[ವರದಿ : ಜಿ ಎಂ ಬಸಯ್ಯ”]
ಕಂಪ್ಲಿ: ಸಮಾಜದಲ್ಲಿ ಯಾವುದೇ ಬೇಧಭಾವವಿಲ್ಲದೆ, ಬಡವ–ಶ್ರೀಮಂತ ಎಂಬ ತಾರತಮ್ಯ ಮಾಡದೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸಮಾಜದ ಅಭಿವೃದ್ಧಿಗೆ ಹಾಗೂ ಧಾರ್ಮಿಕ ಕೇಂದ್ರದ ಶ್ರೇಯೋಭಿವೃದ್ಧಿಗೆ ನಾಂದಿಯಾಗಿದೆ ಎಂದು ರಾಯಚೂರು ಜಿಲ್ಲೆಯ ಮಿಟ್ಟೆ ಮಲ್ಕಾಪುರದ ಶಾಂತಾಶ್ರಮದ ಪೀಠಾಧಿಪತಿಗಳಾದ ಶ್ರೀ ನಿಜಾನಂದ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ರಾಮಸಾಗರ ಗ್ರಾಮದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಲಾಳಗೊಂಡ ಸಮಾಜದ ಸಂಘದ ಉದ್ಘಾಟನೆ, ಸಮಾಜದ ಲಾಂಛನ ಹಾಗೂ ಕಿರುಹೊತ್ತಿಗೆಯ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಸಂಘಟಿತರಾಗಿ, ಪರಸ್ಪರ ಸಹಕಾರದೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಸಂಘಟನೆಯ ಮೂಲಕ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಇತಿಹಾಸಕಾರರು, ನಿವೃತ್ತ ಎಂಜಿನಿಯರ್ ಹಾಗೂ ಲಾಳಗೊಂಡ ಸಮಾಜದ ಸಂಶೋಧಕರಾದ ಡಾ. ಎಂ.ಆರ್. ಪಂಪನಗೌಡ ಅವರು ಗೊಂಡ್ವಾನ ಸಂಸ್ಕೃತಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಿವೃತ್ತ ಪ್ರಾಧ್ಯಾಪಕರಾದ ಡಾ. ಕೆ.ಎಂ. ಮೈತ್ರಿ ಅವರು ಲಾಳಗೊಂಡ ಸಮಾಜದ ಕಿರು ಪರಿಚಯವನ್ನು ಮಂಡಿಸಿದರು. ಸುರೇಶಗೌಡ ಪಾಟೀಲ್ ಗೋನಾಳ ಅವರು ಲಾಳಗೊಂಡ ಸಮಾಜದ ಬೆಳವಣಿಗೆ ಕುರಿತು ಉಪನ್ಯಾಸ ನೀಡಿದರು.
ರಾಮಸಾಗರ ಗ್ರಾಮ ಘಟಕದ ಅಧ್ಯಕ್ಷ ಗೆಣಕಿಹಾಳ್ ಬಸವರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿಯ ಶಶಿಧರ ಮೇಟಿ ಅವರು ಸಮಾಜದ ಬೆಳವಣಿಗೆ ಮತ್ತು ಸಂಘಟನೆಯ ಮಹತ್ವದ ಕುರಿತು ಉತ್ತಮ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಲಾಳಗೊಂಡ ಸಮಾಜದ ರಾಜ್ಯಾಧ್ಯಕ್ಷ ಅರವಿ ಬಸವನಗೌಡ, ತಾಲೂಕು ಅಧ್ಯಕ್ಷ ಜಿ. ಅಮರೇಗೌಡ, ರಾಮಸಾಗರ ಘಟಕದ ಗೌರವಾಧ್ಯಕ್ಷ ಜಿ. ಚಂದ್ರಶೇಖರಗೌಡ, ಪ್ರಧಾನ ಕಾರ್ಯದರ್ಶಿ ಬಿ. ಶರಣಪ್ಪ, ಖಜಾಂಚಿ ಜಿ. ಸಂಗಮೇಶ, ಉಪಾಧ್ಯಕ್ಷರಾದ ಎಸ್. ಭೀಮನಗೌಡ, ನಾಗರಾಜ್ ಕಂಪ್ಲಿ, ಜಿ. ರವಿಶಂಕರ್, ಸಂಘಟನಾ ಕಾರ್ಯದರ್ಶಿ ಈ. ಶಿವಶಂಕರಗೌಡ, ಕಾನೂನು ಸಲಹೆಗಾರ ಬಿ.ಆರ್. ಪ್ರಕಾಶ್, ಬಿ. ಜಗದೀಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಎಸ್. ಏರಿಸ್ವಾಮಿ, ಕೆ. ಈರಪ್ಪ, ಶರಣಬಸವ, ಎಸ್.ಬಿ. ಚೆನ್ನಪ್ಪ ಸೇರಿದಂತೆ ವಿವಿಧ ಸಮಾಜಗಳ ಅಧ್ಯಕ್ಷರಾದ ಎಚ್. ಶಿವಶಂಕರಗೌಡ, ಕೆ.ಎಂ. ವಿರೂಪಾಕ್ಷಯ್ಯಸ್ವಾಮಿ, ಬಿ. ನಾರಾಯಣಪ್ಪ ಹಾಗೂ ಹೊಸಳ್ಳಿ ಶಂಕರಗೌಡ ಸೇರಿದಂತೆ ವಿವಿಧ ಗ್ರಾಮಗಳ ಸಮಾಜದ ಮುಖಂಡರು, ಪದಾಧಿಕಾರಿಗಳು, ಯುವಕರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.
ಸಮಾಜದ ಸಂಘಟನೆಯನ್ನು ಬಲಪಡಿಸುವುದು, ಸಮುದಾಯದ ಇತಿಹಾಸ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಹಾಗೂ ಒಗ್ಗಟ್ಟಿನ ಮೂಲಕ ಅಭಿವೃದ್ಧಿ ಸಾಧಿಸುವ ಆಶಯದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
