ವಿಧವೆಯ ಬಾಳು..

0
179

ಗೌರಿ ಸುಶಿಕ್ಷಿತ ಸುಸಂಸ್ಕೃತ ಕುಟುಂಬದಲ್ಲಿ ಹುಟ್ಟಿದ ಮುದ್ದಾದ ಹುಡುಗಿ. ಪ್ರಾಪ್ತ ವಯಸ್ಸಿಗೆ ಬಂದಾಗ ಆಕೆಯ ಸೌಂದರ್ಯಕ್ಕೆ ಮಾರುಹೋದ ಶ್ರೀಮಂತ ಕುಟುಂಬದ ಕುಮಾರ್ ಎಂಬಾತ ಈಕೆಯನ್ನು ಮೆಚ್ಚಿ ಮದುವೆಯಾದನು. ಕುಮಾರನಿಗೆ ಹೆಂಡತಿ ಎಂದರೆ ಪಂಚ ಪ್ರಾಣ. ಗೌರಿಗೆ ಕೊಂಚವೂ ನೋವಾಗದಂತೆ, ಆಕೆಗೆ ಯಾವ ಕೊರತೆಯೂ ಬಾರದಂತೆ ನೋಡಿಕೊಳ್ಳುತ್ತಿದ್ದನು. ಇವರ ಪ್ರೀತಿಯ ಕುರುಹಾಗಿ ಚಂದ್ರನಂಥಾ ಮುದ್ದಾದ ಗಂಡು ಮಗು ಜನಿಸಿತ್ತು. ಆ ಮಗುವಿಗೆ ಶಶಿ ಎಂದು ನಾಮಕರಣ ಮಾಡಲಾಯಿತು. ಗೌರಿ ಮತ್ತು ಕುಮಾರನ ನಡುವಿನ ದಾಂಪತ್ಯ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿತ್ತು. ಆದರೆ ವಿಧಿ ಇದನ್ನು ಸಹಿಸದಾಯಿತು. ಒಮ್ಮೆ ಕುಮಾರನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಅಸು ನೀಗಿದನು.

ಗೌರಿ ಆರು ತಿಂಗಳುಗಳ ಕಾಲ ಹಾಸಿಗೆ ಬಿಟ್ಟು ಮೇಲೆ ಏಳಲೇ ಇಲ್ಲ. ಗೌರಿಗೆ ತಂದೆ ತಾಯಿ, ಅತ್ತೆ, ಮಾವ, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಇದ್ದರೂ, ಅವರ ಒಡನಾಟ ಗೌರಿಯ ಮುಖದಲ್ಲಿ ನಗು ತರಿಸಲಿಲ್ಲ. ಶಶಿ ಶಾಲೆಗೆ ಹೋಗುತ್ತಿದ್ದ. ಕುಮಾರ್ ಇಲ್ಲದ ಒಂದೊಂದು ಕ್ಷಣವೂ ಆಕೆಗೆ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಮಗನ ಭವಿಷ್ಯವನ್ನು ರೂಪಿಸುವ ಸಲುವಾಗಿಯಾದರೂ ಗೌರಿ ಗಟ್ಟಿಯಾಗಿ ಬಾಳಲೇಬೇಕಾಗಿತ್ತು. ಮರೆಯಾದ ಗಂಡನನ್ನು ಮರೆಯಲು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದಳು. ಈಗ ಗೌರಿ ಕೊಂಚ ನೆಮ್ಮದಿಯನ್ನು ಕಂಡುಕೊಂಡಿದ್ದಳು.
ಆದರೆ ವಿಧಿಯು ಯಾರ ಯಾರ ಜೀವನದಲ್ಲಿ ಹೇಗೆಲ್ಲ ಆಟ ಆಡುತ್ತದೆಯೆಂದು ಹೇಳಲು ಸಾಧ್ಯವಿಲ್ಲ.

ಗೌರಿಗೆ ಇನ್ನೂ ಚಿಕ್ಕ ವಯಸ್ಸು. ಆಕೆಯ ಮುಖದಲ್ಲಿ ಮುಗ್ಧತೆ ಎದ್ದು ಕಾಣುತ್ತಿತ್ತು. ಆಕೆ ವಿಧವೆಯಾಗಿದ್ದರೂ ಸೌಂದರ್ಯದ ಖನಿಯೇ ಆಗಿದ್ದಳು. ಈಗಲೂ ಆಕೆಯನ್ನು ಮದುವೆಯಾಗಲು ನಾ ಮುಂದು ತಾ ಮುಂದು ಎಂದು ಬರುವವರ ಸಂಖ್ಯೆ ಕಡಿಮೆ ಇರಲಿಲ್ಲ. ಆದರೆ ಗೌರಿಗೆ ಎರಡನೇ ಮದುವೆ ಬಗ್ಗೆ ಆಸಕ್ತಿ ಇರಲಿಲ್ಲ. ಆದರೂ ಆಕೆಯ ಒಡಹುಟ್ಟಿದವರು ಆಕೆ ಒಂಟಿಯಾಗಿ ಇರಬಾರದೆಂಬ ಕಾರಣಕ್ಕೆ ಆಕೆಗೆ ಗಂಡು ಹುಡುಕುತ್ತಿದ್ದರು. ಗೌರಿಯ ಕುಟುಂಬದ ಸ್ನೇಹಿತನೊಬ್ಬನ ಮೂಲಕ ಗಿರೀಶ್ ಎಂಬಾತ ಗೌರಿಯ ಜೀವನದಲ್ಲಿ ಬರುವ ಹಾಗಾಯಿತು.

ಗಿರೀಶ್ ನಾಲ್ಕಾರು ಚಿಕ್ಕ ಪುಟ್ಟ ಬ್ಯುಸಿನೆಸ್ ಮಾಡಿಕೊಂಡಿದ್ದ ವ್ಯಕ್ತಿ. ಎಲ್ಲರ ದೃಷ್ಟಿಯಲ್ಲಿ ಒಳ್ಳೆಯ ವ್ಯಕ್ತಿಯಂತೆ ನಡೆದುಕೊಳ್ಳುತ್ತಿದ್ದ ಗಿರೀಶ್ ಅಷ್ಟೇನೂ ಒಳ್ಳೆಯವನಾಗಿರಲಿಲ್ಲ. ತುಂಬಾ ಸ್ವಾರ್ಥಿಯಾಗಿದ್ದ. ಮೂಲತಃ ಸ್ತ್ರೀಲೋಲನಾಗಿದ್ದ. ಸಕಲ ಕಲಾ ವಲ್ಲಭನಾಗಿದ್ದ. ಸ್ವೇಚ್ಛಾಚಾರಿಯೂ ಆಗಿದ್ದ. ಇದರಿಂದಾಗಿ ಗಿರೀಶನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನೂ ವಿದುರನಾಗಿದ್ದ. ಗಿರೀಶನಿಗೂ ಚಿಕ್ಕ ವಯಸ್ಸೇ ಇತ್ತು. ಗೌರಿಯ ಕುಟುಂಬದ ಸ್ನೇಹಿತ ಗಿರೀಶನಿಗೂ ಸ್ನೇಹಿತನೇ ಆಗಿದ್ದ. ಹೀಗಾಗಿ ಆತನ ಮೂಲಕ ಗೌರಿಯ ವಿಷಯವನ್ನು ತಿಳಿದುಕೊಂಡಿದ್ದ. ಆಕೆಯ ಫೋನ್ ನಂಬರನ್ನು ಪಡೆದು ದಿನಕ್ಕೊಂದು ನೆಪ ಹೂಡಿ ಫೋನ್‌ ಮಾಡುತ್ತಾ ಆಕೆಯ ಮನವನ್ನು ಕಲಕಿಬಿಟ್ಟಿದ್ದ. ಆತ ಹೆಂಡತಿ ಮತ್ತು ಮಕ್ಕಳು ಇಲ್ಲದ ಅನಾಥ ಎಂಬ ಅನುಕಂಪ ಗೌರಿಯ ಮನದಲ್ಲಿ ಮೂಡಿತ್ತು.

ಇಂತಹ ಸಂದರ್ಭದಲ್ಲಿ ತನ್ನನ್ನು ಭೇಟಿ ಮಾಡುವಂತೆ ಗಿರೀಶ ಗೌರಿಗೆ ಹೇಳಿದ. ಗೌರಿ ಗಿರೀಶ್ ಹೇಳಿದ ಪಾರ್ಕ್ ಬಳಿ ಹೋಗಿ ಆತನಿಗಾಗಿ ಕಾಯುತ್ತಿದ್ದಳು. ಆಕೆಯ ಮನದಲ್ಲಿ ಏನೋ ಕಾತುರ. ಗಿರೀಶ ಹೇಗಿರಬಹುದೆಂಬ ನೂರು ಕಲ್ಪನೆಗಳು ಆಕೆಯನ್ನು ಕಾಡುತ್ತಿದ್ದವು. ಐದೇ ನಿಮಿಷದಲ್ಲಿ ಗಿರೀಶ ಸ್ಕೂಟರಿನಲ್ಲಿ ಬಂದ. ಗೌರಿಯ ಬಗ್ಗೆ ಮೊದಲೇ ಕೇಳಿ ತಿಳಿದಿದ್ದ ಅವನಿಗೆ ಆಕೆಯ ನ್ನು ನೋಡಿ ತುಂಬಾ ಖುಷಿಯೇ ಆಗಿತ್ತು. ನೋಡಲು ಸುಂದರವಾಗಿದ್ದಾಳೆ.ಮತ್ತು ಶ್ರೀಮಂತನ ಹೆಂಡತಿಯಾಗಿದ್ದ ಕಾರಣ ಆಸ್ತಿಯನ್ನೂ ಹೊಂದಿದ್ದಾಳೆಂಬ ಲೆಕ್ಕಾಚಾರ ಅವನಲ್ಲಿತ್ತು. ಗಿರೀಶನನ್ನು ನೋಡಿದ ಗೌರಿಗೆ ಮಾತ್ರ ತುಂಬಾ ನಿರಾಸೆಯಾಗಿತ್ತು. ಆಗ ಆಕೆ ಜನ್ನನ ಯಶೋಧರ ಚರಿತೆಯಲ್ಲಿ ಬರುವ ಮಾವುತ ವರ್ಣನೆಯನ್ನು ನೆನಪಿಸಿಕೊಂಡಳು. ಆದರೆ ಕ್ಷಣದಲ್ಲೇ ಗಿರೀಶನ ಬೆಣ್ಣೆಯಂತಹ ಮಾತುಗಳಿಗೆ ಸೋತುಹೋದಳು. ಇಬ್ಬರೂ ಗಂಟೆಗಟ್ಟಲೇ ಹರಟೆ ಹೊಡೆದರು. ಪಾರ್ಕ್ ನ ಪಕ್ಕದಲ್ಲೇ ಇದ್ದ ಹೋಟೆಲಿನಲ್ಲಿ ತಿಂಡಿ ತಿಂದು ಕಾಫಿ ಕುಡಿದು ಮನೆಯ ದಾರಿ ಹಿಡಿದರು. ಗಿರೀಶ ತನ್ನ ಸ್ಕೂಟರಿನಲ್ಲಿಯೇ ಆಕೆಯನ್ನು ಕೂರಿಸಿಕೊಂಡು ಆಕೆಯನ್ನು ಮನೆಗೆ ತಲುಪಿಸಿ ಬಂದ.

ನಂತರ ದಿನಕ್ಕೆರಡು ಬಾರಿ ಆಕೆಗೆ ಫೋನ್ ಮಾಡಿ ಮಾತಾಡುತ್ತಿದ್ದ. ಗೌರಿಗೆ ಆತನ ಬುದ್ಧಿವಂತಿಕೆ ಹಾಗೂ ಆತನ ಧ್ವನಿಯಲ್ಲಿನ ಮಾದಕತೆಯ ಮುಂದೆ ಅವನ ಬಾಹ್ಯ ಸೌಂದರ್ಯ ಗೌಣವಾಗಿಬಿಟ್ಟಿತ್ತು. ಒಂಟಿ ಬಾಳಲ್ಲಿ ಬೆಳಕಾಗಿ ಬಂದ ಸೂರ್ಯ ಎಂದೇ ಅವನನ್ನು ಸಂಪೂರ್ಣವಾಗಿ ನಂಬಿದಳು. ಗಿರೀಶನು ಗೌರಿಯ ಕುಟುಂಬದ ಸದಸ್ಯರನ್ನು ಸಂಪರ್ಕಿಸಿ ಮದುವೆಯಾಗುವುದಾಗಿಯೂ, ಕಾರಣಾಂತರದಿಂದ ಸ್ವಲ್ಪ ಸಮಯ ಬೇಕೆಂದೂ ತಿಳಿಸಿದ. ಹೀಗಾಗಿ ಗಿರೀಶನ ಮೇಲೆ ಎಲ್ಲರಿಗೂ ಗೌರವ ಹೆಚ್ಚಾಗಿತ್ತು. ಮದುವೆಯಾಗುವ ಭರವಸೆಯೊಂದಿಗೆ ಗೌರಿ ತನ್ನ ಸರ್ವಸ್ವವನ್ನೂ ಗಿರೀಶನಿಗೆ ಅರ್ಪಿಸಿ ಬಿಟ್ಟಿದ್ದಳು. ಹೀಗಾಗಿ ಗಿರೀಶ ಗೌರಿಯ ಆಸ್ತಿಯನ್ನು ಬಂಡವಾಳವನ್ನಾಗಿ ಪರಿವರ್ತಿಸಿ ಹಗಲಿರಳೂ ಕಷ್ಟ ಪಟ್ಟು ದುಡಿದು ದೊಡ್ಡ ಶ್ರೀಮಂತನಾದ ಮತ್ತು ದೊಡ್ಡ ಉದ್ದಿಮೆದಾರನಾದ. ಗೌರಿ ಮತ್ತು ಗಿರೀಶ ಬೇರೆ ಬೇರೆ ಮನೆಯಲ್ಲಿದ್ದರೂ ನಾಲ್ಕೈದು ವರ್ಷ ಕಾಲ ಅನ್ಯೋನ್ಯವಾಗಿಯೇ ಇದ್ದರು. ಆದರೆ ಗಿರೀಶ ಗೌರಿಗೆ ತಾಳಿ ಕಟ್ಟುವ ವಿಚಾರದಲ್ಲಿ ಮಾತ್ರ ಮೀನಾ ಮೇಷ ಎಣಿಸುತ್ತಿದ್ದ. ಮದುವೆಯ ಪ್ರಸ್ತಾಪ ಬಂದಾಗಲೆಲ್ಲಾ ಏನಾದರೊಂದು ನೆಪವೊಡ್ಡಿ ಮದುವೆಯನ್ನು ಮುಂದೂಡುತ್ತಿದ್ದ. ಗೌರಿಯ ಆಸ್ತಿಯ ಮೂಲಕ ವ್ಯವಾಹಾರದಲ್ಲಿ ಸಂಪಾದಿಸಿದ ಲಾಭದಲ್ಲಿ ಪಾಲು ನೀಡಲು ಸಿದ್ಧನಿದ್ದನೇ ಹೊರತು ಮದುವೆಯ ಬಂಧನ ಆತನಿಗೆ ಬೇಕಿರಲಿಲ್ಲ.

ದಿನ ಕಳೆದಂತೆ ಗಿರೀಶನ ನಿಜ ಸ್ವರೂಪ ಗೌರಿಗೆ ತಿಳಿಯಿತು. ಅವರಿಬ್ಬರಲ್ಲೂ ಆಕರ್ಷಣೆ ಕಡಿಮೆಯಾಯಿತು. ಪರಸ್ಪರ ಕಲಹಗಳು ಆರಂಭವಾದವು. ಗಿರೀಶ ದಿನಕ್ಕೊಂದು ಹೆಣ್ಣಿನೊಡನೆ ಖುಷಿಯಾಗಿ ಇರಬಲ್ಲ. ಆದರೆ ಗೌರಿಯ ಜೀವನ ಸಂಪೂರ್ಣವಾಗಿ ನಾಶವಾಯಿತು. ಪ್ರೀತಿಸುವ ಗಂಡನನ್ನು ತನ್ನ ಬಳಿ ಕರೆಸಿಕೊಂಡ ದೇವರನ್ನು ನೆನೆಯುತ್ತಾ ದಿನವೂ ಕಣ್ಣೀರಿಡುತ್ತಲೇ ಇದ್ದಳು. ಕೊನೆಗೊಂದು ದಿನ ಇಬ್ಬರು ಪುರುಷರೊಡನೆ ಸಂಸಾರದ ಜೀವನದಲ್ಲಿ ಸೋತು ಹೋಗಿದ್ದಕ್ಕೆ ಮನನೊಂದು ಸಾವಿಗೆ ಶರಣಾಗಿಬಿಟ್ಟಿದ್ದಾಳೆ. ಆಕೆಯ ಮಗ ಶಶಿ ತಬ್ಬಲಿಯಾಗಿದ್ದಾನೆ. ಗಿರೀಶ ಮತ್ತೊಂದು ಹೆಣ್ಣಿನ ಬೇಟೆಯಲ್ಲಿದ್ದಾನೆ.

ವಿಧವೆಯಾದ ಹೆಣ್ಣು ಎರಡನೇ ಮದುವೆಯಾಗುವುದು ತಪ್ಪಲ್ಲ. ಆದರೆ ಮುನ್ನ ವ್ಯಕ್ತಿಗಳ ಬಗ್ಗೆ ಚನ್ನಾಗಿ ತಿಳಿದುಕೊಳ್ಳದೇ ಹೋದರೆ ಬೆಂಕಿಯಿಂದ ಬಾಣಲಿಗೆ ಬಿದ್ದ ಹಾಗೆ ಅಲ್ಲವೇ?

ವಿನೋದಾ ಕರಣಂ
ಉಪನ್ಯಾಸಕರು.
ಬಳ್ಳಾರಿ.

LEAVE A REPLY

Please enter your comment!
Please enter your name here