ಬೆಂಗಳೂರು, ನ.3:ರಾಜ್ಯಾದ್ಯಂತ ನಿಷೇಧಿತ ಚೀನಿ ಮಾಂಜಾ ಹಾಗೂ ಅಪಾಯಕಾರಿ ಸಿಂಥೆಟಿಕ್ ದಾರಗಳ ಮಾರಾಟ, ಸಂಗ್ರಹಣೆ ಮತ್ತು ಬಳಕೆಯನ್ನು ತಡೆಗಟ್ಟಲು ವಿಶೇಷ ಕಾರ್ಯಾಚರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕರಿಗೆ (ಡಿಜಿಪಿ) ಪತ್ರ ಬರೆದಿದ್ದಾರೆ.
ಗಾಳಿಪಟ ಹಾರಿಸಲು ಬಳಸುವ ಚೀನಿ ಮಾಂಜಾ, ನೈಲಾನ್ ಹಾಗೂ ಗಾಜಿನ ಪುಡಿ ಲೇಪಿತ ಸಿಂಥೆಟಿಕ್ ದಾರಗಳು ಮನುಷ್ಯರ ಜೀವಕ್ಕೆ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳಿಗೂ ಮತ್ತು ಪರಿಸರಕ್ಕೂ ತೀವ್ರ ಅಪಾಯವನ್ನುಂಟುಮಾಡುತ್ತಿವೆ. ಇಂತಹ ಅಪಾಯಕಾರಿ ದಾರಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿರುವ ಘಟನೆಗಳು ವರದಿಯಾಗಿವೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ನೀಡಿರುವ ಆದೇಶ ಹಾಗೂ ಅದನ್ನು ಜಾರಿಗೊಳಿಸುವ ಸಂಬಂಧದ ಅರ್ಜಿ ಸಂಖ್ಯೆ 06/2020ರ ಖಾಲಿದ್ ಅಶ್ರಫ್ ವಿರುದ್ಧ ಭಾರತ ಸರ್ಕಾರ ಪ್ರಕರಣದಲ್ಲಿನ ನಿರ್ದೇಶನಗಳು ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ, ನೈಲಾನ್ ಅಥವಾ ಯಾವುದೇ ಜೈವಿಕವಾಗಿ ವಿಘಟನೆಯಾಗದ ಕೃತಕ ವಸ್ತುಗಳಿಂದ ತಯಾರಿಸಲಾದ ಮಾಂಜಾ ದಾರಗಳ ಬಳಕೆ ಮತ್ತು ಮಾರಾಟದ ಮೇಲೆ ದೇಶಾದ್ಯಂತ ನಿಷೇಧ ವಿಧಿಸಲಾಗಿದೆ.
ಆದರೆ, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವಿದ್ಯಾ ಮಂಜುನಾಥ ಗೌಡರ್ ಎಂಬ ಮಹಿಳೆಯ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ದಾರುಣ ಘಟನೆ ರಾಜ್ಯದಲ್ಲಿ ಆತಂಕ ಮೂಡಿಸಿದೆ. ಇಂತಹ ಅಪಾಯಕಾರಿ ದಾರಗಳು ರಾಜ್ಯದ ವಿವಿಧ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿರುವುದು ಮತ್ತು ಬಳಕೆಯಾಗುತ್ತಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಜೀವ ರಕ್ಷಣೆ ಹಾಗೂ ಪ್ರಾಣಿ-ಪಕ್ಷಿಗಳ ಸುರಕ್ಷತೆಯ ದೃಷ್ಟಿಯಿಂದ ರಾಜ್ಯಾದ್ಯಂತ ಗಾಳಿಪಟ ಮತ್ತು ಆಟಿಕೆಗಳ ಅಂಗಡಿಗಳು, ಗೋದಾಮುಗಳ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಬೇಕು. ನಿಷೇಧಿತ ಮಾಂಜಾ ದಾರಗಳನ್ನು ಜಪ್ತಿ ಮಾಡಿ, ಅಕ್ರಮವಾಗಿ ಚೀನಿ ಹಾಗೂ ಸಿಂಥೆಟಿಕ್ ಮಾಂಜಾ ದಾರಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು, ಆನ್ಲೈನ್ ಮಾರಾಟ ವೇದಿಕೆಗಳು, ಸಂಗ್ರಹಕಾರರು ಮತ್ತು ಅವುಗಳನ್ನು ಬಳಸುವವರ ವಿರುದ್ಧ ಅನ್ವಯಿಸುವ ಕಾನೂನಿನಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಅಲ್ಲದೆ, ನಿಷೇಧಿತ ಮಾಂಜಾ ದಾರಗಳ ಅಪಾಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳು, ಪತ್ರಿಕೆಗಳು, ಟಿವಿ ಮಾಧ್ಯಮಗಳು ಹಾಗೂ ರೇಡಿಯೋಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಈ ಸಂಬಂಧ ರಾಜ್ಯದ ಎಲ್ಲಾ ಪೊಲೀಸ್ ಘಟಕಾಧಿಕಾರಿಗಳಿಗೆ ಸೂಕ್ತ ಆದೇಶ ಮತ್ತು ನಿರ್ದೇಶನಗಳನ್ನು ಹೊರಡಿಸಿ, ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಡಿಜಿಪಿಯವರಿಗೆ ಮೋಹನ್ ಕುಮಾರ್ ದಾನಪ್ಪ ಅವರು ಮನವಿ ಮಾಡಿದ್ದಾರೆ.
ಮನುಷ್ಯರ ಹಾಗೂ ಮೂಕಪ್ರಾಣಿಗಳ ಜೀವಕ್ಕೆ ಕಂಟಕವಾಗಿರುವ ನಿಷೇಧಿತ ಮಾಂಜಾ ದಾರದ ಅಕ್ರಮ ಮಾರಾಟ ಮತ್ತು ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲು ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಪತ್ರದ ಪ್ರಮುಖ ಆಶಯವಾಗಿದೆ.
