ವರದಿ: ಜಿ ಎಂ ಬಸಯ್ಯ
ಕುರುಗೋಡು ಸಮೀಪದ ಕುಡಿತಿನಿಯ ಪಟ್ಟಣದಲ್ಲಿ ಭೂ ಸಂತ್ರಸ್ಥ ರೈತರು ಹಲವು ದಿನಗಳಿಂದ ನಿರಂತರ ಹೋರಾಟ ಮತ್ತು ಈಗ ಉಪವಾಸ ಸತ್ಯಾಗ್ರಹ ಮಾಡಿಕೊಂಡು ಬಂದಿದ್ದು, ಆದರೆ, ಇಲ್ಲಿತನಕ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ಭೂ ಸಂತ್ರಸ್ಥ ರೈತರು ಅತಿ ಶೀಘ್ರದಲ್ಲಿ ಭೂ ಪ್ರವೇಶ ಮಾಡಲಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ರಾಜಶೇಖರ ಹೇಳಿದರು.
ಸಮೀಪದ ಕುಡತಿನಿ ಪಟ್ಟಣದಲ್ಲಿ ಭೂ ಸಂತ್ರಸ್ತರ ರೈತರ ಹೋರಾಟವು ಗುರುವಾರ 1245ನೇ ದಿನಕ್ಕೆ ಕಾಲಿಡುವ ಜೊತೆಗೆ ಮೇ.೧೨ರಿಂದ ಆರಂಭಗೊಂಡ ಗುರುವಾರದ ಮೂರನೇ ದಿನದ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ನೀಡಿದ ನಂತರ ಮಾತನಾಡಿ, ಕುಡತಿನಿಯಲ್ಲಿ ರೈತರು ಭೂ ಸ್ವಾಧೀನ ಮತ್ತು ಅಕ್ರಮ ಭೂ ವರ್ಗಾವಣೆ ಖಂಡಿಸಿ ದೀರ್ಘಕಾಲದಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. 2012ರಲ್ಲಿ ಅರ್ಸೆಲರ್ ಮಿತ್ತಲ್ ಕಂಪನಿಗಾಗಿ ಕೆಐಎಡಿಬಿ ಅತಿ ಕಡಿಮೆ ಬೆಲೆಗೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು, ಇದುವರೆಗೂ ಕಂಪನಿಯು ಉಪಯೋಗಿಸಿರಲಿಲ್ಲ. ಈಗ ಈ ಜಮೀನನ್ನು ಜಿಂದಾಲ್ ಕಂಪನಿಗೆ ಅಕ್ರಮವಾಗಿ ವರ್ಗಾವಣೆ ಮಾಡುತ್ತಿರುವುದು ಸರಿಯಲ್ಲ ಕೆಐಡಿಬಿ ಬ್ರೋಕರ್ ಕೆಲಸ ಮಾಡುತ್ತಿದೆ. ಭೂ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸುವ ಜೊತೆಗೆ ಮತ್ತು ಅಕ್ರಮ ಭೂ ವರ್ಗಾವಣೆಯನ್ನು ತಕ್ಷಣವೇ ತಡೆಯಬೇಕಾಗಿದೆ.
ನಮ್ಮ ಊರು ನಮ್ಮ ಹೊಣೆ ಎಂಬಂತೆ ಸ್ಥಳೀಯ ರೈತರ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಂತುಕೊಳ್ಳುತ್ತೇವೆ ಎಂದರು.
ಭೂ ಸಂತ್ರಸ್ಥರ ಹೋರಾಟ ಸಮಿತಿ ಗೌರವಾಧ್ಯಕ್ಷ ಯು.ಬಸವರಾಜ ಮಾತನಾಡಿ, ಭೂ ಬೆಲೆಯಲ್ಲಿ ರೈತರಿಗೆ ಮೋಸವಾಗಿದ್ದು, ನ್ಯಾಯ ಕೊಡಿಸಬೇಕಾದ ಸಿಎಂ ಸಿದ್ದರಾಮಯ್ಯ ಮೂಗಿಗೆ ತುಪ್ಪ ಸವರುವ ಜೊತೆಗೆ ಮೌನವಹಿಸಿರುವುದು ದುರ್ಧೈವವಾಗಿದೆ. ಕುಡತಿನಿ, ಏಳು ಗ್ರಾಮಗಳ ಸಾವಿರಾರು ಎಕರೆಗೂ ಹೆಚ್ಚಿನ ಭೂಮಿಯನ್ನು ಕೆಐಡಿಬಿಯು ಸ್ವಾಧೀನ ಮಾಡಿಕೊಂಡು, ಬೃಹತ್ ಕೈಗಾರಿಕೆಗಳಿಗೆ ನೀಡಿದೆ. ಮತ್ತು ಕುಡತಿನಿ ಸುತ್ತಮುತ್ತಲಿನ ಸಾವಿರಾರು ಎಕರೆ ಭೂಮಿಯನ್ನು ಜಿಂದಾಲ್ಗೆ ವರ್ಗಾಯಿಸುವ ಸರ್ಕಾರದ ನಿರ್ಧಾರ ತುಂಬ ಖಂಡನೀಯವಾಗಿದೆ.
ಎರಡನೇ ಹಂತದಲ್ಲಿ ಹೋರಾಟ ಮಾಡಲಾಗುತ್ತಿದೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದರು. ಮತ್ತು ಒಂದು ಬಾರಿ ಬೆಂಗಳೂರಿನಲ್ಲಿ ಭೇಟಿ ಮಾಡಿದಾಗ ಚರ್ಚಿಸಿ ಪರಿಶೀಲಿಸಿ ಸೂಕ್ತಕ್ರಮದ ಭರವಸೆ ನೀಡಿದ್ದರು. ಇಲ್ಲಿನ ನಿರಂತರ ಹೋರಾಟಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಪಕ್ಷತೀತವಾಗಿ ಬೆಂಬಲ ನೀಡಿದ್ದಾರೆ. ಸರ್ಕಾರ ಗಂಭೀರವಾಗಿ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ನಿಟ್ಟಿನಲ್ಲಿ ಸಾಥ್ ನೀಡಿದ್ದಾರೆ. ಇದರಿಂದ ಐಕ್ಯತೆ ಮೂಡಿದೆ. ಮೇ.೧೬ರ ಶನಿವಾರದಂದು ರೈತರೆಲ್ಲರೂ ಜಮೀನು ಪ್ರವೇಶ ಮಾಡಲಿದ್ದೇವೆ. ಮತ್ತು ಹೋರಾಟ ತಡೆದರೆ, ಮೇ.೨೫ರಂದು ರಸ್ತೆ ಚಳುವಳಿ, ಜೂ.೧ಕ್ಕೆ ೫೦೦ ಬೈಕ್ ರ್ಯಾಲಿ ಮಾಡುತ್ತೇವೆ. ೧೫ರೊಳಗೆ ಬಳ್ಳಾರಿ ಬಂದ್ ಮಾಡಿ, ಮತ್ತು ಅದೇ ದಿನದಂದು ರಾಜ್ಯ ಬಂದ್ ಮಾಡುವ ಸಾಧ್ಯತೆ ಇದೆ. ರೈತರಿಗೆ ನ್ಯಾಯ ಸಿಗುವರೆಗೂ ಹೋರಾಟ ಮಾಡುತ್ತೇವೆ ಎಂದರು.
ದಲಿತ ಮುಖಂಡ ಸಿ.ಆನಂದ ಅಂಬೇಡ್ಕರ್ ಅವರ ಕ್ರಾಂತಿ ಗೀತೆ ಹಾಡುವ ಮೂಲಕ ಹೋರಾಟಕ್ಕೆ ಮತ್ತಷ್ಟು ಹುಮ್ಮಸ್ಸು ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಂಗ್ಲಿ ಸಾಬ್, ಅಂಬರೇಶ, ಮಹಾಂತೇಶ, ಜೆ.ಎಸ್.ವೆಂಕಟರಮಣಬಾಬು, ಜಾಕೀರ್, ಪಂಪಾಪತಿ, ತಿಪ್ಪೇಸ್ವಾಮಿ, ಲೆನಿನ್, ಸಿದ್ದಪ್ಪ, ಸತ್ಯಬಾಬು ಸೇರಿದಂತೆ ರೈತರಿದ್ದರು.
