ಬಳ್ಳಾರಿ,ಜೂ.06:ಯಾವುದೇ ಒಬ್ಬ ಅರ್ಹ ಮತದಾರನೂ ಪಟ್ಟಿಯಿಂದ ಹೊರಗುಳಿಯಬಾರದು ಮತ್ತು ಯಾವುದೇ ಅನರ್ಹ, ಮೃತ, ಸ್ಥಳಾಂತರಗೊAಡ ಅಥವಾ ನಕಲಿ ಮತದಾರರ ಹೆಸರುಗಳು ಪಟ್ಟಿಯಲ್ಲಿ ಇರಬಾರದು. ಸಂಪೂರ್ಣ ಪರಿಶುದ್ಧ ಮತ್ತು ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದೇ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಸಹಾಯಕ ಆಯುಕ್ತರು ಹಾಗೂ 93-ಬಳ್ಳಾರಿ ತಾಲ್ಲೂಕು ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯೂ ಆದ ರಾಜೇಶ್ ಹೆಚ್.ಡಿ ಅವರು ಹೇಳಿದರು.
ಭಾರತ ಚುನಾವಣಾ ಆಯೋಗವು ಹೊರಡಿಸಿರುವ ‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ’ ವೇಳಾಪಟ್ಟಿಯ ಕುರಿತು ನಗರದ ನೂತನ ಜಿಲ್ಲಾಡಳಿತ ಭವನದ ‘ಎ’ ಬ್ಲಾಕ್ ನ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗವು 2026 ನೇ ಸಾಲಿನಲ್ಲಿ ಜರುಗಲಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ದಿನಾಂಕಗಳನ್ನು ನಿಗದಿಪಡಿಸಿ ಮಹತ್ವದ ಅಧಿಸೂಚನೆ ಹೊರಡಿಸಿದೆ. ಅರ್ಹತಾ ದಿನಾಂಕ 01.10.2026 ಕ್ಕೆ ಅನ್ವಯವಾಗುವಂತೆ ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ ಹಾಗೂ ದೋಷರಹಿತ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಸಾಮಾನ್ಯವಾಗಿ ವರ್ಷಕ್ಕೊಮ್ಮೆ ನಡೆಯುವ ಸಂಕ್ಷಿಪ್ತ ಪರಿಷ್ಕರಣೆಗಿಂತ ಇದು ಭಿನ್ನವಾಗಿದ್ದು, ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಂದು ಹೆಸರನ್ನು ಆಳವಾಗಿ ಪರಿಶೀಲಿಸುವ ಪ್ರಕ್ರಿಯೆಯಾಗಿದೆ. ಈ ಬಾರಿ ಎಸ್‌ಐಆರ್ ನ ಪ್ರಮುಖ ಬದಲಾವಣೆಯೆಂದರೆ ಪ್ರತಿ ಮತದಾರರನ್ನು ಅವರ ಕುಟುಂಬದ ಸದಸ್ಯರೊಂದಿಗೆ ಡಿಜಿಟಲ್ ಆಗಿ ಲಿಂಕ್ ಮಾಡುವುದರಿಂದ ನಕಲಿ ಮತದಾರರನ್ನು ಪತ್ತೆಹಚ್ಚಲು ಸುಲಭವಾಗುತ್ತದೆ ಎಂದರು.
ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಖಚಿತಪಡಿಸಿಕೊಳ್ಳುತ್ತಾರೆ. ಮರಣ ಹೊಂದಿದವರು, ಬೇರೆ ಕಡೆಗೆ ವಲಸೆ ಹೋದವರು ಮತ್ತು ಒಂದಕ್ಕಿAತ ಹೆಚ್ಚು ಕಡೆ ಹೆಸರಿರುವ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು. ಅರ್ಹತೆ ಇದ್ದೂ ಮತದಾನದ ಹಕ್ಕಿನಿಂದ ವಂಚಿತರಾದ ಯುವಕರು ಹಾಗೂ ನಾಗರಿಕರ ಹೆಸರನ್ನು ಸೇರಿಸುವುದು ಇದರ ಉದ್ದೇಶವಾಗಿದೆ ಎಂದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ವೇಳಾಪಟ್ಟಿ:
2026ರ ಅಕ್ಟೋಬರ್ 1 ರನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಕೆಳಗಿನ ವೇಳಾಪಟ್ಟಿಯಂತೆ ಪರಿಷ್ಕರಣೆ ಜರುಗಲಿದೆ.
ಪೂರ್ವಸಿದ್ಧತೆ, ತರಬೇತಿ ಮತ್ತು ಮುದ್ರಣ ಕಾರ್ಯ: ಜೂನ್ 20, 2026 ರಿಂದ ಜೂನ್ 29, 2026.
ಬಿ.ಎಲ್.ಓ ಗಳಿಂದ ಮನೆ ಮನೆ ಭೇಟಿ ಮತ್ತು ಪರಿಶೀಲನೆ: ಜೂನ್ 30, 2026 ರಿಂದ ಜುಲೈ 29, 2026.
ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ: ಜುಲೈ 29, 2026 ರೊಳಗೆ.
ಕರಡು ಮತದಾರರ ಪಟ್ಟಿ ಪ್ರಕಟಣೆ: ಆಗಸ್ಟ್ 5, 2026. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ: ಆಗಸ್ಟ್ 5, 2026 ರಿಂದ ಸೆಪ್ಟೆಂಬರ್ 4, 2026.
ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಅವಧಿ: ಆಗಸ್ಟ್ 5, 2026 ರಿಂದ ಅಕ್ಟೋಬರ್ 3, 2026.
ಅಂತಿಮ ಮತದಾರರ ಪಟ್ಟಿ ಪ್ರಕಟಣೆ: ಅಕ್ಟೋಬರ್ 7, 2026.
93-ಬಳ್ಳಾರಿ ವಿಧಾನಸಭಾ ಕ್ಷೇತ್ರದ ಅಂಕಿ-ಅAಶ:
ಪುರುಷ ಮತದಾರರು-1,20,948
ಮಹಿಳಾ ಮತದಾರರು-1,30,275
ಇತರರು-54
ಒಟ್ಟು ಮತದಾರರು-2,51,277.
ಮ್ಯಾಪಿಂಗ್ ಶೇ. 97.21 ರಷ್ಟು ಪ್ರಗತಿ ಸಾಧನೆ
‘93-ಬಳ್ಳಾರಿ ಗ್ರಾಮೀಣ ಎಸ್‌ಐಆರ್’ ವ್ಯಾಪ್ತಿಯಲ್ಲಿ ಮತದಾರರ ಮತ್ತು ಅವರ ಕುಟುಂಬದ ಮ್ಯಾಪಿಂಗ್ ಪ್ರಕ್ರಿಯೆಯು ಒಟ್ಟಾರೆ ಶೇಕಡಾ 97.21 ರಷ್ಟು ಪ್ರಗತಿಯನ್ನು ದಾಖಲಿಸಲಾಗಿದೆ. ಒಟ್ಟು 2,51,277 ಮತದಾರರ ಪೈಕಿ ಕೇವಲ 7,002 ಮ್ಯಾಪಿಂಗ್ ಪ್ರಕ್ರಿಯೆಗಳು ಮಾತ್ರ ಬಾಕಿ ಉಳಿದಿದ್ದು, ಬಾಕಿ ಉಳಿದಿರುವ ಕಾರ್ಯವನ್ನು ಶೀಘ್ರದಲ್ಲೇ ಮುಗಿಸಲು ಬಿ.ಎಲ್.ಒ ಅಧಿಕಾರಿಗಳು ತೀವ್ರ ತರಬೇತಿ ಮತ್ತು ಮುತುವರ್ಜಿಯಿಂದ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಮತ್ತು ಮತದಾರರು ವಹಿಸಬೇಕಾದ ಜಾಗ್ರತೆ:
ಈ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಣ್ಣ ತಪ್ಪುಗಳಿದ್ದರೂ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮತದಾರರು ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಅಥವಾ ವೋಟರ್ ಹೆಲ್ಪ್ಲೈನ್ ಅಪ್ ಬಳಸಿ ನಿಮ್ಮ ಹೆಸರು ಪ್ರಸ್ತುತ ಪಟ್ಟಿಯಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಜೂನ್ 30 ರಿಂದ ಜುಲೈ 29 ರ ನಡುವೆ ಮನೆಗೆ ಬೂತ್ ಮಟ್ಟದ ಅಧಿಕಾರಿಗಳು ಬಂದಾಗ ಸರಿಯಾದ ಮಾಹಿತಿ ಮತ್ತು ಕುಟುಂಬದ ವಿವರಗಳನ್ನು ನೀಡಿ ‘ಫ್ಯಾಮಿಲಿ ಮ್ಯಾಪಿಂಗ್’ ಪೂರ್ಣಗೊಳಿಸಿಕೊಳ್ಳಬೇಕು. ಇತ್ತೀಚೆಗೆ ಮನೆ ಬದಲಾಯಿಸಿದ್ದರೆ ಅಥವಾ ಹೊಸ ಊರಿಗೆ ಬಂದಿದ್ದರೆ ಪ್ರಸ್ತುತ ವಿಳಾಸದ ದಾಖಲೆ ನೀಡಿ ಹೆಸರನ್ನು ಆಯಾ ಮತದಾನ ಕೇಂದ್ರಕ್ಕೆ ವರ್ಗಾಯಿಸಿಕೊಳ್ಳಬೇಕು. ಅಧಿಕಾರಿಗಳ ಸಮೀಕ್ಷೆ ವೇಳೆ ಸಾಧ್ಯವಾದಷ್ಟು ಲಭ್ಯವಿರಬೇಕು. ಇತ್ತೀಚಿನ (ವೈಟ್ ಬ್ಯಾಕ್‌ಗ್ರೌಂಡ್) ಭಾವಚಿತ್ರ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ನಾಗರಿಕರು, ಎಲ್ಲಾ ರಾಜಕೀಯ ಪಕ್ಷದ ಪ್ರತಿನಿಧಿಗಳು, ಮಾಧ್ಯಮ ಮಿತ್ರರು ಹಾಗೂ ಅಧಿಕಾರಿ ವರ್ಗದವರು ಸಕಾರಾತ್ಮಕವಾಗಿ ಜಂಟಿಯಾಗಿ ಕಾರ್ಯನಿರ್ವಹಿಸಿ, ದೋಷರಹಿತವಾಗಿರುವಂತಹ ಪರಿಶುದ್ಧ ಮತದಾರರ ಪಟ್ಟಿಯನ್ನು ಯಶಸ್ವಿಯಾಗಿ ತಯಾರಿಸುವಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಸಹಕರಿಸಬೇಕು ಎಂದು ತಿಳಿಸಿದರು.
ಈ ವೇಳೆ ಬಳ್ಳಾರಿ ತಾಲ್ಲೂಕು ತಹಶೀಲ್ದಾರಾದ ಟಿ.ರೇಖಾ, ತಾಪಂ ಇಓ ಶ್ರೀಧರ್ ಐ ಬಾರಿಕರ ಸೇರಿದಂತೆ ಇತರರಿದ್ದರು.
