[ವರದಿ : ಜಿ ಎಂ ಬಸಯ್ಯ]
ಕುರುಗೋಡು: ತಾಲೂಕಿನ ಸೋಮಲಾಪುರ ಗ್ರಾಮದ ಸಮೀಪದ ತುಂಗಭದ್ರಾ ಎಲ್‌ಎಲ್‌ಸಿ ವಿತರಣೆಯ ಸೂಗೂರು ಮುಖ್ಯ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದ್ದ ಹೂಳು, ಜಾಲಿಬೇಲಿ, ಕಸ, ಗಿಡ-ಗಂಟಿ, ನೆಲಬಳ್ಳಿ, ಕಲ್ಲು, ಮುಳ್ಳಿನ ಅಲಗು ಹಾಗೂ ತ್ಯಾಜ್ಯವನ್ನು ರೈತರು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿದರು.

ಶುಕ್ರವಾರ ಬೆಳಗ್ಗೆಯಿಂದಲೇ ನೂರಾರು ರೈತರು ಜೆಸಿಬಿ ಯಂತ್ರದ ಸಹಾಯದೊಂದಿಗೆ ಕಾಲುವೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಕಾಲುವೆಯ ಮೇಲ್ಭಾಗದ 0ನೇ ಕಿಲೋಮೀಟರ್‌ನಿಂದ ಹೂಳು ತೆರವು ಕಾರ್ಯ ಆರಂಭಿಸಲಾಯಿತು. ಸೂಗೂರು ಹಾಗೂ ಇಟಿಗಿ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪದ ಹಿನ್ನೆಲೆಯಲ್ಲಿ ರೈತರು ಈ ಶ್ರಮದಾನಕ್ಕೆ ಮುಂದಾದರು.
ಸುಡು ಬಿಸಿಲನ್ನೂ ಲೆಕ್ಕಿಸದೆ ರೈತರು ಬೆಳಗ್ಗೆಯಿಂದ ಸಂಜೆವರೆಗೆ ಕಾಲುವೆ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಕಾಲುವೆಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಪೈಪ್‌ಗಳನ್ನು ಕೂಡ ರೈತರ ನೆರವಿನಿಂದ ತೆರವುಗೊಳಿಸಲಾಯಿತು. ಆದರೆ, ಇಷ್ಟೊಂದು ಮಹತ್ವದ ಕಾರ್ಯ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ವಿಪರ್ಯಾಸ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಸುಮಾರು 10ರಿಂದ 11 ಗಂಟೆಗಳ ಕಾಲ ಜೆಸಿಬಿ ಯಂತ್ರ ಹಾಗೂ ರೈತರ ಶ್ರಮದಾನದ ಮೂಲಕ ಕಾರ್ಯ ನಡೆಸಲಾಗಿದ್ದು, ಸುಮಾರು ₹40 ಸಾವಿರ ವೆಚ್ಚವನ್ನು ರೈತರು ಸ್ವಯಂ ಭರಿಸಿದ್ದಾರೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಸಂಜೆ 7ನೇ ಕಿಲೋಮೀಟರ್‌ನಿಂದ ಕಾಲುವೆಯ ಕೊನೆಯ ಭಾಗದವರೆಗೆ ರೈತರು ಹಾಗೂ ಜೆಸಿಬಿ ಮೂಲಕ ಹೂಳು ತೆರವು ಕಾರ್ಯ ಮುಂದುವರಿಸಿದರು.
ಕಾಲುವೆಯ ಹೂಳು ಸಂಪೂರ್ಣವಾಗಿ ತೆರವಾದರೆ ಸುಮಾರು 3,500 ಎಕರೆ ಪ್ರದೇಶದ ಕೃಷಿ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುವ ನಿರೀಕ್ಷೆಯಿದೆ. ಇದರಿಂದ ಪ್ರಮುಖವಾಗಿ ಜೋಳ, ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಅನುಕೂಲವಾಗಲಿದೆ ಎಂದು ರೈತರು ತಿಳಿಸಿದ್ದಾರೆ.
ರೈತರ ಅಭಿಪ್ರಾಯ:
ಶಿವರುದ್ರ ಗೌಡ ಮಾತನಾಡಿ, ಕಾಲುವೆಯ ಹಲವು ಭಾಗಗಳಲ್ಲಿ ಹೂಳು ತುಂಬಿಕೊಂಡಿದ್ದರಿಂದ ಕೊನೆಯ ಭಾಗದ ಗ್ರಾಮಗಳ ಜಮೀನುಗಳಿಗೆ ನೀರು ಸಮರ್ಪಕವಾಗಿ ತಲುಪುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಒಗ್ಗೂಡಿ ಸ್ವಯಂ ಪ್ರೇರಣೆಯಿಂದ ಹೂಳು ತೆರವು ಕಾರ್ಯ ಕೈಗೊಂಡಿದ್ದೇವೆ ಎಂದು ಹೇಳಿದರು.
ತಿರುಪತಿರಾವು, ರಾಮಚಂದ್ರಪುರ ಕ್ಯಾಂಪ್ ಮಾತನಾಡಿ, ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ಆರಂಭದಿಂದಲೂ ಸಮರ್ಪಕವಾಗಿ ದೊರೆಯುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ, ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಲುವೆಗೆ ನೀರು ಹರಿಸುವ ಪೂರ್ವದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳು ಅಗತ್ಯ ಮುನ್ನೆಚ್ಚರಿಕೆ ಹಾಗೂ ನಿರ್ವಹಣಾ ಕಾರ್ಯ ಕೈಗೊಳ್ಳುವಲ್ಲಿ ವಿಫಲವಾಗಿವೆ ಎಂದು ರೈತರು ಆರೋಪಿಸಿದರು. ಇನ್ನು ಮುಂದಾದರೂ ಕಾಲುವೆಯ ನಿರ್ವಹಣೆಗೆ ಅಧಿಕಾರಿಗಳು ಗಮನಹರಿಸಿ, ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಣ್ಣ ಜಡೇಪ್ಪ, ಟಿ. ಜಡೇಪ್ಪ, ವೆಂಕಟರಾಮರೆಡ್ಡಿ, ಮಚ್ಚೆ ಹೊನ್ನಪ್ಪ, ಅಂಜಪ್ಪ, ಶಿನಾಪ್ಪ, ಸೂರಿಬಾಬು, ತಿರುಪತಿಯ್ಯ, ಶಿವರುದ್ರ, ಮಲ್ಲಪ್ಪ, ಅಂಬಣ್ಣ, ಜಡೇಪ್ಪ, ರಾಜಪ್ಪ ಎಚ್., ಮಬುಸಾಬು, ಎಚ್. ಲಿಂಗಪ್ಪ, ವೀರೇಶ, ಬಸವನಗೌಡ, ಬಿ. ಮಂಜುನಾಥ, ಕೊಲ್ಲಾರೆಪ್ಪ, ಭೀಮಪ್ಪ ಸೇರಿದಂತೆ ನೂರಾರು ರೈತರು ಶ್ರಮದಾನದಲ್ಲಿ ಭಾಗವಹಿಸಿದ್ದರು.
