ಆಪರೇಷನ್ ಕಮಲ ಬೇಡಅಂದ್ರು ಮೋದಿ?

0
36

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಮೊನ್ನೆ ದಿಲ್ಲಿಗೆ ಹೋಗಿದ್ದ ರಾಜ್ಯ ಬಿಜೆಪಿಯ ಟಾಪ್‌ ಲೀಡರುಗಳಿಗೆ ವರಿಷ್ಟರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವನ್ನು ಯಾವ ಕಾರಣಕ್ಕೂ ಅಲುಗಾಡಿಸುವುದಿಲ್ಲ ಎಂಬುದು ಈ ಸಂದೇಶ.

ಅಂದ ಹಾಗೆ ಕೆಲವೇ ಕಾಲದ ಹಿಂದೆ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ವಿಷಯದಲ್ಲಿ ರಾಜ್ಯದ ಕೆಲ ಬಿಜೆಪಿ ನಾಯಕರು ಉತ್ಸುಕರಾಗಿದ್ದರು. ವರಿಷ್ಟರು ಅನುಮತಿ ನೀಡಿದರೆ ಸಾಕು,ಸರ್ಕಾರ ಉರುಳಿಸುವ ಜವಾಬ್ದಾರಿ ನಮ್ಮದು ಅಂತ ಆಪ್ತ ವಲಯಗಳಲ್ಲಿ ರಣೋತ್ಸಾಹ ತೋರಿಸುತ್ತಿದ್ದರು.

ಅವರ ಇಂತಹ ಉತ್ಸಾಹಕ್ಕೆ ಕಾರಣವೂ ಇತ್ತು.ಯಾಕೆಂದರೆ ೨೦೧೯ ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರವನ್ನು ಉರುಳಿಸುವುದರ ಹಿಂದೆ ಇವರ ಕೈ ಕೆಲಸ ಮಾಡಿತ್ತು.ಇಂತಹ ಅನುಭವ ಇದ್ದ ಕಾರಣಕ್ಕಾಗಿಯೇ ಕರ್ನಾಟಕದಲ್ಲಿ ಮತ್ತೊಂದು ರೌಂಡು ಆಪರೇಷನ್‌ ಮಾಡಲು ಈ ನಾಯಕರು ಸಜ್ಜಾಗಿದ್ದರು.

ಹೀಗೆ ಅವರು ಸಜ್ಜಾಗಿ ನಿಂತ ಕಾಲಕ್ಕೆ ಸರಿಯಾಗಿ ಜಾತ್ಯತೀತ ಜನತಾ ದಳ ಕೂಡಾ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿತಲ್ಲ?ಇಂತಹ ಹೊಂದಾಣಿಕೆಯಾಗಿದ್ದೇ ತಡ,ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಹಲವು ಮೂಲಗಳಿಂದ ಪ್ರಯತ್ನ ಆರಂಭವಾದ ಸಂದೇಶಗಳು ಅಪ್ಪಳಿಸತೊಡಗಿದವು.

ಈ ಪೈಕಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದವರೆಂದರೆ ಗೋವಾದ ಮುಖ್ಯಮಂತ್ರಿ ಸಾವಂತ್‌ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕ ದೇವೇಂದ್ರ ಫಡ್ನವೀಸ್.ನೋಡ ನೋಡುತ್ತಿದ್ದಂತೆಯೇ ಈ ಇಬ್ಬರು ನಾಯಕರು ರಾಜ್ಯ ಕಾಂಗ್ರೆಸ್‌ ನ ಹಲ ಗುಂಪುಗಳ ನಾಯಕರ ಜತೆ ಚರ್ಚೆ ನಡೆಸುತ್ತಿದ್ದಾರೆ.ವರಿಷ್ಟರಿಂದ ಸಂದೇಶ ದೊರೆತ ತಕ್ಷಣ ಆಪರೇಷನ್‌ ಗೆ ಕೈ ಹಾಕುತ್ತಾರೆ ಎಂಬ ಮಾತುಗಳು ಕೇಳಿಸತೊಡಗಿದವು.

ಇದು ಸಾಲದೆಂಬಂತೆ ಇವತ್ತು ಉಪಮುಖ್ಯಮಂತ್ರಿಯಾಗಲು ಹವಣಿಸುತ್ತಿರುವ ಮುಂಬಯಿ-ಕರ್ನಾಟಕ ಭಾಗದ ಸಚಿವರೊಬ್ಬರು ಪದೇ ಪದೇ ದೇವೇಂದ್ರ ಫಡ್ನವೀಸ್‌ ಜತೆ ಮಾತುಕತೆ ನಡೆಸಿ ಬರುತ್ತಿದ್ದಾರೆ.ಬಿಜೆಪಿ ವರಿಷ್ಟರಿಂದ ಸೂಚನೆ ಬಂದ ಕೂಡಲೇ ತಮ್ಮ ಇಪ್ಪತ್ತೈದಕ್ಕೂ ಹೆಚ್ಚು ಬೆಂಬಲಿಗ ಶಾಸಕರ ಜತೆ ಕಮಲ ಪಾಳಯದ ಕಡೆ ವಲಸೆ ಹೋಗಲಿದ್ದಾರೆ ಎಂಬ ಮಾತುಗಳು ತೇಲಿ ಬಂದವು.

ಅಷ್ಟೇ ಅಲ್ಲ,ಸಿದ್ಧರಾಮಯ್ಯ ಅವರ ಸಂಪುಟದಲಿ ಮಂತ್ರಿಗಿರಿ ಸಿಗದೆ ಹತಾಶರಾಗಿರುವ ಕಾರವಾರ ಭಾಗದ ನಾಯಕರೊಬ್ಬರು ಗೋವಾ ಮುಖ್ಯಮಂತ್ರಿ ಸಾವಂತ್‌ ಅವರ ಜತೆ ಮಾತುಕತೆ ನಡೆಸುತ್ತಾ ಒಳಗಿಂದೊಳಗೇ ಸೆಟ್ಲಾಗಿದ್ದಾರೆ.ಹೀಗಾಗಿ ಅವರೂ ಟೈಮು ನೋಡಿ ರಾಜ್ಯ ಕಾಂಗ್ರೆಸ್ಸಿಗೆ ಷಾಕ್‌ ಕೊಡಲಿದ್ದಾರೆ ಅಂತ ಬಿಜೆಪಿಯ ಕೆಲ ಹಿರಿಯ ನಾಯಕರೇ ಪಿಸುಗುಟ್ಟತೊಡಗಿದರು.

ಆದರೆ ಕಳೆದ ಶನಿವಾರ,ಭಾನುವಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ದಿಲ್ಲಿಗೆ ಹೋದ ರಾಜ್ಯದ ಪ್ರಮುಖ ನಾಯಕರಿಗೆ ಒಂದು ಮೆಸೇಜು ಸ್ಪಷ್ಟವಾಗಿ ತಲುಪಿದೆ.ಅದೆಂದರೆ,ಅಗತ್ಯ ಬಿದ್ದರೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಗೆ ಹೋಗೋಣ.ಆದರೆ ಯಾವ ಕಾರಣಕ್ಕೂ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಅಸ್ಥಿರಗೊಳಿಸಿ ಉರುಳಿಸುವುದು ಬೇಡ ಎಂಬುದು ಈ ಸಂದೇಶ.

ಮೂಲಗಳ ಪ್ರಕಾರ,ಈ ನಾಯಕರಿಗೆ ಇಂತಹದೊಂದು ಸಂದೇಶವನ್ನು ರವಾನಿಸಿದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಶದ ಜಗತ್‌ ಪ್ರಕಾಶ್‌ ನಡ್ಡಾ.ಹೀಗೆ ನಡ್ಡಾ ಅವರು ರವಾನಿಸಿದ ಸಂದೇಶವೆಂದರೆ ನೋ ಡೌಟ್‌,ಇದು ಸ್ವತ: ಪ್ರಧಾನಿ ನರೇಂದ್ರಮೋದಿ ಅವರ ಇಶಾರೆ.

■ಮೋದಿ ಚಿಂತೆ ಏನು?
ಅಂದ ಹಾಗೆ ಕರ್ನಾಟಕದಲ್ಲಿರುವ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ವಿಷಯದಲ್ಲಿ ಪ್ರಧಾನಿ ನರೇಂದ್ರಮೋದಿ ಇದ್ದಕ್ಕಿದ್ದಂತೆ ಯಾಕೆ ಆಸಕ್ತಿ ಕಳೆದುಕೊಂಡರು?ಅಂತ ರಾಜ್ಯ ಬಿಜೆಪಿಯ ಈ ಹಿರಿಯ ನಾಯಕರು ಕೌಂಟರ್‌ ಚೆಕ್‌ ಮಾಡಿಕೊಂಡಿದ್ದಾರೆ.ಅವರಿಗಿರುವ ತಕ್ಷಣದ ಮಾಹಿತಿ ಎಂದರೆ,ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸಲು ಕೈ ಹಾಕುವುದು ಎಂದರೆ ಅನಗತ್ಯ ತಲೆನೋವನ್ನು ಎಳೆದುಕೊಂಡಂತೆ ಅಂತ ಮೋದಿ ಭಾವಿಸಿದ್ದಾರೆ.

ಕಾರಣ?ಸಿದ್ಧರಾಮಯ್ಯ ಅವರ ಸರ್ಕಾರಕ್ಕೆ ಇವತ್ತು ನೂರಾ ಮೂವತ್ತೈದು ಶಾಸಕರ ಬಲವಿದೆ.ಪಕ್ಷಾಂತರ ನಿಷೇಧ ಕಾಯ್ದೆಯ ಹೊಡೆತವಿಲ್ಲದಂತೆ ನೋಡಿಕೊಳ್ಳಬೇಕು ಎಂದರೆ ಈ ಶಾಸಕರ ಪೈಕಿ ಮೂರನೇ ಎರಡು ಭಾಗದಷ್ಟು ಶಾಸಕರನ್ನು ಸೆಳೆದುಕೊಳ್ಳಬೇಕು.ಆದರೆ ಸಧ್ಯದ ಸ್ಥಿತಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಶಾಸಕರನ್ನು ಸೆಳೆಯುವುದು ಕಷ್ಟದ ಕೆಲಸ.

ಒಂದು ವೇಳೆ ಸರ್ಕಾರ ಬೀಳಿಸಿದರೆ ಸಾಕು ಎನ್ನುವುದಾದರೆ ನಲವತ್ತೈದರಿಂದ ಐವತ್ತು ಶಾಸಕರನ್ನು ಸೆಳೆಯಬೇಕು.ವಿವಿಧ ಶಕ್ತಿಯ ಮೂಲಕ ಇಷ್ಟು ಶಾಸಕರನ್ನೇ ನೋ ಸೆಳೆಯಬಹುದು.ಆದರೆ ಅವರನ್ನು ಉಪಚುನಾವಣೆಯ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರಬೇಕು.

ಒಂದು ವೇಳೆ ಉಪಚುನಾವಣೆಯ ಕಣಕ್ಕಿಳಿಯುವ ಶಾಸಕರ ಪೈಕಿ ಅರ್ಧದಷ್ಟು ಮಂದಿ ಶಾಸಕರು ಸೋತರೂ ಮುಖಭಂಗವಾಗುವುದು ತಮಗೆ.ಯಾಕೆಂದರೆ,ಬಿಜೆಪಿ ಈ ಪ್ರಮಾಣದಲ್ಲಿ ಸೋಲು ಅನುಭವಿಸಿದರೆ ಪುನ: ಕಾಂಗ್ರೆಸ್‌ ಸರ್ಕಾರವೇ ಸೆಟ್ಲಾಗುತ್ತದೆ.

ಈ ಮಧ್ಯೆ ಕಾಂಗ್ರೆಸ್‌ ಪಕ್ಷದಿಂದ ದೊಡ್ಡ ಸಂಖ್ಯೆಯ ಶಾಸಕರನ್ನು ಸೆಳೆಯುತ್ತೇವಲ್ಲ?ಹೀಗೆ ಸೆಳೆದವರ ಪೈಕಿ ಬಹುತೇಕರು ಬಿಜೆಪಿ ನೇತೃತ್ವದ ಸರ್ಕಾರ ಬಂದರೆ ಮಂತ್ರಿ ಮಂಡಲ ಸೇರಲು ಹವಣಿಸುತ್ತಾರೆ.೨೦೧೯ ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಫಲವಾಗಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸಂಪುಟದಲ್ಲಿ ವಲಸಿಗರೇ ದೊಡ್ಡ ಮಟ್ಟದಲ್ಲಿ ಮಂತ್ರಿಗಳಾಗಿದ್ದರು.

ಹೀಗೆ ಹೊರಗಿನಿಂದ ಬಂದವರಿಗೇ ಹೆಚ್ಚಿನ ಆದ್ಯತೆ ಸಿಕ್ಕ ಪರಿಣಾಮವಾಗಿ ೨೦೨೩ ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸ್ವಪಕ್ಷೀಯರು ಬೇಸತ್ತು ಕುಳಿತಿದ್ದರು.ನಾಳೆ ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸಿ ಪರ್ಯಾಯ ಸರ್ಕಾರವನ್ನು ರಚಿಸಿದರೂ ಇದು ತಪ್ಪದ ತಲೆ ನೋವು.ಹೀಗಾಗಿ ಇಂತಹ ತಲೆ ನೋವಿಗೆ ಕೈ ಹಾಕುವ ಬದಲು ಸೂಕ್ತ ಕಾಲ ಬರುವವರೆಗೆ ಕಾಯುವುದು ಒಳ್ಳೆಯದು.

ಸಧ್ಯದ ಪರಿಸ್ಥಿತಿಯನ್ನು ನೋಡಿದರೆ ಸಿದ್ಧರಾಮಯ್ಯ ಅವರ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ.ಅದು ಜನರಿಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸಲು ಈ ವರ್ಷವೂ ಪರದಾಡಬೇಕಾಗುತ್ತದೆ.ಅಷ್ಟೇ ಅಲ್ಲ,ಹಣಕಾಸಿನ ವಿಷಯದಲ್ಲಿ ಕೇಂದ್ರದ ವಿರುದ್ಧ ತಕರಾರು ಎತ್ತುವ ಸ್ಥಿತಿಗೆ ಬಂದಿದೆ ಎಂದರೆ,ಮುಂದಿನ ದಿನಗಳಲ್ಲಿ ಅದರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ಹೀಗೆ ಅದರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದರೆ ಕಾಂಗ್ರೆಸ್‌ ಪಕ್ಷದ ಶಾಸಕರೇ ಕಿಡಿಕಿಡಿಯಾಗುತ್ತಾರೆ.ಅಷ್ಟೇ ಅಲ್ಲ,ತಮ್ಮ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಯುತ್ತಿಲ್ಲ ಎಂಬ ಕಾರಣಕ್ಕಾಗಿ ಪರ್ಯಾಯ ಮಾರ್ಗಗಳ ಕಡೆ ಹೊರಳಿ ನೋಡುವ ಸ್ಥಿತಿಗೆ ಬರುತ್ತಾರೆ.ಈ ಮಧ್ಯೆ ಮುಖ್ಯಮಂತ್ರಿ ಹುದ್ದೆಯ ವಿಷಯದಲ್ಲಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ನಡುವೆ ನಡೆಯುತ್ತಿರುವ ಸಂಘರ್ಷ ಇನ್ನೊಂದು ವರ್ಷ ಕಳೆಯುವುದರೊಳಗಾಗಿ ವಿಕೋಪಕ್ಕೆ ತಲುಪಿರುತ್ತದೆ.ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ನಡೆಸಲು ಇದೇ ಪಕ್ವ ಕಾಲ.

ಇದೇ ರೀತಿ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಕೈ ಹಾಕಿ ಪರ್ಯಾಯ ಸರ್ಕಾರ ರಚಿಸಬೇಕೆಂದರೆ ಇಲ್ಲಿ ತಮ್ಮ ಸ್ಥಿತಿಯೂ ಸರಿ ಇಲ್ಲ.ಅರ್ಥಾತ್‌,ತಮಗಿರುವ ಅರವತ್ತಾರು ಶಾಸಕ ಬಲದ ಜತೆ ಜೆಡಿಎಸ್‌ ಮತ್ತು ಪಕ್ಷೇತರರ ಬೆಂಬಲವನ್ನೂ ನೆಚ್ಚಿಕೊಳ್ಳಬೇಕಾಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ನಿಂದ ಶಾಸಕರನ್ನು ಸೆಳೆದು ಸರ್ಕಾರ ರಚನೆಗೆ ಕೈ ಹಾಕುವುದು ಎಂದರೆ ಕಿಚಡಿ ಮಾಡಿದಂತೆ.

ಯಾಕೆಂದರೆ ಸರ್ಕಾರದಲ್ಲಿ ಭಾಗಿಯಾಗುವ ಎಲ್ಲರೂ ತಮಗೆ ಇಷ್ಟು ಆದ್ಯತೆ ಸಿಗಬೇಕು ಅಂತ ಪಟ್ಟು ಹಿಡಿಯುತ್ತಾರೆ.ನಾವು ಬರದೆ ಇದ್ದರೆ ಸರ್ಕಾರ ಮಾಡಲು ಸಾಧ್ಯವೇ ಇರಲಿಲ್ಲ ಎನ್ನುತ್ತಾರೆ.ಹೀಗಾಗಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವನ್ನು ಉರುಳಿಸಿ ಪರ್ಯಾಯ ಸರ್ಕಾರ ರಚನೆಗೆ ಕೈ ಹಾಕುವುದು ಯಾವ ಕಾರಣಕ್ಕೂ ಪ್ರಾಕ್ಟಿಕಲ್‌ ಅಲ್ಲ ಎಂಬುದು ಮೋದಿ ಲೆಕ್ಕಾಚಾರ.

ಯಾವಾಗ ರಾಜ್ಯ ಬಿಜೆಪಿಯ ಟಾಪ್‌ ಲೀಡರುಗಳಿಗೆ ಈ ಮೆಸೇಜು ಸಿಕ್ಕಿತೋ?ಇದಾದ ನಂತರ ಕೆಲವರಿಗೆ ಬೇಸರವಾಗಿದೆ.ಯಾಕೆಂದರೆ,ಸಿದ್ಧರಾಮಯ್ಯ ಸರ್ಕಾರ ಉರುಳಿದರೆ ತಾವು ಸಿಎಂ ಆಗುವುದು ಗ್ಯಾರಂಟಿ ಅಂತ ಈ ನಾಯಕರು ಲೆಕ್ಕ ಹಾಕಿದ್ದರು.ಕೆಲ ದಿನಗಳ ಹಿಂದೆ ಈ ನಾಯಕರ ಲೆಕ್ಕಾಚಾರದ ವಿವರ ಸಿಕ್ಕಾಗ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಧಿಘ್ಮೂಢರಾಗಿದ್ದರಂತೆ.

ಅದೇನೇ ಇರಲಿ,ಆದರೆ ಪ್ರಧಾನಿ ನರೇಂದ್ರಮೋದಿಯವರ ಲೆಕ್ಕಾಚಾರ ಬದಲಾಗಿರುವುದರಿಂದ,ಸಿದ್ಧರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ಬದಲು ಇನ್ನಷ್ಟು ಕಾಲ ಮೌನವಾಗಿರೋಣ ಎಂಬ ತೀರ್ಮಾನಕ್ಕೆ ಬಂದಿರುವುದರಿಂದ ರಾಜ್ಯ ಬಿಜೆಪಿಯ ಸೇನಾನಿಗಳು ಲೋಕಸಭೆ ಚುನಾವಣೆಯ ಮೇಲೆ ಗಮನ ಕೇಂದ್ರೀಕರಿಸುವ ಅನಿವಾರ್ಯತೆ ಎದುರಾಗಿದೆ.ಮುಂದೇನು ಕತೆಯೋ?

■ಯೋಗಿಯ ಹೊಸ ಸ್ಟೋರಿ

ಈ ಮಧ್ಯೆ ಬಿಜೆಪಿಯ ನಾಯಕ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅವರು ಮೊನ್ನೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದರಂತೆ.
ಈ ಭೇಟಿಯ ಸಂದರ್ಭದಲ್ಲಿ ನೇರವಾಗಿ ವಿಷಯ ಪ್ರಸ್ತಾಪಿಸಿದ ಅವರು,ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಣಕ್ಕೆ ಬಿಜೆಪಿ ವತಿಯಿಂದ ನಿಮ್ಮ ಅಳಿಯ ಡಾ.ಮಂಜುನಾಥ್ ಅವರನ್ನು ಕಣಕ್ಕಿಳಿಸಿದರೆ ಡಿ.ಕೆ.ಸುರೇಶ್ ವಿರುದ್ಧ ಮಿನಿಮಮ್ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಸಾರ್ ಎಂದಿದ್ದಾರೆ.
ಯೋಗೀಶ್ವರ್ ಅವರ ಮಾತು ಕೇಳಿದ ದೇವೇಗೌಡರು ಹಸನ್ಮುಖಿಯಾಗಿ, ಹೌದು,ಈಗ ಡಾ.ಮಂಜುನಾಥ್ ಅವರ ಜಾತಕವೂ ತುಂಬ ಚೆನ್ನಾಗಿದೆ.ನೋಡೋಣ, ಬಿಜೆಪಿ ವರಿಷ್ಟರು ಏನು ಹೇಳುತ್ತಾರೋ?ಎಂದಿದ್ದಾರೆ.
ಗೌಡರ ಮಾತು ಕೇಳಿ ಉತ್ತೇಜಿತರಾದ ಯೋಗೀಶ್ವರ್,ಬಿಜೆಪಿ ವತಿಯಿಂದ ಡಾ. ಮಂಜುನಾಥ್ ನಿಲ್ಲಲು ರೆಡಿ ಅಂದ್ರೆ ಬಿಜೆಪಿಯಲ್ಲಿ ವಿರೋಧ ಮಾಡುವವರೇ ಇಲ್ಲ ಸಾರ್,ನಾನೂ ಈ ಕುರಿತು ಪಕ್ಷದ ಪ್ರಮುಖರ ಮುಂದೆ ಪ್ರಸ್ತಾಪಿಸಿದ್ದೇನೆ.ನೀವು ಯಸ್ ಎಂದರೆ ಸಾಕು ಎಂದಿದ್ದಾರೆ.
ಅಂದ ಹಾಗೆ ಈ ಹಿಂದೆ ಯೋಗೀಶ್ವರ್ ಅವರಿಗೆ ಸಂಸದರಾಗುವ ಇಚ್ಚೆ ಇತ್ತು.ಆದರೆ ಕೆಲ ದಿನಗಳಿಂದ ಈ ವಿಷಯದಲ್ಲಿ ಆಸಕ್ತಿ ಕಳೆದುಕೊಂಡಿರುವ ಅವರು,ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ‌ ಕುಮಾರಣ್ಣ ನಿಂತ್ರೆ ಗೆಲ್ಲಿಸಿ ಕಳಿಸ್ತೀವಿ ಅನ್ನತೊಡಗಿದರು.
ಆದರೆ ಈ ವಿಷಯದಲ್ಲಿ ಕುಮಾರಸ್ವಾಮಿ ಆಸಕ್ತಿ ತೋರದ ಪರಿಣಾಮವಾಗಿ ಯೋಗೀಶ್ವರ್ ಅವರಿಗೆ ಡಾ.ಮಂಜುನಾಥ್ ಡಾರ್ಕ್ ಹಾರ್ಸ್ ಆಗಿ ಕಾಣತೊಡಗಿದ್ದಾರೆ.

■ಸುರ್ಜೇವಾಲ ಹುಡುಕಿದ ಅಸ್ತ್ರ

ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಭ್ರಷ್ಟಾಚಾರದ ಅಸ್ತ್ರ ಬಳಸಬೇಕು ಅಂತ ಪಟ್ಟು‌ ಹಿಡಿದಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಒಂದು ಅಸ್ತ್ರ ಹುಡುಕಿದ್ದಾರೆ.ಈ ಅಸ್ತ್ರದ ಹೆಸರು ಎನ್.ಆರ್.ರಮೇಶ್.
ಈ ಹಿಂದೆ ಬಿಬಿಎಂಪಿಯ ಸದಸ್ಯರಾಗಿದ್ದ ಎನ್.ಆರ್.ರಮೇಶ್ ಹಿಂದೆಯೇ ಶಾಸಕರಾಗಬೇಕಿತ್ತಾದರೂ ಯಡಿಯೂರಪ್ಪ ಕ್ಯಾಂಪಿನ ಹೊಡೆತಕ್ಕೆ ಟಿಕೆಟ್ ವಂಚಿತರಾಗುತ್ತಿದ್ದಾರೆ.
ಭ್ರಷ್ಟಾಚಾರದ ಎಪಿಸೋಡುಗಳನ್ನು ಹೊರತೆಗೆಯುವ ವಿಷಯದಲ್ಲಿ ಮಾಸ್ಟರ್ ಆಗಿರುವ ಎನ್.ಆರ್.ರಮೇಶ್ ಕಾಂಗ್ರೆಸ್ ವಿರುದ್ಧ 122 ಭ್ರಷ್ಟಾಚಾರದ ಆರೋಪಗಳನ್ನು ಮಾಡಿ ನಡುಗಿಸಿದವರು.
ಹೀಗೆ ಕಾಂಗ್ರೆಸ್ ವಿರುದ್ಧ ಹೋರಾಡಿರುವ ರಮೇಶ್ ಅವರನ್ನು ಕೈ ಪಾಳಯಕ್ಕೆ ಎಳೆದುಕೊಂಡರೆ ಬಿಜೆಪಿಯ ಶಿಬಿರ ನಡುಗುವಂತೆ ಮಾಡಬಹುದು ಎಂಬುದು ಸುರ್ಜೇವಾಲ ಯೋಚನೆ.ಹಾಗಂತಲೇ‌ ಮೊನ್ನೆ ರಮೇಶ್ ಅವರಿಗೆ ಫೋನು ಮಾಡಿದ ಸುರ್ಜೇವಾಲ,ನೀವು ಕಾಂಗ್ರೆಸ್ಸಿಗೆ ಬನ್ನಿ.ತುಂಬ ಎತ್ತರಕ್ಕೆ ಏರುತ್ತೀರಿ ಎಂದಿದ್ದಾರೆ.
ಅವರ ಮಾತು ಎನ್.ಆರ್.ರಮೇಶ್ ಅವರಿಗೆ ಹಿತವೆನ್ನಿಸಿದೆಯಾದರೂ ಸಂಘಪರಿವಾರದ ನಾಯಕರಾದ ಬಿ.ಎಲ್.ಸಂತೋಷ್,ಮುಕುಂದ್,ಸುಧೀರ್ ಮತ್ತು ತಿಪ್ಪೇಸ್ವಾಮಿಯವರನ್ನು ನೆನಪಿಸಿಕೊಂಡು ನಾನು ಕಾಂಗ್ರೆಸ್ಸಿಗೆ ಬರಲ್ಲ ಸಾರ್ ಅಂತ ಪ್ರತಿಯುತ್ತರಿಸಿದ್ದಾರೆ.
ಆದರೆ ಸುರ್ಜೇವಾಲ ಅವರು ರಮೇಶ್ ಬೆನ್ನಿಗೆ ಬಿದ್ದ ವಿಷಯ ತಿಳಿಯುತ್ತಲೇ ಬಿಜೆಪಿಯ ಹಲ ಮಾಜಿ ಸಚಿವರಿಗೆ ಆತಂಕ ಶುರುವಾಗಿರುವುದು ಮಾತ್ರ ಗುಟ್ಟಾಗಿ ಉಳಿದಿಲ್ಲ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here