Saturday, June 20, 2026
HomeVijayanagaraತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆಗೆ ದಿನಾಂಕ ಫಿಕ್ಸ್‌; 3 ರಾಜ್ಯದ CM's ಭಾಗಿ;...

ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆಗೆ ದಿನಾಂಕ ಫಿಕ್ಸ್‌; 3 ರಾಜ್ಯದ CM’s ಭಾಗಿ; ಡ್ಯಾಂನಲ್ಲಿ ನೀರೆಷ್ಟಿದೆ?

ಕಳೆದ ವರ್ಷ ದುರಸ್ತಿಗೀಡಾಗಿದ್ದ ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್‌ ಗೇಟ್‌ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಲೋಕಾರ್ಪಣೆಗೊಳ್ಳಲಿದೆ. 51 ಕೋಟಿ ರೂ. ವೆಚ್ಚದ ಈ ಗೇಟ್‌ಗಳನ್ನು ಡಿಸಿಎಂ ಡಿಕೆ ಶಿವಕುಮಾರ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಉದ್ಘಾಟಿಸಲಿದ್ದಾರೆ. ಒಂದು ಬೆಳೆ ತ್ಯಾಗ ಮಾಡಿದ್ದ ರೈತರಿಗೆ, ಮುಂಗಾರಿಗೂ ಮುನ್ನವೇ ಕಾಮಗಾರಿ ಮುಗಿದಿರುವುದು ಕಲ್ಯಾಣ ಕರ್ನಾಟಕ ಮತ್ತು ನೆರೆ ರಾಜ್ಯಗಳ ರೈತರಲ್ಲಿ ಹರ್ಷ ಮೂಡಿಸಿದೆ.

ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯವು ಮಳೆಗಾಲ ಆರಂಭವಾಗುತ್ತಿದ್ದಂತೆ ಸಂಪೂರ್ಣ ಸಿದ್ಧ.
ಟಿಬಿ ಡ್ಯಾಂ ಹೊಸ ಕ್ರಸ್ಟ್‌ ಗೇಟ್‌ಗಳ ಲೋಕಾರ್ಪಣೆಯು ಜೂನ್‌ 25 ರಂದು ನಡೆಯಲಿದೆ.
ಜೂನ್‌ 16 ರ ವೇಳೆಗೆ ತುಂಗಭದ್ರಾ ಡ್ಯಾಂನಲ್ಲಿ 9 ಟಿಎಂಸಿ ನೀರಿದೆ; ಕಳೆದ ವರ್ಷ ಇದೇ ವೇಳೆಗೆ 28 ಟಿಎಂಸಿ ನೀರಿತ್ತು.

ಜೂನ್‌ 25 ಕ್ಕೆ ತುಂಗಭದ್ರಾ ಜಲಾಶಯದ ಕ್ರೆಸ್ಟ್‌ ಗೇಟ್ ಲೋಕಾರ್ಪಣೆ.(ಗ್ಯಾಲರಿ- Agencies)
ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಗುಡ್‌ನ್ಯೂಸ್‌. ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯವು ಮಳೆಗಾಲ ಆರಂಭವಾಗುತ್ತಿದ್ದಂತೆ ಸಂಪೂರ್ಣ ಸಿದ್ಧವಾಗಿದ್ದು, ಹೊಸ ಕ್ರಸ್ಟ್‌ ಗೇಟ್‌ಗಳ ಲೋಕಾರ್ಪಣೆಯು ಜೂನ್‌ 25 ರಂದು ನಡೆಯಲಿದೆ.

ಕಳೆದ ಮಳೆಗಾಲದಲ್ಲಿ ದುರಸ್ಥಿಗೀಡಾಗಿದ್ದ ಡ್ಯಾಂನ ಗೇಟ್‌ಗಳನ್ನು ಬದಲಾವಣೆ ಮಾಡಲಾಗಿದೆ. ಜೂನ್ 25ರಂದು ಕೊಪ್ಪಳ ತಾಲೂಕಿನ ಮುನಿರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಮುಂಗಾರು ಹಂಗಾಮಿನ ಹೊತ್ತಿಗೇ ಕಾಮಗಾರಿ ಪೂರ್ಣಗೊಂಡಿರುವುದು ಈ ಮೂಲಕ ಕಲ್ಯಾಣ ಕರ್ನಾಟಕದ 4 ಜಿಲ್ಲೆಗಳು ಸೇರಿದಂತೆ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಲಕ್ಷಾಂತರ ರೈತರಲ್ಲಿ ಹರ್ಷ ಮೂಡಿಸಿದೆ.

ಗೇಟ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿ?
ಈ ಮಹತ್ವದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ರಾಜ್ಯದ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕೊಪ್ಪಳ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.

1953ರಲ್ಲಿ ನಿರ್ಮಾಣಗೊಂಡಿದ್ದ ತುಂಗಭದ್ರಾ ಜಲಾಶಯದ ಮೂಲ ಗೇಟ್‌ಗಳ ಜೀವಿತಾವಧಿ ಕೇವಲ 50 ವರ್ಷಗಳು ಎಂದು ತಜ್ಞರು ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಆದರೂ ನಿರೀಕ್ಷೆಗೂ ಮೀರಿ ಬಾಳಿಕೆ ಬಂದಿದ್ದರಿಂದ ಹಳೆಯ ಗೇಟ್‌ಗಳನ್ನೇ ಮುಂದುವರಿಸಿಕೊಂಡು ಬರಲಾಗಿತ್ತು. ಆದರೆ, 2024ರ ಆಗಸ್ಟ್ 10ರಂದು ರಾತ್ರಿ ಅಣೆಕಟ್ಟಿನ ಸುಮಾರು 60 ಅಡಿ ಅಗಲ ಹಾಗೂ 20 ಅಡಿ ಎತ್ತರದ ಬೃಹತ್ ಗೇಟ್‌ವೊಂದು ಇದ್ದಕ್ಕಿದ್ದಂತೆ ಕಳಚಿ ಬಿದ್ದಿತ್ತು. ಇದರಿಂದಾಗಿ ಅಪಾರ ಪ್ರಮಾಣದ ನೀರು ನದಿಗೆ ಪೋಲಾಗಿ, ಭಾರಿ ರಾಜಕೀಯ ವಾಕ್ಸಮರ ಹಾಗೂ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು.

51 ಕೋಟಿ ವೆಚ್ಚದ ಕಾಮಗಾರಿ
ಕಳೆದ ಮಳೆಗಾಲಯದಲ್ಲಿ ಸಂಭವಿಸಿದ ದುರಂತದ ಬಳಿಕ ಎಚ್ಚೆತ್ತ ಸರ್ಕಾರ, ತೀವ್ರ ಒತ್ತಡದ ಮೇರೆಗೆ ಕಳೆದ ಡಿಸೆಂಬರ್‌ನಲ್ಲಿ ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆಗೆ ಮುಂದಾಗಿತ್ತು. ಪಶ್ಚಿಮ ಬಂಗಾಳದ ಫರಕ್ಕಾ ಬ್ಯಾರೇಜ್, ರಾಜ್ಯದ ಕೆಆರ್‌ಎಸ್ ಹಾಗೂ ನಾರಾಯಣಪುರ ಡ್ಯಾಮ್‌ಗಳಿಗೆ ಗೇಟ್ ಅಳವಡಿಸಿದ ಸುದೀರ್ಘ ಅನುಭವ ಹೊಂದಿರುವ ಗುಜರಾತ್‌ನ ಅಹಮದಾಬಾದ್ ಮೂಲದ ‘ಹಾರ್ಡ್‌ವೇರ್ ಟೂಲ್ಸ್ ಮತ್ತು ಮೆಷಿನ್ ಪ್ರಾಜೆಕ್ಟ್ಸ್ ಲಿಮಿಟೆಡ್’ ಕಂಪನಿಗೆ ಈ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಬರೋಬ್ಬರಿ 51.81 ಕೋಟಿ ರೂ. ವೆಚ್ಚದಲ್ಲಿ ನೂತನ ಗೇಟ್‌ಗಳನ್ನು ನಿರ್ಮಿಸಲಾಗಿದ್ದು, ಗದಗ ಸಮೀಪದ ಅಡವಿಸೋಮಾಪುರ ಹಾಗೂ ವಿಜಯನಗರ ಜಿಲ್ಲೆಯ ಟಿಬಿ ಬೋರ್ಡ್ ಯಾರ್ಡ್‌ಗಳಲ್ಲಿ ಈ ಗೇಟ್‌ಗಳ ತಯಾರಿಕಾ ಕಾರ್ಯ ಭರದಿಂದ ಸಾಗಿತ್ತು.

ಒಂದು ಬೆಳೆ ತ್ಯಾಗ ಮಾಡಿದ್ದ ರೈತರು
ಹೊಸ ಗೇಟ್ ಅಳವಡಿಕೆ ಕಾಮಗಾರಿ ನಡೆಯಬೇಕಿದ್ದರಿಂದ, ಕಳೆದ ಡಿಸೆಂಬರ್‌ನಲ್ಲಿ ಎರಡನೇ ಬೆಳೆಗೆ ನೀರು ಬಿಡದಿರಲು ಸರ್ಕಾರ ನಿರ್ಧರಿಸಿತ್ತು. ಸರ್ಕಾರದ ಈ ನಡೆ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ರೈತರು ಕಳೆದ ವರ್ಷ 1 ಬೆಳೆ ತ್ಯಾಗ ಮಾಡಿದ್ದರು. ಮುಂಗಾರು ಮಳೆ ಆರಂಭಕ್ಕೂ ಮುನ್ನ ಗೇಟ್ ಅಳವಡಿಕೆ ಪೂರ್ಣಗೊಳ್ಳುವುದೇ ಎಂಬ ಆತಂಕ ರೈತರಲ್ಲಿ ಮನೆಮಾಡಿತ್ತು. ಆದರೆ ಗುತ್ತಿಗೆ ಪಡೆದ ಕಂಪನಿಯು ಹಗಲಿರುಳು ಶ್ರಮಿಸಿ ಸಕಾಲದಲ್ಲಿ ಅತ್ಯಂತ ಯಶಸ್ವಿಯಾಗಿ ನೂತನ ಕ್ರೆಸ್ಟ್ ಗೇಟ್‌ಗಳನ್ನು ಅಳವಡಿಸಿದೆ.

ಡ್ಯಾಂನಲ್ಲಿ ಸದ್ಯ ನೀರು ಎಷ್ಟಿದೆ?
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿ ಪ್ರಕಾರ, ಜೂನ್‌ 16 ರ ವೇಳೆಗೆ ತುಂಗಭದ್ರಾ ಡ್ಯಾಂನಲ್ಲಿ 9 ಟಿಎಂಸಿ ನೀರಿದೆ. ಕಳೆದ ವರ್ಷ (2025) ಇದೇ ವೇಳೆಗೆ 28 ಟಿಎಂಸಿ ನೀರು ಇತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments