ಸಂಡೂರು:ನ:07:
ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮೀಣ ಮಹಿಳೆಯರ ಸ್ವಾವಲಂಬನೆ, ಉದ್ಯಮಶೀಲತೆ ಹಾಗೂ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಬಳ್ಳಾರಿ, ತಾಲೂಕು ಪಂಚಾಯಿತಿ ಸಂಡೂರು ಹಾಗೂ ಸಂಜೀವಿನಿ–ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಂಯುಕ್ತಾಶ್ರಯದಲ್ಲಿ ಪಟ್ಟಣದಲ್ಲಿ ‘ದೀಪ ಸಂಜೀವಿನಿ’ ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸಂಡೂರು ಕ್ಷೇತ್ರದ ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತಮ್ಮ ಸ್ವಂತ ಪರಿಶ್ರಮ ಹಾಗೂ ಕೌಶಲ್ಯದಿಂದ ತಯಾರಿಸಿದ ವಿವಿಧ ಬಗೆಯ ಆಕರ್ಷಕ ಅಲಂಕಾರಿಕ ದೀಪಗಳು, ಆಹಾರ ಪದಾರ್ಥಗಳು ಸೇರಿದಂತೆ ವೈವಿಧ್ಯಮಯ ಆಹಾರ ಮತ್ತು ಆಹಾರೇತರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ವೀಕ್ಷಿಸಿದರು. ಅಲ್ಲದೆ, ಸ್ವತಃ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಹಿಳೆಯರ ಪರಿಶ್ರಮಕ್ಕೆ ಪ್ರೋತ್ಸಾಹ ನೀಡಿದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರತಿಷ್ಠಿತ ‘ಕೌಶಲ್ಯ ಕರ್ನಾಟಕ ಪ್ರಶಸ್ತಿ–2026’ಗೆ ಭಾಜನರಾದ ಸಂಡೂರು ತಾಲೂಕಿನ ಸುಶೀಲನಗರ ಗ್ರಾಮದ ಸೋನಿಯಾ ಗಾಂಧಿ ಸ್ವಸಹಾಯ ಸಂಘದ ಮಹಿಳೆಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ನಂತರ ಮಾತನಾಡಿದ ಶಾಸಕಿ ಅನ್ನಪೂರ್ಣ ತುಕಾರಾಂ ಅವರು, ಗ್ರಾಮೀಣ ಮಹಿಳೆಯರು ವಿವಿಧ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಸ್ವಂತ ಉದ್ಯಮಗಳನ್ನು ಆರಂಭಿಸಿ ಬೆಳೆಸಿಕೊಳ್ಳುವ ಮೂಲಕ ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಮಹಿಳೆಯರ ಪರಿಶ್ರಮ, ಕೌಶಲ್ಯ ಮತ್ತು ಉತ್ಪಾದನೆಗೆ ಸೂಕ್ತ ಮಾರುಕಟ್ಟೆ ದೊರೆತಾಗ ಮಾತ್ರ ಅವರ ಉದ್ಯಮಗಳು ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಇಂತಹ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಕ್ಷೇತ್ರದ ಸಮಸ್ತ ನಾಗರಿಕರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ ಅವರು, ಬೆಳಕಿನ ಹಬ್ಬವು ಪ್ರತಿಯೊಬ್ಬರ ಬದುಕಿನಲ್ಲಿ ಕತ್ತಲೆಯನ್ನು ದೂರಮಾಡಿ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯವನ್ನು ತರಲಿ ಎಂದು ಹಾರೈಸಿದರು. ದೀಪಾವಳಿಯನ್ನು ಸಂಭ್ರಮದೊಂದಿಗೆ ಸೌಹಾರ್ದತೆ ಮತ್ತು ಜವಾಬ್ದಾರಿಯಿಂದ ಆಚರಿಸಬೇಕು. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರಿಸರ ಮಾಲಿನ್ಯ ತಡೆಗಟ್ಟುವ ಜೊತೆಗೆ ವೃದ್ಧರು, ಮಕ್ಕಳು ಹಾಗೂ ಮೂಕಪ್ರಾಣಿಗಳಿಗೆ ತೊಂದರೆಯಾಗದಂತೆ ಪರಿಸರಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಸಲಹೆ ನೀಡಿದರು.
ಮಕ್ಕಳು ಪಟಾಕಿ ಸಿಡಿಸುವಾಗ ಮನೆಯ ಹಿರಿಯರು ಜೊತೆಯಲ್ಲಿದ್ದು ಮಾರ್ಗದರ್ಶನ ನೀಡಬೇಕು. ಜನನಿಬಿಡ ಪ್ರದೇಶಗಳು, ಕಿರಿದಾದ ಗಲ್ಲಿಗಳು ಹಾಗೂ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಸ್ಥಳಗಳಲ್ಲಿ ಪಟಾಕಿ ಸಿಡಿಸದೆ, ಬಯಲು ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮುನ್ನೆಚ್ಚರಿಕೆಯಾಗಿ ನೀರು ಮತ್ತು ಮರಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಹತ್ತಿಯ ಸಡಿಲ ಉಡುಪುಗಳನ್ನು ಧರಿಸಿ ಅಪಘಾತಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕು. ಹಬ್ಬದ ಸಂಭ್ರಮದ ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡುವ ಮೂಲಕ ಸೌಹಾರ್ದಯುತ ದೀಪಾವಳಿ ಆಚರಿಸೋಣ ಎಂದರು.
ರಾಜ್ಯಾದ್ಯಂತ ಬರಗಾಲದ ಪರಿಸ್ಥಿತಿ ಇರುವುದರಿಂದ ನೀರಿನ ಮಹತ್ವವನ್ನು ಅರಿತು ಪ್ರತಿಯೊಬ್ಬರೂ ಜಲಮೂಲಗಳ ಸಂರಕ್ಷಣೆಗೆ ಮುಂದಾಗಬೇಕು. ಲಾರಿ ಮಾಲೀಕರು ಹಾಗೂ ಚಾಲಕರು ತಮ್ಮ ವಾಹನಗಳನ್ನು ಕೆರೆಗಳಲ್ಲಿ ತೊಳೆಯದೆ, ಕೆರೆಗಳ ನೀರನ್ನು ಕಲುಷಿತಗೊಳಿಸದೆ ಜಲಮೂಲಗಳ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಆಶಾಲತಾ, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ನೂರುದ್ದೀನ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರೇಣುಕಾಚಾರ್ಯ ಸ್ವಾಮಿ, ಸಂಜೀವಿನಿ ತಾಲೂಕು ಒಕ್ಕೂಟದ ಉಪಾಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಹೇಮಲತಾ, ಪುರಸಭೆಯ ಪರಿಸರ ಅಧಿಕಾರಿ ಅನ್ನಪೂರ್ಣ, ತಾಲೂಕು ಪಂಚಾಯಿತಿ ಕಚೇರಿಯ ರೋಷನ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸೋಮಶೇಖರ್, ಕೃಷಿಯೇತರ ಜೀವನೋಪಾಯ ವ್ಯವಸ್ಥಾಪಕಿ ಪದ್ಮಜಾ, ರವಿಚಂದ್ರ, ವಲಯ ಮೇಲ್ವಿಚಾರಕರಾದ ರುದ್ರಪ್ಪ ಹಾಗೂ ಕರಿಬಸಪ್ಪ, ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಗಳಾದ ಅನಿತಾ, ಶಕುಂತಲಾ, ಸುಮಯ್ಯ ಸೇರಿದಂತೆ ಸಂಜೀವಿನಿ ಒಕ್ಕೂಟಗಳ MBK, LCRP, KS ಹಾಗೂ PS ಸಿಬ್ಬಂದಿಗಳು ಉಪಸ್ಥಿತರಿದ್ದರು.
ಒಟ್ಟಾರೆ, ‘ದೀಪ ಸಂಜೀವಿನಿ’ ಕಾರ್ಯಕ್ರಮವು ದೀಪಾವಳಿ ಸಂಭ್ರಮದೊಂದಿಗೆ ಗ್ರಾಮೀಣ ಮಹಿಳೆಯರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ, ಅವರ ಉದ್ಯಮಶೀಲತೆ, ಸ್ವಾವಲಂಬನೆ ಹಾಗೂ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡಿದ ಅರ್ಥಪೂರ್ಣ ವೇದಿಕೆಯಾಗಿ ಗಮನ ಸೆಳೆಯಿತು.
