ವರದಿ : ಜಿ ಎಂ ಬಸಯ್ಯ..
ಕುರುಗೋಡು ತಾಲ್ಲೂಕಿನ ರೈತರಿಗೆ ಯೂರಿಯಾ ಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯದರ್ಶಿ ವಾಗೀಶ ಶಿವಾಚಾರ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ತಾಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಕೃಷಿ ಇಲಾಖೆಯಿಂದ ಸರ್ಕಾರ ನೀಡುವ ಸೌಲಭ್ಯಗಳ ಕುರಿತು ಸಮರ್ಪಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗರ್ಜೆಪ್ಪ, ಕಳೆದ ವರ್ಷ ಮೆಕ್ಕೆಜೋಳದ ಬೆಳೆ ವಿಸ್ತೀರ್ಣ ಹೆಚ್ಚಾದ ಕಾರಣ ಯೂರಿಯಾ ಗೊಬ್ಬರದ ಬೇಡಿಕೆ ಏರಿಕೆಯಾಗಿದೆ ಎಂದರು. ತಾಲ್ಲೂಕಿನ ನೀರಾವರಿ ಪ್ರದೇಶಗಳಲ್ಲಿ ಆಗಸ್ಟ್ ತಿಂಗಳಿಂದ ಕೃಷಿ ಚಟುವಟಿಕೆಗಳು ವೇಗ ಪಡೆಯಲಿದ್ದು, ಸುಮಾರು 40 ಸಾವಿರ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಜಿಲ್ಲೆಯಲ್ಲಿ ಯೂರಿಯಾ ಲಭ್ಯವಿದ್ದು, ಕೃಷಿ ಚಟುವಟಿಕೆ ಆರಂಭವಾಗುವ ಮೊದಲು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಗೊಬ್ಬರ ಖರೀದಿಸಲು ಅವಕಾಶವಿಲ್ಲ ಎಂದು ತಿಳಿಸಿದರು. ತಾಲ್ಲೂಕಿನಲ್ಲಿ ಖರೀದಿಸಿದ ಗೊಬ್ಬರವನ್ನು ನೆರೆಯ ಜಿಲ್ಲೆಗಳಿಗೆ ಸಾಗಿಸುವವರ ಮೇಲೆ ನಿಗಾವಹಿಸಲಾಗುವುದು ಎಂದರು.
ಎಫ್ಐಡಿ ಹೊಂದಿರುವ ರೈತರಿಗೆ ಮಾತ್ರ ಎಕರೆಗೆ ಒಂದು ಚೀಲದಂತೆ ಯೂರಿಯಾ ಮಾರಾಟ ಮಾಡಲು ಗೊಬ್ಬರ ವರ್ತಕರಿಗೆ ನಿರ್ದೇಶನ ನೀಡಲಾಗಿದೆ. ಅಧಿಕಾರಿಗಳನ್ನೊಳಗೊಂಡ ಜಾಗೃತಿ ದಳ ರಚಿಸಲಾಗಿದ್ದು, ಗೊಬ್ಬರ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ದಾಸ್ತಾನು ಹಾಗೂ ವಹಿವಾಟಿನ ಮಾಹಿತಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬೇಸಿಗೆ ಆರೋಗ್ಯ ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸೂಚಿಸಲಾಯಿತು. ಗಣಿಬಾಧಿತ ಪ್ರದೇಶಾಭಿವೃದ್ಧಿ ನಿಧಿಯಿಂದ ಆಸ್ಪತ್ರೆಗಳಿಗೆ ಅಗತ್ಯವಿರುವ ಪರಿಕರಗಳನ್ನು ಖರೀದಿಸಲು ಬೇಡಿಕೆ ಸಲ್ಲಿಸುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಯಿತು.
ಈ ವೇಳೆ ಆರೋಗ್ಯಾಧಿಕಾರಿ ಮಂಜುನಾಥ ಮಾತನಾಡಿ, ಎಳುಬೆಂಚಿ ಗ್ರಾಮದಲ್ಲಿ ಟಿ.ಬಿ. ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, 59 ಜನರಲ್ಲಿ ಅಸಹಜ ಫಲಿತಾಂಶ ಕಂಡುಬಂದಿದೆ ಎಂದು ಮಾಹಿತಿ ನೀಡಿದರು. ಎನ್ಐಸಿಯು ವಾರ್ಡ್, ಥೈರಾಯ್ಡ್ ಪರೀಕ್ಷಾ ಯಂತ್ರ ಹಾಗೂ ಹೆಚ್ಚುವರಿ ಆಂಬುಲೆನ್ಸ್ಗಾಗಿ ಬೇಡಿಕೆ ಸಲ್ಲಿಸಲಾಗುವುದು ಎಂದರು.
ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಘಟಕಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ, ವರದಿ ಬಂದ ನಂತರವೇ ನೀರು ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು. ಮುಂದಿನ ಎರಡು ತಿಂಗಳು ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಯಿತು.
ಸಭೆಯಲ್ಲಿ ಯೋಜನಾಧಿಕಾರಿ ರಾಧಿಕಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
