ಕರೋನಾ ನಿಯಂತ್ರಣ: ಬೂತ್‍ಮಟ್ಟದ ಅಧಿಕಾರಿಗಳಿಗೆ ತರಬೇತಿ

0
228

ಶಿವಮೊಗ್ಗ, ಜು.30: ಕರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಪ್ರೈಮರಿ ಹಾಗೂ ಸೆಕಂಡರಿ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವ ಜವಾಬ್ದಾರಿಯನ್ನು ಬೂತ್‍ಮಟ್ಟದ ಅಧಿಕಾರಿಗಳಿಗೆ ವಹಿಸಲಾಗಿದ್ದು, ಅವರು ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಕರೋನಾ ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ತಿಳಿಸಿದರು.

ಅವರು ಬುಧವಾರ ಅಂಬೇಡ್ಕರ್ ಭವನದಲ್ಲಿ ಕರೋನಾ ನಿಯಂತ್ರಣದಲ್ಲಿ ಬೂತ್‍ಮಟ್ಟದ ಅಧಿಕಾರಿಗಳ ಹೊಣೆಗಾರಿಕೆ ಕುರಿತು ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕ ಹೊಂದಿದವರ ಹೆಸರು, ಆಧಾರ್‍ಕಾರ್ಡ್ ಸಂಖ್ಯೆ, ವಿಳಾಸ, ಮೊಬೈಲ್ ಸಂಖ್ಯೆ, ವಾಸದ ವಿವರಗಳನ್ನು ಪಡೆದು ನಿಗದಿತ ನಮೂನೆಯಲ್ಲಿ ಮೇಲ್ವಿಚಾರಕರಿಗೆ ಸಲ್ಲಿಸಬೇಕು. ಕರೋನಾ ಪಾಸಿಟಿವ್ ವ್ಯಕ್ತಿಗಳ ಹೆಸರು ವಿಳಾಸವನ್ನು ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲ ತಾಣಗಳ ಮೂಲಕ ಬಹಿರಂಗಪಡಿಸಬಾರದು ಎಂದರು.

ಕರೊನಾ ಪಾಸಿಟಿವ್ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವ ಕಾರ್ಯದಲ್ಲಿ ಸಾರ್ವಜನಿಕರು ಸಹ ಇವರೊಂದಿಗೆ ಸಹಕರಿಸಿ ಮಾಹಿತಿಯನ್ನು ಒದಗಿಸಲು ನೆರವು ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಮಾಹಿತಿಯನ್ನು ಸಂಗ್ರಹಿಸುವ ಕುರಿತು ಸರ್ಕಾರದ ಮಾರ್ಗಸೂಚಿ ಬಗ್ಗೆ ಶಿವಮೊಗ್ಗ ತಹಶೀಲ್ದಾರ್ ಎನ್.ಜೆ.ನಾಗರಾಜ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶ್ರೀಧರ್, ಕಾರ್ಯನಿರ್ವಾಹಕ ಅಧಿಕಾರಿ ಡಾ.ಕಲ್ಲಪ್ಪ, ಜಿಲ್ಲಾ ಕನ್ಸಲ್ಟೆಂಟ್‍ಗಳಾದ ಶ್ರೀನಿವಾಸ್, ರಿಯಾಜ್ ಹಾಗೂ ಗೋಪಿನಾಥ್ ಅವರು ತರಬೇತಿಯನ್ನು ನೀಡಿದರು.

LEAVE A REPLY

Please enter your comment!
Please enter your name here