ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ‘ಒಂದು ದಿನದ ಯುವ ಕ್ರೀಡಾಧಿಕಾರಿ

0
97

ಶಿವಮೊಗ್ಗ ಅ:12:-ಆಕ್ಟೊಬರ್ 11 ರ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಪ್ರಯುಕ್ತ ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಕು. ಶಾಲಿನಿ.ಎಸ್ ರವರು ‘ಒಂದು ದಿನದ ಯುವ ಕ್ರೀಡಾಧಿಕಾರಿ’ಯಾಗಿ ಆಯ್ಕೆಯಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಹಾಯಕ ನಿರ್ದೇಶಕರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿದರು.

ರಾಜ್ಯ ಸರ್ಕಾರ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಪ್ರಯುಕ್ತ 18 ರಿಂದ 23 ವಯೋಮಿತಿಯ ಯುವತಿಯರಿಗೆ ‘ಒಂದು ದಿನದ ಯುವ ಕ್ರೀಡಾಧಿಕಾರಿ’ಯಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಆನ್‍ಲೈನ್ ಅರ್ಜಿ ಕರೆದಿದ್ದು ಅದರಂತೆ ಅರ್ಜಿ ಸಲ್ಲಿಸಿ, ಆಯ್ಕೆಯಾದ ಶಾಲಿನಿ.ಎಸ್ ನೆಹರೂ ಕ್ರೀಡಾಂಗಣದ ಮುಖ್ಯದ್ವಾರದಲ್ಲಿರುವ ಕ್ರೀಡಾ ಇಲಾಖೆಯಲ್ಲಿ ಅ.11 ರಂದು ಒಂದು ದಿನದ ಯುವ ಕ್ರೀಡಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಸಹಾಯಕ ನಿರ್ದೇಶಕರ ಬಳಿ ಇಲಾಖೆಯ ಕಾರ್ಯವೈಖರಿ, ಕ್ರೀಡಾ ಚಟುವಟಿಕೆ ವಿಭಾಗ, ಕಾರ್ಯಕ್ರಮಗಳು, ಅದರ ಸಂಘಟನೆ, ಅನುದಾನ, ಒಳಾಂಗಣ, ಹೊರಾಂಗಣ ಕ್ರೀಡಾಂಗಣಗಳಲ್ಲಿನ ಸೌಕರ್ಯಗಳು, ನಿರ್ವಹಣೆ, ವ್ಯಾಯಾಮಶಾಲೆ, ಕ್ರೀಡಾ ಸಂಕೀರ್ಣದಲ್ಲಿನ ಈಜುಕೊಳ, ಟೆನಿಸ್ ಅಂಕಣ, ಸ್ಕೇಟಿಂಗ್ ಅಂಕಣ, ಕ್ರೀಡಾಂಗಣ ಸದಸ್ಯತ್ವ ಶುಲ್ಕ, ಸಿಬ್ಬಂದಿ ವಿವರ ಕುರಿತು ಹಾಗೂ ಜಿಲ್ಲಾ ಕ್ರೀಡಾಶಾಲೆ/ವಸತಿ ನಿಲಯದದ ಕುರಿತು ಸವಿಸ್ತಾರವಾಗಿ ತಿಳಿದುಕೊಂಡರು. ನಂತರ ಜಿಲ್ಲಾ ಮಟ್ಟದ ವಾಲಿಬಾಲ್, ವಿಭಾಗ ಮಟ್ಟದ ಫುಟ್‍ಬಾಲ್ ಹಾಗೂ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜಿನ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಹಾಗೂ ಇಲಾಖೆ ಕುರಿತಾದ ಸಂಪೂರ್ಣ ಮಾಹಿತಿ ಪಡೆದುಕೊಂಡ ಅವರು ಯುವ ಕ್ರೀಡಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಸಂತಸ ವ್ಯಕ್ತಪಡಿಸಿದರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here