ವಿಎಸ್‍ಕೆ ವಿಶ್ವವಿದ್ಯಾಲಯದಲ್ಲಿ ಕೌಶಲ್ಯ ಆಧಾರಿತ ಬಿಬಿಎ ಮತ್ತು ಬಿ.ಕಾಂ ಪ್ರೋಗ್ರಾಮ್‍ಗಳ ಶೈಕ್ಷಣಿಕ ಒಡಂಬಡಿಕೆ

0
55

ಬಳ್ಳಾರಿ,ಮೇ 24: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ಚೆನ್ನೈನ ಲಾಜಿಸ್ಟಿಕ್ಸ್ ಸ್ಕಿಲ್ ಸೆಕ್ಟರ್ ಕೌನ್ಸಿಲ್ ಸಂಸ್ಥೆಯ ಶೈಕ್ಷಣಿಕ ಒಡಂಬಡಿಕೆಯು ಮುಂಬರುವ ಶೈಕ್ಷಣಿಕ ವರ್ಷದಿಂದ ಜಾರಿಯಾಗುವಂತೆ ಬುಧವಾರ ನಡೆಯಿತು.

ಮುಖ್ಯವಾಗಿ ನಿರ್ವಹಣಾಶಾಸ್ತ್ರ ಮತ್ತು ವಾಣಿಜ್ಯ ಅಧ್ಯಯನ ವಿಭಾಗದ ಪದವಿಗಳಾದ ಬಿಬಿಎ ಮತ್ತು ಬಿ.ಕಾಂ ವಿದ್ಯಾರ್ಥಿಗಳಿಗೆ ಲಾಜಿಸ್ಟಿಕ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ ಕೋರ್ಸ್‍ಗಳ ಜೊತೆಗೆ ಶೈಕ್ಷಣಿಕ ತರಬೇತಿ ನೀಡುವ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು.
ಒಡಂಬಡಿಕೆಯಲ್ಲಿ ಆಯಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು, ಅಧ್ಯಯನ ವಿಭಾಗಗಳ ಬೋಧಕ ಸಿಬ್ಬಂದಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಜ್ಞಾನಾಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು, ಆನ್‍ಲೈನ್ ಕೋರ್ಸ್‍ಗಳು ಮತ್ತು ವಿಡಿಯೋ ಪಠ್ಯಗಳನ್ನು ಒದಗಿಸುವುದು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನ, ಕಾರ್ಯಾಗಾರ ಆಯೋಜಿಸುವುದು ಹಾಗೂ ಆಧುನಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಸೇರಿದಂತೆ ಇನ್ನಿತರ ಶೈಕ್ಷಣಿಕ ಸಂಬಂಧಿತ ಕಾರ್ಯಕ್ರಮಗಳಿಗೆ ಉತ್ತೇಜಿಸುವುದು ಮುಖ್ಯ ಉದ್ದೇಶಗಳಾಗಿವೆ.

ಅಂತಿಮ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೆ 9 ಸಾವಿರ ರೂ.ಗಳಿಂದ 18 ಸಾವಿರ ರೂ. ಗಳವರೆಗೆ ಮಾಸಿಕ ಪ್ರೋತ್ಸಾಹ ಧನವನ್ನು ತರಬೇತಿ ಅವಧಿಯಲ್ಲಿ ಲಾಜಿಸ್ಟಿಕ್ಸ್ ಸ್ಕಿಲ್ ಸೆಕ್ಟರ್ ಕೌನ್ಸಿಲ್ ಕಡೆಯಿಂದ ವಿದ್ಯಾರ್ಥಿಗಳಿಗೆ ದೊರೆಯುತ್ತದೆ.
ವಿಶ್ವವಿದ್ಯಾಲಯದ ಕುಪತಿಗಳಾದ ಪ್ರೊ.ಸಿದ್ದು.ಪಿ ಆಲಗೂರ ಅವರ ಸಮ್ಮುಖದಲ್ಲಿ ಲಾಜಿಸ್ಟಿಕ್ಸ್ ಸ್ಕಿಲ್ ಸೆಕ್ಟರ್ ಕೌನ್ಸಿಲ್ ಮುಖ್ಯಸ್ಥರ ಪರವಾಗಿ ಪ್ರೊ.ಎಸ್.ಗಣೇಶನ್, ಸ್ಕಿಲ್ಲಿಂಗ್ ಇನ್ ಸ್ಕೂಲ್ ಆ್ಯಂಡ್ ಅಕಾಡೆಮಿಯ ಅಧ್ಯಕ್ಷರಾದ ಡಾ.ಗಾಯತ್ರಿ ಹರೀಶ್ ಹಾಗೂ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎಸ್.ಸಿ.ಪಾಟೀಲ್ ಅವರು ಒಡಂಬಡಿಕೆ ಪತ್ರವನ್ನು ಪರಸ್ಪರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಪಿ.ದಿನೇಶ್, ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಜೀಲನ್ ಬಾಷಾ ಹಾಗೂ ಎರಡು ವಿಭಾಗಗಳ ಎಲ್ಲ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here