[ವರದಿ : ಜಿ ಎಂ ಬಸಯ್ಯ]
ಕುರುಗೋಡು: ಸಮೀಪದ ಶಿರಿಗೇರಿ ಪೊಲೀಸ್ ಠಾಣೆಯ ನೂತನ ಪಿಎಸ್ಐ ಆಗಿ ರೇವಣಸಿದ್ದಪ್ಪ ಅವರು ಅಧಿಕಾರ ಸ್ವೀಕರಿಸಿದರು.

ಶಿರಿಗೇರಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ವೈ. ಶಶಿಧರ ಅವರು ಬಳ್ಳಾರಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ, ತೆರವಾಗಿದ್ದ ಸ್ಥಾನಕ್ಕೆ ರೇವಣಸಿದ್ದಪ್ಪ ಅವರನ್ನು ನೂತನ ಪಿಎಸ್ಐ ಆಗಿ ನೇಮಕ ಮಾಡಲಾಗಿದೆ.
ಬಳ್ಳಾರಿ ಪೊಲೀಸ್ ವಲಯದ ಮಹಾ ನಿರೀಕ್ಷಕರ ಆದೇಶ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ರೇವಣಸಿದ್ದಪ್ಪ ಅವರು ಶಿರಿಗೇರಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಹಿಂದಿನ ಪಿಎಸ್ಐ ವೈ. ಶಶಿಧರ ಅವರು ನೂತನ ಪಿಎಸ್ಐ ರೇವಣಸಿದ್ದಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನಂತರ ವೈ. ಶಶಿಧರ ಅವರಿಗೆ ಪೊಲೀಸ್ ಸಿಬ್ಬಂದಿ, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಆತ್ಮೀಯವಾಗಿ ಬೀಳ್ಕೊಟ್ಟರು. ನೂತನ ಪಿಎಸ್ಐ ರೇವಣಸಿದ್ದಪ್ಪ ಅವರನ್ನು ಗೌರವ ಸನ್ಮಾನದೊಂದಿಗೆ ಸ್ವಾಗತಿಸಲಾಯಿತು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಪಿಎಸ್ಐ ರೇವಣಸಿದ್ದಪ್ಪ, ಶಿರಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಲಾಗುವುದು. ಯಾವುದೇ ರೀತಿಯ ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
