ಬೊಳುವಾರು ಮಹಮದ್ ಕುಂಞಿ ಕನ್ನಡದ ಪ್ರಸಿದ್ಧ ಕಥೆಗಾರರು.

0
68

ಮಹಮದ್‌ ಕುಂಞಿ 1951ರ ಅಕ್ಟೋಬರ್ 22ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೊಳುವಾರು ಎಂಬಲ್ಲಿ ಜನಿಸಿದರು. ತಂದೆ ಅಬ್ಬಾಸ್ ಬ್ಯಾರಿ. ತಾಯಿ ಕುಲ್ಸುಂ. ಅವರ ಪ್ರಾರಂಭಿಕ ಶಿಕ್ಷಣ ಬೊಳುವಾರು, ಪುತ್ತೂರು, ಮಂಗಳೂರುಗಳಲ್ಲಿ ನೆರವೇರಿತು. ಮೈಸೂರು ವಿಶ್ವವಿದ್ಯಾಲಯದಿಂದ ಕುವೆಂಪು ಚಿನ್ನದ ಪದಕದೊಡನೆ ಎಂ.ಎ. (ಕನ್ನಡ) ಪದವಿ ಗಳಿಸಿದರು. ಉದ್ಯೋಗಕ್ಕಾಗಿ ಸಿಂಡಿಕೇಟ್ ಬ್ಯಾಂಕ್ ಸೇರಿದ ಬೊಳುವಾರರು ಮಹಾಪ್ರಬಂಧಕ ಹುದ್ದೆಯವರೆಗೆ ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿ ನಿವೃತ್ತರಾಗಿದ್ದಾರೆ.

ಬೊಳುವಾರು ಮಹಮದ್ ಕುಂಞಿ ಅವರು ಚಿಕ್ಕಂದಿನಲ್ಲೇ ಸಾಹಿತ್ಯದಲ್ಲಿ ಒಲವು ಮೂಡಿಸಿಕೊಂಡವರು. ಕಥಾಸಂಕಲನ, ನಾಟಕ, ಜೀವನ ಚರಿತ್ರೆ, ಪ್ರವಾಸ ಕಥನ, ಸಂಪಾದನೆ, ಅನುವಾದ ಹೀಗೆ ವಿಶಾಲವಾದ ಹರಹುಳ್ಳ ಸಾಹಿತ್ಯ ಸಾಧನೆಗಳ ಜೊತೆಗೆ ಅವರು ಮಕ್ಕಳ ಸಾಹಿತ್ಯಕ್ಕೂ ವಿಶಿಷ್ಟ ಕೊಡುಗೆಯನ್ನಿತ್ತಿದ್ದಾರೆ.

ಬೊಳುವಾರರ ‘ಪ್ರವಾದಿ ಮುಹಮ್ಮದರ ಜೀವನಾಧಾರಿತ ಮೊತ್ತಮೊದಲ ಐತಿಹಾಸಿಕ ಕಾದಂಬರಿ – ಓದಿರಿ’ ಕೃತಿಯ ಪ್ರಾರಂಭಿಕ ಪುಟದಲ್ಲಿ “ಈ ವೇದ, ಉಪನಿಷತ್, ತ್ರಿಪಿಟಿಕಾ, ಭಗವದ್ಗೀತೆ, ಜಿನಶಾಸನ, ತೌರಾತ್, ಝಬೂರ್, ಬೈಬಲ್, ಕುರಾನ್ ಅಥವಾ ಗುರು ಗ್ರಂಥ್ ಸಾಹಿಬ್ ಯಾ ಮತ್ತೊಂದು; ಧರ್ಮಗ್ರಂಥಗಳು ಯಾವುದೇ ಇರಲಿ, ಅವುಗಳನ್ನು ಸಮರ್ಥಿಸುವ ಅಥವಾ ವಿರೋಧಿಸುವ ಮೊದಲು ಒಮ್ಮೆಯಾದರೂ ಓದು ಎಂಬ ಪ್ರಥಮಸತ್ಯ ಓದಿಸಿದ್ದ ನನ್ನಪ್ಪ ಅಬ್ಬಾಸ್ ಬ್ಯಾರಿಯವರಿಗೆ” ಎಂಬ ಅರ್ಪಣೆಯಿದೆ. ಇದು ಇವರ ವಿಶಾಲ ಹರಹನ್ನು ಸೂಚಿಸುವಂತದ್ದು.

ಬೊಳುವಾರರರ ಕಥಾ ಸಂಕಲನಗಳಲ್ಲಿ ಅತ್ತ ಇತ್ತಗಳ ಸುತ್ತಮುತ್ತ, ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡುಗೋಡೆ. ರೊಟ್ಟಿ ಪಾತುಮ್ಮ ಮುಂತಾದವು ಪ್ರಮುಖವಾಗಿವೆ. ರುಖಿಯಾ ಹೆಸರಿನಿಂದ ಮಲಯಾಳಂ ಭಾಷೆಗೆ ಅನುವಾದಗೊಂಡ ಎರಡು ಕಥಾ ಸಂಕಲನಗಳನ್ನು ಅವರು ರಚಿಸಿದ್ದಾರೆ. ಪುನ್ನಪ್ರ ವಯಲಾರ ಸಮರ ಎಂಬುದು ಇತಿಹಾಸದ ವಸ್ತುವನ್ನು ಒಳಗೊಂಡಿದೆ. ಅವರ ಸಂಪಾದನೆಗಳಲ್ಲಿ ಶತಮಾನದ ಸಣ್ಣ ಕಥೆಗಳು, ದೆಹಲಿ ಕನ್ನಡ ಸಾಹಿತ್ಯ ಸೇರಿವೆ. ಮಕ್ಕಳಿಗಾಗಿ ತಟ್ಟು ಚಪ್ಪಾಳೆ ಪುಟ್ಟ ಮಗು, ಸಂತಮ್ಮಣ್ಣ, ಪಾಪು ಗಾಂಧೀ ಬಾಪೂ ಆದ ಕತೆ (ಮಹಾತ್ಮ ಗಾಂಜಿ ಜೀವನ ಚರಿತ್ರೆಯಾಧಾರಿತ ಕಾದಂಬರಿ), ಮಕ್ಕಳ ನಾಟಕಗಳ ಮೂರು ಸಂಪುಟಗಳು ಮುಂತಾದವುಗಳನ್ನು ಪ್ರಕಟಿಸಿದ್ದಾರೆ. ಹಲವಾರು ಭಾಷೆಗಳಿಗೆ ಇವರ ಕೃತಿಗಳು ಅನುವಾದಗೊಂಡಿವೆ.

ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿರುವ ಬೊಳುವಾರು ಮಹಮದ್ ಕುಂಞಿ ಅವರು ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷರಾಗಿ, ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ, ಚಿತ್ರ ಸಮುದಾಯದ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಮುಂತಾದುವುಗಳಲ್ಲಿ ವಿವಿಧ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಮೂರು ಬಾರಿ ಪುರಸ್ಕಾರ, ದೆಹಲಿಯ ಕಥಾ ಪ್ರಶಸ್ತಿ, ಭಾರತೀಯ ಸಂಸ್ಥಾನ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ‘ಮುನ್ನುಡಿ’ ಚಲನಚಿತ್ರ ಕಥೆಗಾಗಿ ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಬೊಳುವಾರರಿಗೆ ಸಂದಿವೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಇವರ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ಕೃತಿ 2010 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದೆ. ಇವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಗೆ 2016 ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಸಂದಿದೆ.

ಸಾಹಿತ್ಯದ ಪ್ರಮುಖ ಸಾಧಕರಾದ ಬೊಳುವಾರು ಮಹಮದ್ ಕುಂಞಿ ಅವರಿಗೆ ಹುಟ್ಟುಹಬ್ಬದ ಆತ್ಮೀಯ ಶುಭ ಹಾರೈಕೆಗಳನ್ನು ಹೇಳೋಣ.

ಕೃಪೆ:- ‘ಕನ್ನಡ ಸಂಪದ’

LEAVE A REPLY

Please enter your comment!
Please enter your name here