ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ತಾಲ್ಲೂಕಿನ ಕಾನೂನು ಸುವ್ಯವಸ್ಥೆಗೆ ಹೊಸ ಬಲ ತುಂಬಲು, ಇತ್ತೀಚೆಗಷ್ಟೇ ಮೇಲ್ದರ್ಜೆಗೇರಿದ ಕೊಟ್ಟೂರು ಪೊಲೀಸ್ ಠಾಣೆಯ ಪ್ರಥಮ ಸರ್ಕಲ್ ಇನ್ಸ್‌ಪೆಕ್ಟರ್ (PI) ಆಗಿ ಡಿ. ದುರುಗಪ್ಪ ಅವರು ಮಂಗಳವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಸಾರ್ವಜನಿಕರ ದೀರ್ಘಕಾಲದ ಬೇಡಿಕೆಯಂತೆ ಸರ್ಕಾರ ಕೊಟ್ಟೂರು ಠಾಣೆಯನ್ನು ಮೇಲ್ದರ್ಜೆಗೆ ಏರಿಸಿ ಆದೇಶಿಸಿತ್ತು. ಈ ಹೊಸ ಬದಲಾವಣೆಯೊಂದಿಗೆ ಹೊಸಹಳ್ಳಿ ಠಾಣೆಯನ್ನು ಕೊಟ್ಟೂರು ವೃತ್ತದಿಂದ ಬೇರ್ಪಡಿಸಿ ಕೂಡ್ಲಿಗಿ ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಕಚೇರಿ ಮೇಲ್ದರ್ಜೆಗೇರಿದ ಬಳಿಕ ಪ್ರಥಮ ಅಧಿಕಾರಿಯಾಗಿ ಡಿ. ದುರುಗಪ್ಪ ಅವರ ಆಗಮನ ಸಾರ್ವಜನಿಕರಲ್ಲಿ ಹೊಸ ಭರವಸೆ ಮೂಡಿಸಿದೆ.

ಇತಿಹಾಸದ ಪುಟ ಸೇರಿದ ಗೀತಾಂಜಲಿ ಶಿಂದೆ ಸೇವೆ
ಕೊಟ್ಟೂರು ಠಾಣೆಯ ಇತಿಹಾಸದಲ್ಲೇ ಪ್ರಥಮ ಮಹಿಳಾ ಪಿಎಸ್‌ಐ ಆಗಿ ದಕ್ಷ ಸೇವೆ ಸಲ್ಲಿಸಿದ ಗೀತಾಂಜಲಿ ಶಿಂದೆ ಅವರು, ಠಾಣೆ ಮೇಲ್ದರ್ಜೆಗೇರುವ ಮುನ್ನ ಕಾರ್ಯನಿರ್ವಹಿಸಿದ ಕೊನೆಯ ಪಿಎಸ್‌ಐ ಎಂಬ ಹೆಗ್ಗಳಿಕೆಯೊಂದಿಗೆ ಇತಿಹಾಸದ ಪುಟ ಸೇರಿದ್ದಾರೆ.
23 ವರ್ಷಗಳ ಸುದೀರ್ಘ ಅನುಭವ – ಜನಸ್ನೇಹಿ ಆಡಳಿತದ ಭರವಸೆ :
ಅಧಿಕಾರ ಸ್ವೀಕರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನೂತನ ಪಿಐ ಡಿ. ದುರ್ಗಪ್ಪ, “ನನ್ನ 23 ವರ್ಷಗಳ ಸುದೀರ್ಘ ಪೊಲೀಸ್ ಸೇವೆಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಸದಾ ಮೊದಲ ಆದ್ಯತೆ ನೀಡಿದ್ದೇನೆ. ಕೊಟ್ಟೂರು ತಾಲ್ಲೂಕಿನಲ್ಲಿ ಸಾರ್ವಜನಿಕರ ಪೂರ್ಣ ಸಹಕಾರದೊಂದಿಗೆ ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಿ, ಅಪರಾಧ ತಡೆಗೆ ಆದ್ಯತೆ ನೀಡಿ, ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತ ನೀಡಲು ಶ್ರಮಿಸುತ್ತೇನೆ” ಎಂದು ದೃಢವಾಗಿ ಭರವಸೆ ನೀಡಿದರು.
ಸಿಬ್ಬಂದಿ ವರ್ಗದಿಂದ ಅದ್ಧೂರಿ ಅಭಿನಂದನೆ
ಇದೇ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿಗಳಾದ ಚಂದ್ರಶೇಖರ ಗೌಡ, ಗುರು ರಾಂಪುರ, ಸಂತೋಷ್, ನಾಗಭೂಷಣ್ ಸೇರಿದಂತೆ ಹಲವು ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಖಂಡರು ನೂತನ ಇನ್ಸ್‌ಪೆಕ್ಟರ್ ಅವರಿಗೆ ಪುಷ್ಪಗುಚ್ಛ ನೀಡಿ, ಸನ್ಮಾನಿಸಿ ಹೃದಯಪೂರ್ವಕ ಶುಭಾಶಯ ಕೋರಿದರು.
