ಬಳ್ಳಾರಿ,ಜು.14: ಹೆಚ್.ಐ.ವಿ. ಮತ್ತು ಏಡ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಅವರು ತಿಳಿಸಿದರು.
ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮಿಷನ್ ಏಡ್ಸ್ ಸುರಕ್ಷಾ’ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಡ್ಸ್ ರೋಗಕ್ಕೆ ಸಂಪೂರ್ಣ ಗುಣಮುಖ ಮಾಡುವ ಔಷಧ ಇನ್ನೂ ಲಭ್ಯವಿಲ್ಲದ ಕಾರಣ, ಮುನ್ನೆಚ್ಚರಿಕೆ ಮತ್ತು ಜಾಗೃತಿಯೇ ಇದಕ್ಕೆ ಅತ್ಯುತ್ತಮ ಪರಿಹಾರವಾಗಿದೆ ಎಂದು ಹೇಳಿದರು.
ಲೈಂಗಿಕ ಕಾರ್ಯಕರ್ತೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಇಂತಹ ರೋಗಗಳ ಭೀತಿಯಿಂದ ಮತ್ತು ದುರ್ಬಲತೆಯಿಂದ ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸೂಕ್ತ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಬೇಕು ಎಂದರು.
ಜಿಲ್ಲೆಯ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರ ಸೇವೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅವರಿಗೆ ಸೂಕ್ತ ತರಬೇತಿ ನೀಡಿ, ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದರು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಹೆಚ್.ಐ.ವಿ ಕುರಿತಾದ ಮುಜುಗರವನ್ನು ಹೋಗಲಾಡಿಸಲು ಪ್ರಬಂಧ ಸ್ಪರ್ಧೆ, ಜಾನಪದ ನೃತ್ಯ, ಬೀದಿ ನಾಟಕ ಹಾಗೂ ಫ್ಲಾಶ್ ಮಾಬ್ಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಹೆಚ್.ಐ.ವಿ ಏಡ್ಸ್ ನಿಯಂತ್ರಣ ಘಟಕದ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ವಿ. ಅವರು ಮಾತನಾಡಿ, ಜಿಲ್ಲೆಯ ಪ್ರಮುಖ ರಕ್ತನಿಧಿ ಕೇಂದ್ರಗಳಲ್ಲಿ 2019 ರಿಂದ 2026 ರವರೆಗಿನ ಅವಧಿಯಲ್ಲಿ ಸಂಗ್ರಹಿಸಲಾದ ರಕ್ತದ ಮಾದರಿಗಳ ತಪಾಸಣೆಯಿಂದ ಒಟ್ಟು 115 ಎಚ್ಐವಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಪತ್ತೆಯಾದ ಒಟ್ಟು 115 ಪ್ರಕರಣಗಳ ಪೈಕಿ 37 ಜನರನ್ನು ಹೆಚ್ಚಿನ ತಪಾಸಣೆ ಮತ್ತು ಕೌನ್ಸೆಲಿಂಗ್ಗಾಗಿ ಐಸಿಟಿಸಿ ಕೇಂದ್ರಗಳಿಗೆ ಶಿಫಾರಸ್ಸು ಮಾಡಲಾಗಿದೆ. ಬಾಕಿ ಉಳಿದಿರುವ 78 ಪ್ರಕರಣಗಳ ವ್ಯಕ್ತಿಗಳನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ವೈದ್ಯಕೀಯ ಮಾರ್ಗದರ್ಶನ ನೀಡುವುದು ಆರೋಗ್ಯ ಇಲಾಖೆಯ ಮುಂದಿರುವ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ‘ಮೈಕ್ರೋ ಲೆವೆಲ್ ಪ್ಲಾನ್’ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿಗಳು, ರಕ್ತದಾನ ಮಾಡುವವರು ಸಾಮಾನ್ಯವಾಗಿ ಯುವಕರಾಗಿರುತ್ತಾರೆ. ಈ 78 ಯುವಕರಿಗೆ ತಮಗೆ ಸೋಂಕು ಇರುವುದು ತಿಳಿಯದೇ ಹೋದರೆ ಅಥವಾ ಅವರು ಮುನ್ನೆಚ್ಚರಿಕೆ ವಹಿಸದಿದ್ದರೆ, ಸಮಾಜದಲ್ಲಿ ಸೋಂಕು ಮತ್ತಷ್ಟು ವೇಗವಾಗಿ ಹರಡುವ ಸಾಧ್ಯತೆ ಇರುತ್ತದೆ. ಸೋಂಕಿತರು ತಪ್ಪು ಫೋನ್ ನಂಬರ್ ನೀಡಿರುವುದು ಇವರನ್ನು ಪತ್ತೆ ಹಚ್ಚಲು ಹಿನ್ನಡೆಯಾಗಿದೆ ಎಂದರು.
ಗರ್ಭಿಣಿಯರಿAದ ಮಗುವಿಗೆ ಸೋಂಕು ಹರಡುವುದನ್ನು ತಡೆಯಲು ಮೊದಲ ತ್ರೆöÊಮಾಸಿಕದಲ್ಲೇ ಎಚ್ಐವಿ, ಹೆಪಟೈಟಿಸ್ ಮತ್ತು ಸಿಫಿಲಿಸ್ ತಪಾಸಣೆಗಳನ್ನು ಕಡ್ಡಾಯಗೊಳಿಸಲಾಗಿದೆ. ಈ ವರ್ಷ ತಪಾಸಣೆ ವೇಳೆ 4 ಗರ್ಭಿಣಿಯರಲ್ಲಿ ಎಚ್ಐವಿ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಎಂಟನೇ ತಿಂಗಳಲ್ಲಿ ಇವರ ‘ವೈರಲ್ ಲೋಡ್’ ಪರೀಕ್ಷೆ ನಡೆಸಿ, ಸೋಂಕಿನ ಪ್ರಮಾಣವನ್ನು ತಗ್ಗಿಸಿ ಸುರಕ್ಷಿತ ಹೆರಿಗೆ ಮಾಡಿಸಲು ಎಆರ್ಟಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಯೂ ಆದ ಡಾ.ಇಂದ್ರಾಣಿ ಅವರು ಸಭೆಗೆ ತಿಳಿಸಿದರು.
ಜಾಗೃತಿ ಮತ್ತು ಆ.07 ರಂದು ಮೆಗಾ ರಕ್ತದಾನ ಶಿಬಿರ:
ಜಿಲ್ಲೆಯಲ್ಲಿ ಎಚ್ಐವಿ/ಏಡ್ಸ್ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳು ಜಂಟಿಯಾಗಿ ವಿನೂತನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಜೆಎಸ್ಡಬ್ಲೂö್ಯ ಸಂಸ್ಥೆಯ ಸಹಯೋಗದೊಂದಿಗೆ ಆಗಸ್ಟ್ 07 ರಂದು ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಎಚ್ಐವಿ ನಿಯಂತ್ರಣಕ್ಕೆ ತಂತ್ರಜ್ಞಾನದ ಮೂಲಕ ಜಾಗೃತಿ, ವಿನೂತನ ಕ್ಯುಆರ್ ಕೋಡ್:
ಸಾರ್ವಜನಿಕರಲ್ಲಿ, ಕಚೇರಿಗಳಲ್ಲಿ, ಕಾಲೇಜು ವಿದ್ಯಾರ್ಥಿಗಳಲ್ಲಿ ಎಚ್ಐವಿ ಬಗ್ಗೆ ಇರುವ ಸಂಕೋಚವನ್ನು ನಿವಾರಿಸಲು ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ವಿತರಿಸಲಾಗುವ ವಿಶೇಷ ಕರಪತ್ರಗಳಲ್ಲಿ ಕ್ಯುಆರ್ ಕೋಡ್ ನೀಡಲಾಗಿದ್ದು, ಇದನ್ನು ಸ್ಕಾö್ಯನ್ ಮಾಡುವ ಮೂಲಕ ಆಪ್ಗೆ ಲಾಗ್-ಇನ್ ಆಗಬಹುದು. ಆಪ್ನಲ್ಲಿರುವ ರಹಸ್ಯ ಪ್ರಶ್ನಾವಳಿಗಳ ಮೂಲಕ ಬಳಕೆದಾರರು ತಾವೇನಾದರೂ ಎಚ್ಐವಿ ಅಪಾಯದ ವ್ಯಾಪ್ತಿಯಲ್ಲಿದ್ದೇವೆಯೇ ಎಂಬುದನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬಹುದು. ಒಂದು ವೇಳೆ ಅಪಾಯದ ಲಕ್ಷಣಗಳಿದ್ದರೆ, ಬಳಕೆದಾರರು ಇರುವ ಜಾಗಕ್ಕೆ ಅತ್ಯಂತ ಹತ್ತಿರದಲ್ಲಿರುವ ಐಸಿಟಿಸಿ ಕೇಂದ್ರದ ಲೊಕೇಶನ್ ಅನ್ನು ಈ ಆಪ್ ತೋರಿಸಲಿದ್ದು, ಅಲ್ಲಿಗೆ ಭೇಟಿ ನೀಡಿ ಉಚಿತ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.
ಲಾರಿ ಚಾಲಕರು ಮತ್ತು ವಲಸಿಗರಿಗೆ ವಿಶೇಷ ತಪಾಸಣೆ:
ಲಾರಿ ಚಾಲಕರಿಗಾಗಿ ‘ಅಮೃತ’ ಪ್ರಾಜೆಕ್ಟ್ ಅಡಿಯಲ್ಲಿ ಐಸಿಟಿಸಿ ಕೇಂದ್ರಗಳೊAದಿಗೆ ಟೈ-ಅಪ್ ಮಾಡಿಕೊಂಡು ನಿಯಮಿತ ಪರೀಕ್ಷೆ ನಡೆಸಲಾಗುತ್ತಿದೆ. ಉದ್ಯೋಗಕ್ಕಾಗಿ 5-6 ತಿಂಗಳು ಅಥವಾ ವರ್ಷಗಟ್ಟಲೆ ಕುಟುಂಬದಿAದ ದೂರವಿರುವ ವಲಸೆ ಕಾರ್ಮಿಕರನ್ನು ಗುರುತಿಸಿ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇದೇ ವೇಳೆ ಗಣ್ಯರು ಕ್ಯುರ್ ಆರ್ ಕೋಡ್ ಆಧಾರಿತ ‘ಮೊಬಿಲೈಸೇಶನ್ ಫಾರ್ ಎಚ್ಐವಿ ಸುರಕ್ಷತಾ ಅಭಿಯಾನ-2026’ ರ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್. ಬಸರೆಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಡಿಎನ್ಒ ಗಿರೀಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಮ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ವಿವಿಧ ರಕ್ತ ಭಂಡಾರದ ಪ್ರತಿನಿಧಿಗಳು, ಜೆ.ಎಸ್.ಡಬ್ಲೂö್ಯ ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು
