Wednesday, September 9, 2026
HomeDistrictsBallariಕುಡತಿನಿ ಸೊಸೈಟಿಯ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮ,ರೈತ ಸದಸ್ಯರ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಸಂಘದ...

ಕುಡತಿನಿ ಸೊಸೈಟಿಯ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮ,ರೈತ ಸದಸ್ಯರ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಸಂಘದ ನಿರಂತರ ಶ್ರಮ

[ವರದಿ : ಜಿ ಎಂ ಬಸಯ್ಯ]
ಕುರುಗೋಡು: ಕುಡತಿನಿ ಪಟ್ಟಣದಲ್ಲಿರುವ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮ ಹಾಗೂ ವಾರ್ಷಿಕ ಮಹಾಜನ ಸಭೆ ಬುಧವಾರ ಸಂಭ್ರಮದಿಂದ ನಡೆಯಿತು.
ಸಂಘದ ಅಧ್ಯಕ್ಷ ಗುಂಡಾಲ ಎರ್ರಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಜನ ಸಭೆಯಲ್ಲಿ ಸಂಘದ ಸಾಧನೆಗಳು, ರೈತ ಸದಸ್ಯರಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳು ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಗುಂಡಾಲ ಎರ್ರಿಸ್ವಾಮಿ, ಕಳೆದ ಮೂರು ವರ್ಷಗಳಿಂದ ಸಂಘದ ಸದಸ್ಯರ ಕ್ಷೇಮಾಭಿವೃದ್ಧಿ ನಿಧಿಯಿಂದ ಮೃತಪಟ್ಟ ರೈತರ ಕುಟುಂಬಗಳಿಗೆ ತಲಾ ₹50 ಸಾವಿರ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಮೃತಪಟ್ಟ 9 ರೈತರ ಕುಟುಂಬಗಳಿಗೆ ತಲಾ ₹50 ಸಾವಿರದಂತೆ ಆರ್ಥಿಕ ಪರಿಹಾರ ವಿತರಿಸಲಾಗಿದೆ. ಈ ನೆರವನ್ನು ಕುಟುಂಬದವರು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

1976ರಲ್ಲಿ ರೈತ ಸೇವಾ ಸಹಕಾರ ಸಂಘವಾಗಿ ನೋಂದಣಿಗೊಂಡ ಸಂಘವು ಇದೀಗ 50 ವರ್ಷಗಳನ್ನು ಪೂರ್ಣಗೊಳಿಸಿದೆ. ಆರಂಭದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಸೀಮಿತವಾಗಿದ್ದ ಸಂಘವು ಇದೀಗ ಕೃಷಿಯೇತರ ಉದ್ದೇಶಗಳಿಗೂ ಸೇವೆ ವಿಸ್ತರಿಸಿಕೊಂಡು, ಬಹುಸೇವಾ ಸಹಕಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಸಹಕಾರ ಮೌಲ್ಯಗಳು ಹಾಗೂ ಸಹಕಾರ ತತ್ವಗಳಿಗೆ ಅನುಗುಣವಾಗಿ ಸಂಘದ ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.

ಸಂಘವು ಪ್ರಸ್ತುತ 8,210 ಸದಸ್ಯರನ್ನು ಹೊಂದಿದ್ದು, ಸುಮಾರು ₹2 ಕೋಟಿ 8 ಲಕ್ಷ ಷೇರು ಬಂಡವಾಳ ಹೊಂದಿದೆ. 1,003 ಸದಸ್ಯರಿಗೆ ಸುಮಾರು ₹11 ಕೋಟಿ 28 ಲಕ್ಷ ಕೆಪಿಸಿಸಿ ಸಾಲ, 30 ಸದಸ್ಯರಿಗೆ ಸುಮಾರು ₹1 ಕೋಟಿ 60 ಲಕ್ಷ ಮಧ್ಯಮಾವಧಿ ಸಾಲ ಹಾಗೂ 14 ಸದಸ್ಯರಿಗೆ ಸುಮಾರು ₹15 ಲಕ್ಷ ಕೃಷಿಯೇತರ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಸಂಘವು ಸುಮಾರು ₹1 ಕೋಟಿ 62 ಲಕ್ಷ ಮೌಲ್ಯದ ರಸಗೊಬ್ಬರ ವ್ಯಾಪಾರ ವಹಿವಾಟು ನಡೆಸಿದ್ದು, ಇದರಿಂದ ಸುಮಾರು ₹6 ಲಕ್ಷ 31 ಸಾವಿರ ವ್ಯಾಪಾರ ಲಾಭ ಗಳಿಸಿದೆ. ಎರಡು ಮಹಿಳಾ ಗುಂಪುಗಳಿಗೆ ಸುಮಾರು ₹5 ಕೋಟಿ 26 ಲಕ್ಷ ಸಾಲ ವಿತರಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಗಿದೆ ಎಂದು ತಿಳಿಸಿದರು.
ಇನ್ನು 480 ಕುಟುಂಬಗಳಿಗೆ ಯಶಸ್ವಿನಿ ಯೋಜನೆ ಅಳವಡಿಸಲಾಗಿದ್ದು, ಈ ಪೈಕಿ 20 ಜನರು ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಸಂಘವು ಪ್ರಸಕ್ತ ಸಾಲಿನಲ್ಲಿ ಸುಮಾರು ₹8 ಲಕ್ಷ 2 ಸಾವಿರ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷರು ವಿವರಿಸಿದರು.

ನಂತರ ಸಂಘದ ಮುಖ್ಯ ಕಾರ್ಯನಿರ್ವಾಹಕ ಆಂಜನೇಯ ಪದ್ಮಶಾಲಿ ಅವರು ಸಂಘದ ವಾರ್ಷಿಕ ವರದಿಯನ್ನು ಮಹಾಜನ ಸಭೆಯಲ್ಲಿ ಮಂಡಿಸಿದರು. ಬಳಿಕ ಸಂಘದ ಮುಂದಿನ ಅಭಿವೃದ್ಧಿ ಹಾಗೂ ರೈತ ಸದಸ್ಯರಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಕುರಿತು ರೈತರೊಂದಿಗೆ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಡಿಆರ್ ವೀರಭದ್ರಯ್ಯ, ಸಿಎ ಎರ್ರಿಸ್ವಾಮಿ, ಡಿಜಿಎಂ ಮರಿಸ್ವಾಮಿ, ಉಪಾಧ್ಯಕ್ಷ ವೈ. ಷಣ್ಮುಖ, ನಿರ್ದೇಶಕರಾದ ಪಿ. ಅನಿಲ್, ಟಿ. ಬಸವರಾಜ, ಪರಶುರಾಮ ಚೌಡ್ಕಿ, ಬಿ. ನಾಗರಾಜಪ್ಪ ಆಚಾರಿ, ಹೆಚ್. ಚಂದ್ರಹಾಸ, ಎಸ್. ನಾಗಮ್ಮ, ಮುಲ್ಲಂಗಿ ಛಾಯಾದೇವಿ, ಕೋರಿ ಮರಿಸ್ವಾಮಿ, ಎಸ್. ನೆಟಗಂಟೆಪ್ಪ, ಟಿ.ಬಿ. ಶಶಿಕಲಾ ಸೇರಿದಂತೆ ರೈತ ಸದಸ್ಯರು ಹಾಗೂ ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments