[ವರದಿ : ಜಿ ಎಂ ಬಸಯ್ಯ]
ಕಂಪ್ಲಿ: ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧರಾಗಿ ಕೆಲಸ ಮಾಡುತ್ತಿರುವ ಶಾಸಕ ಜೆ.ಎನ್. ಗಣೇಶ್ ಅವರ ವಿರುದ್ಧ ಪಾದಯಾತ್ರೆ ಹಾಗೂ ಬಹಿರಂಗ ಸಭೆಯಲ್ಲಿ ಜನಾರ್ದನ ರೆಡ್ಡಿ ಅವರು ಅವಾಚ್ಯ ಹಾಗೂ ಕೀಳು ಮಟ್ಟದ ಭಾಷೆ ಬಳಸಿರುವುದು ಶೋಭೆ ತರುವಂತಹದ್ದಲ್ಲ ಎಂದು ಕಾಂಗ್ರೆಸ್ ಮುಖಂಡ ಸಿ.ಆರ್. ಹನುಮಂತ ತಿರುಗೇಟು ನೀಡಿದರು.
ಕಂಪ್ಲಿ ಪಟ್ಟಣದ ಸಂತೆ ಮಾರುಕಟ್ಟೆ ಬಳಿಯ ಅಂಬೇಡ್ಕರ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಧಮ್ಮ ಮತ್ತು ತಾಕತ್ತು ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮರು ಚುನಾವಣೆಯಲ್ಲಿ ಗೆದ್ದು ಬರಲಿ. ಹಾಗೆ ಗೆದ್ದು ಬಂದರೆ ಅವರ ಮನೆಯ ಕಾವಲುಗಾರನಾಗಿ ಕೆಲಸ ಮಾಡುತ್ತೇನೆ ಎಂದು ಸವಾಲು ಹಾಕಿದರು.
ಗಣಿಗಾರಿಕೆ ವಿಚಾರದಲ್ಲಿ ಟೀಕೆಗಳನ್ನು ಎದುರಿಸಿರುವ ಜನಾರ್ದನ ರೆಡ್ಡಿ ಅವರು ಕಂಪ್ಲಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ನಾಲಿಗೆ ಮೇಲೆ ಹಿಡಿತವಿಲ್ಲದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದ ಹನುಮಂತ, ಸ್ಥಳೀಯ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ವೈಯಕ್ತಿಕ ಟೀಕೆಗಳಿಗೆ ಇಳಿಯುವುದು ಸರಿಯಲ್ಲ ಎಂದರು.
“ಅಭಿವೃದ್ಧಿ ಕಾಮಗಾರಿಗಳ ಮೂಲಕವೇ ಜನರ ವಿಶ್ವಾಸ ಗಳಿಸುತ್ತಿರುವ ಶಾಸಕ ಗಣೇಶ್ ಅವರ ಬಗ್ಗೆ ಮಾತನಾಡುವ ಮೊದಲು, ನಿಮ್ಮ ಸ್ವಂತ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಿ. ಮೊದಲು ನಿಮ್ಮ ಪತ್ನಿಯನ್ನು ಗೆಲ್ಲಿಸಿಕೊಂಡು ಬನ್ನಿ. ನಂತರ ಹತ್ತು ಕ್ಷೇತ್ರಗಳನ್ನು ಗೆಲ್ಲಿಸುವ ಮಾತಾಡಿ” ಎಂದು ವ್ಯಂಗ್ಯವಾಡಿದರು.
ಬಳ್ಳಾರಿ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಹಾಗೂ ಗಣಿಗಾರಿಕೆ ವಿಚಾರವನ್ನು ಪ್ರಸ್ತಾಪಿಸಿದ ಅವರು, ಜನಾರ್ದನ ರೆಡ್ಡಿ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ಇಂತಹ ಹಿನ್ನೆಲೆಯಲ್ಲಿರುವವರು ಇತರರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹೇಳಿದರು.
ದಲಿತರು, ಹಿಂದುಳಿದವರು ಹಾಗೂ ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುವ ಬದಲು ಹಣದ ಪ್ರಭಾವದ ರಾಜಕಾರಣ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಶಾಸಕ ಜೆ.ಎನ್. ಗಣೇಶ್ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದರು.
“ಮುಂದೆಯೂ ಇದೇ ರೀತಿಯ ಕೀಳು ಮಟ್ಟದ ಶಬ್ಧಗಳನ್ನು ಬಳಸಿದರೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ಮೊದಲು ನಾಲಿಗೆಯ ಮೇಲೆ ಹಿಡಿತವಿಟ್ಟು ಮಾತನಾಡುವುದನ್ನು ಕಲಿಯಬೇಕು. ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಸಿ.ಆರ್. ಹನುಮಂತ ಎಚ್ಚರಿಸಿದರು.
