಹದಿಂದ ಯುವಜನರು ರಾಜಕೀಯ ನಾಯಕರಾಗಿ, ಶಾಸಕರಾಗಿ ಹಾಗೂ ಸಂಸದರಾಗುವ ಕನಸುಗಳನ್ನೂ ಕಾಣಬೇಕು. ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸಲು ಮತ್ತು ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಯುವಪೀಳಿಗೆ ಮುಂಚೂಣಿಗೆ ಬರಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ನೈಜ ಸಂಸತ್ತಿನ ಮಾದರಿಯಲ್ಲಿ ವಿದ್ಯಾರ್ಥಿಗಳಿಂದ ಯುವ ಸಂಸತ್ ಸಭೆ, ಗಮನಾರ್ಹ ಚರ್ಚೆ:
ಅಣಕು ಸಂಸತ್ ಸಭೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ನೈಜ ಸಂಸತ್ತಿನ ಕಾರ್ಯಕಲಾಪಗಳನ್ನು ಮರುಸೃಷ್ಟಿಸಿದರು. ಆಡಳಿತ ಮತ್ತು ವಿರೋಧ ಪಕ್ಷಗಳ ಪಾತ್ರ ವಹಿಸಿದ್ದ ವಿದ್ಯಾರ್ಥಿಗಳು ಪ್ರಸ್ತುತ ಸಮಾಜದ ಪ್ರಮುಖ ವಿಷಯಗಳಾದ ಶಿಕ್ಷಣ, ಆರೋಗ್ಯ, ಯುವಜನರ ಉದ್ಯೋಗ, ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣ ಅಭಿವೃದ್ಧಿಯಂತಹ ಗಂಭೀರ ವಿಚಾರಗಳ ಕುರಿತು ನೈಜ ಸಂಸತ್ತಿನ ಶೈಲಿಯಲ್ಲಿಯೇ ತಾರ್ಕಿಕ ಚರ್ಚೆ ನಡೆಸಿದರು.

ವಿಶೇಷವಾಗಿ ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ, “ಸಂಡೂರಿನ ಚಿತ್ತ ಅಭಿವೃದ್ಧಿಯತ್ತ” ಎಂಬ ವಿಷಯದಡಿ ಇತ್ತೀಚೆಗೆ ನಡೆದ ಅಪಘಾತಗಳ ಕುರಿತು ಚರ್ಚೆ, ಗಣಿಕಂಪನಿಗಳ ವಾಹನಗಳು ಹಾಗೂ ಲಾರಿಗಳಿಗೆ ಜಿಪಿಎಸ್ ಅಳವಡಿಸುವ ವಿಚಾರ ಮತ್ತು ನೂತನ ವಿಧೇಯಕಗಳ ಮಂಡನೆ ಪ್ರಕ್ರಿಯೆಗಳು ಸಭೆಯಲ್ಲಿ ನೆರೆದಿದ್ದ ವೀಕ್ಷಕರು ಹಾಗೂ ಗಣ್ಯರ ಮೆಚ್ಚುಗೆಗೆ ಪಾತ್ರವಾದವು.

ವಿದ್ಯಾರ್ಥಿಗಳು ಸಂಸದೀಯ ಕಾರ್ಯವಿಧಾನಗಳನ್ನು ಅರ್ಥಮಾಡಿಕೊಂಡು, ಜನಸಾಮಾನ್ಯರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸುವ ರೀತಿಯಲ್ಲಿ ಚರ್ಚೆ ನಡೆಸಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಸ್ಪರ್ಧೆಯ ಅಂತ್ಯದಲ್ಲಿ ಅತ್ಯುತ್ತಮ ವಾಗ್ಮಿತ್ವ ಹಾಗೂ ಸಂಸದೀಯ ಕೌಶಲ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಯುವ ಸಂಸತ್ತು ಸಭೆಗೆ ಆಯ್ಕೆ ಮಾಡಲಾಯಿತು.

ಯುವ ಸಂಸತ್ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಕೆ. ವೆಂಕಟೇಶ್, ತಹಸೀಲ್ದಾರ್ ಅನಿಲ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಸಿಡಿಪಿಒ ನಾಗರಾಜ್, ವಕೀಲರ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಹಾಗೂ ಬಿಕೆಜಿ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲರು ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments