Thursday, October 8, 2026
HomeDistrictsBallariನಮೂನೆ 7ರಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದವರ ವಿರುದ್ಧ ತನಿಖೆ ನಡೆಸಲು ಕಾಂಗ್ರೆಸ್-ಸಿಪಿಐಎಂ ಆಗ್ರಹ

ನಮೂನೆ 7ರಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದವರ ವಿರುದ್ಧ ತನಿಖೆ ನಡೆಸಲು ಕಾಂಗ್ರೆಸ್-ಸಿಪಿಐಎಂ ಆಗ್ರಹ

[ವರದಿ : ಜಿ ಎಂ ಬಸಯ್ಯ]
ಕುರುಗೋಡು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು, ಸಂಪೂರ್ಣ ಪಾರದರ್ಶಕವಾಗಿ ನಡೆಸಬೇಕು. ನಮೂನೆ 7ರಲ್ಲಿ ಸುಳ್ಳು ಮಾಹಿತಿ ಸಲ್ಲಿಸಲು ಕಾರಣರಾದ ವ್ಯಕ್ತಿಗಳನ್ನು ಗುರುತಿಸಿ, ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಮಲ್ಲಿಕಾರ್ಜುನ ಆಗ್ರಹಿಸಿದರು.

ಕುರುಗೋಡು ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿರುವ ಖಾಸಗಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟದ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಸಿಪಿಐಎಂ ಪಕ್ಷಗಳ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಸ್‌ಐಆರ್‌ ಪ್ರಕ್ರಿಯೆಯನ್ನು ವೈಜ್ಞಾನಿಕ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಸದಿದ್ದರೆ, ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸುವ ನಾಗರಿಕರ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ನಾಗರಿಕನೂ ತನ್ನ ಭಾರತೀಯತೆಯನ್ನು ಸಾಬೀತುಪಡಿಸುವುದರ ಜೊತೆಗೆ, ತನ್ನ ಮತದಾನದ ಹಕ್ಕನ್ನೂ ಸಾಬೀತುಪಡಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಾಗರಿಕರ ಹಕ್ಕುಗಳ ಕುರಿತು ಅನಗತ್ಯ ಗೊಂದಲ ಉಂಟಾಗುತ್ತಿದೆ ಎಂದು ಮಲ್ಲಿಕಾರ್ಜುನ ಹೇಳಿದರು.

ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇರುವ ಮತದಾರರಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಹಾಗೂ ಮೇಲ್ಮನವಿ ಸಲ್ಲಿಸಲು ಸಮರ್ಪಕ ಅವಕಾಶ ಕಲ್ಪಿಸಬೇಕು. ವಿಶೇಷವಾಗಿ ನಮೂನೆ 7ರಲ್ಲಿ ಸುಳ್ಳು ಮಾಹಿತಿ ಸಲ್ಲಿಸಲು ಕಾರಣರಾದ ವ್ಯಕ್ತಿಗಳನ್ನು ಗುರುತಿಸಿ ವಿಚಾರಣೆ ನಡೆಸಬೇಕು. ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಕಾನೂನು ಪ್ರಕಾರ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ನಂತರ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಎಸ್. ಶಿವಶಂಕರ್ ಮಾತನಾಡಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಸಾಮಾನ್ಯ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಅಲ್ಲದೆ, ಮತದಾರರ ಪಟ್ಟಿಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು.

ಈ ಸಂದರ್ಭದಲ್ಲಿ ಮಂಜುನಾಥ ಶೆಟ್ಟಿ, ಪ್ರಭಾಕರ ಗೌಡ, ಗಾಳಿಮಲ್ಲಯ್ಯ, ಲಿಂಗಪ್ಪ, ಬಂಗಿ ಸಿದ್ದಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments