ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ಇಲ್ಲಿನ ಪ್ರಸಿದ್ಧ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿನ ಪ್ರಥಮ ವರ್ಷದ ಪದವಿ (B.A, B.Com, B.Sc, B.C.A) ವಿದ್ಯಾರ್ಥಿಗಳಿಗಾಗಿ ಓರಿಯೆಂಟೇಶನ್ (ಪರಿಚಯಾತ್ಮಕ) ಕಾರ್ಯಕ್ರಮ ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವು ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಮಾನ್ಯ ಶ್ರೀ ಸಿ. ಮೋಹನ ರೆಡ್ಡಿ ಯವರು, “ಕೊಟ್ಟೂರೇಶ್ವರ ಮಹಾವಿದ್ಯಾಲಯವು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸದಾ ಸಿದ್ಧವಾಗಿದೆ. ಕಾಲೇಜಿನಲ್ಲಿ ದೊರೆಯುವ ಮೂಲಸೌಕರ್ಯ ಹಾಗೂ ಶೈಕ್ಷಣಿಕ ವಾತಾವರಣದ ಸದುಪಯೋಗ ಪಡೆದುಕೊಳ್ಳುವುದು ನಿಮ್ಮ ಕೈಯಲ್ಲಿದೆ. ಈಗಾಗಲೇ ಕಾಲೇಜಿನಲ್ಲಿ ಬಿಸಿಎ (BCA) ಕೋರ್ಸ್ ಯಶಸ್ವಿಯಾಗಿ ನಡೆಯುತ್ತಿದ್ದು,
ಮುಂಬರುವ ದಿನಗಳಲ್ಲಿ ನೂತನವಾಗಿ ಬಿಬಿಎ (BBA) ಕೋರ್ಸ್ ಆರಂಭಿಸುವ ಚಿಂತನೆಯಲ್ಲಿದ್ದೇವೆ” ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಎಂ. ರವಿಕುಮಾರ್ ಅವರು, “ನಮ್ಮ ಕಾಲೇಜು ಸಮಗ್ರ ಬಳ್ಳಾರಿ ಜಿಲ್ಲೆಯಲ್ಲಿಯೇ ನ್ಯಾಕ್ ‘ಎ ಪ್ಲಸ್’ (NAAC A+) ಶ್ರೇಣಿ ಪಡೆದ ಏಕೈಕ ಹೆಮ್ಮೆಯ ಮಹಾವಿದ್ಯಾಲಯ. ನಮ್ಮ ಸಂಸ್ಥೆಯು ಹಣಕ್ಕಿಂತ ಶಿಕ್ಷಣದ ಮೌಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಅತ್ಯಾಧುನಿಕ ತರಗತಿ ಕೊಠಡಿಗಳು ಹಾಗೂ ಅಧ್ಯಯನಕ್ಕೆ ಪೂರಕವಾದ ಪ್ರಶಾಂತ ವಾತಾವರಣ ಇಲ್ಲಿದೆ” ಎಂದು ಕಾಲೇಜಿನ ಸಮಗ್ರ ರೂಪರೇಷೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಜೆ. ಬಿ. ಸಿದ್ದನಗೌಡರ ಮಾತನಾಡಿ, ಕಾಲೇಜು ಬೆಳೆದು ಬಂದ ಹಾದಿ ಹಾಗೂ ಸ್ಥಾಪನೆಯ ಇತಿಹಾಸವನ್ನು ನೆನಪಿಸಿಕೊಂಡರು.
“ಇದು ಬಡ ವಿದ್ಯಾರ್ಥಿಗಳ ಪಾಲಿನ ಜ್ಞಾನ ಸರೋವರ ಹಾಗೂ ಜ್ಞಾನ ದಾಸೋಹದ ಕೇಂದ್ರ. ಇಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಅದಕ್ಕೆ ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿ, ಪ್ರಸಿದ್ಧ ಇಸ್ರೋ (ISRO) ವಿಜ್ಞಾನಿ ದಾರುಕೇಶ್ ಅವರೇ ಸಾಕ್ಷಿ” ಎಂದು ಹೆಮ್ಮೆಯಿಂದ ಸ್ಮರಿಸಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ 7ನೇ ರ‍್ಯಾಂಕ್ ಪಡೆದ ಸುಪ್ರಿತಾ ಹಾಗೂ 9ನೇ ರ‍್ಯಾಂಕ್ ಪಡೆದ ನೇತ್ರಾ ಅವರಿಗೆ ಇದೇ ಸಂದರ್ಭದಲ್ಲಿ ಭವ್ಯವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿಯರು ತಮ್ಮ ಯಶಸ್ಸಿನ ಹಾದಿ ಮತ್ತು ಅಧ್ಯಯನದ ಅನುಭವಗಳನ್ನು ಹಂಚಿಕೊಂಡರು.
ನೆರವೇರಿದ ಕಾರ್ಯಕ್ರಮ ವೈಖರಿ: ಪ್ರಾರ್ಥನೆ: ಕುಮಾರಿ ಸಿಂಧು ಎ. ಎಂ,
ಸ್ವಾಗತ: ಡಾ. ಕೆ. ಎಂ. ವೀರೇಶ್,
ಕಾರ್ಯಕ್ರಮ ನಿರೂಪಣೆ: ಶ್ರೀಮತಿ ಪ್ರತಿಭಾ ಕೆ. ಸಿ.
ವಂದನಾರ್ಪಣೆ: ಶ್ರೀ ಹೆಚ್. ಮೈಲಾರ ಗೌಡ,
ಕಾರ್ಯಕ್ರಮದಲ್ಲಿ ಐಕ್ಯೂಎಸಿ (IQAC) ಸಂಯೋಜಕರಾದ ಪೃಥ್ವಿರಾಜ್, ಸ್ವಾಮಿ ಆರಾಧ್ಯ ಮಠ, ಚೇತನ್ ಚೌಹಾಣ್, ದೈಹಿಕ ನಿರ್ದೇಶಕರಾದ ಶಿವಕುಮಾರ್, ಶ್ವೇತಾ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಪ್ರಭುದೇವ್, ಶಿವಕುಮಾರ್, ಮಲ್ಲಿಕಾರ್ಜುನ್, ಟಿ. ಎಂ. ಗಿರೀಶ್, ಕೆ. ವಿವೇಕಾನಂದ ಸೇರಿದಂತೆ ಪ್ರಥಮ ವರ್ಷದ ವಿದ್ಯಾರ್ಥಿಗಳು, ಪೋಷಕರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
