ಎಂ ಎಂ ಎಲ್ (ತಿಮ್ಮಪ್ಪನ ಮೈನ್ಸ್ ) ಗಣಿ ರಸ್ತೆಯಲ್ಲಿ ಚಾಲಕರ ಗೋಳಾಟ ಕೇಳೋರ್ಯಾರು.!?

0
2483

ಸಂಡೂರು:10:ಎ:- ತಾಲೂಕಿನ ಮುರಾರಿಪುರ ಬಳಿಯ ತಿಮ್ಮಪ್ಪನಗುಡಿ ಬೆಟ್ಟದ ಮೇಲಿನ ಸರ್ಕಾರಿ ಸ್ವಾಮ್ಯದ ಎಂ ಎಂ ಎಲ್ (ತಿಮ್ಮಪ್ಪನ ಮೈನ್ಸ್ ) ಗಣಿ ಪ್ರದೇಶದಲ್ಲಿ ತೆಗೆಯುವ ಅದಿರನ್ನು ಜಿಂದಾಲ್ ಮತ್ತಿತರ ಕಾರ್ಖಾನೆಗಳಿಗೆ ಸಾಗಿಸಲು ನಿತ್ಯ ನೂರಾರು ಲಾರಿಗಳು ಸಂಚರಿಸುತ್ತವೆ.ಆದರೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ವಾಹನಗಳು, ಚಾಲಕರಿಗೆ ಏನಾದರೇನು?. ನಿರಂತರವಾಗಿ ಸಾಗಣೆ ಮಾಡಬೇಕು ಎಂಬ ದೊರಣೆ ಅಧಿಕಾರಿಗಳು, ಮಧ್ಯವರ್ತಿಗಳು, ಕಾರ್ಖಾನೆಗಳ ಆಡಳಿತ ಮಂಡಳಿಗಳದ್ದಾಗಿದೆ ಎನ್ನುತ್ತಾರೆ ಲಾರಿ ಮಾಲೀಕರು ಮತ್ತು ಚಾಲಕರು.

ಮಳೆಬಂದಾಗ ಬೆಟ್ಟದಿಂದ ಅದಿರು ತುಂಬಿದ ಲಾರಿ ಕೆಳಗಿಳಿಸುವುದು ಸುಲಭವಲ್ಲ, ಬ್ರೇಕ್ ಹಾಕಿದರೂ ಒಮ್ಮೊಮ್ಮೆ ಗಾಡಿ ನಿಲ್ಲದೆ ಅಪಾಯ ಸಂಭವಿಸಿದ ಉದಾಹರಣೆಗಳಿವೆ. ಮಳೆಯಿಲ್ಲದಿದ್ದಾಗ ವ್ಯಾಪಕ ದೂಳಿನಲ್ಲಿ ರಸ್ತೆಯಲ್ಲಿ ಎದುರಿಗೆ ಬರುವ ವಾಹನವೂ ಕಾಣಲ್ಲ.ಸಿಂಗಲ್ ರೊಡಲ್ಲಿ ಎದುರಿಗೆ ಮತ್ತೊಂದು ಲಾರಿ ಬಂದರೆ ಸೈಡ್ ಗೆ ಹೋಗಲು ರಸ್ತೆಯಿಲ್ಲ. ಒಂದೆಡೆ ಬೆಟ್ಟ ಮತ್ತೊಂದೆಡೆ ಪ್ರಪಾತವಿರುತ್ತದೆ.ರಸ್ತೆಗೆ ಗುಣಮಟ್ಟದ ಗರುಸು ಮಣ್ಣಿನ (ಮರಮ್) ಬದಲಿಗೆ ಹುಡಿ ಮಣ್ಣು ಹಾಕುತ್ತಾರೆ. ಮಳೆ ಬಂದರೆ ಒಂದೇ ದಿನದಲ್ಲಿ ನೀರು ನಿಂತು ಲಾರಿ ಚಕ್ರಗಳು ಹೂತು ಹೋಗುತ್ತವೆ ಮಳೆಯಿಲ್ಲದಿದ್ದಲ್ಲಿ ವಿಪರೀತ ದೂಳು.

ಇದರ ವಿಷಯವಾಗಿ ಇತ್ತೀಚಿಗೆ ಕೃಷ್ಣನಗರದ ಜೈಹಿಂದ್ ಲಾರಿ ಮಾಲೀಕರ ಸಂಘವು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಅದಿರು ಆನ್ಲೋಡ್ ಮಾಡಿದ ಮರುದಿನವೇ ಲಾರಿ ಮಾಲೀಕರಿಗೆ ಸಾಗಣಿಕೆಯ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ಇತ್ತೀಚಿಗೆ ಮುರಾರಿಪುರ ಗ್ರಾಮದಲ್ಲಿ ಜರುಗಿದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಸಭೆಯಲ್ಲಿ ಮನವಿ ನೀಡಿದ್ದಾರೆ.

ಸಾಲ ಮಾಡಿ ಲಾರಿಗಳನ್ನು ತಂದಿಟ್ಟುಕೊಂಡು ಕಂಪನಿಗಳಿಗೆ ಗಣಿ ಪ್ರದೇಶದಿಂದ ಅದಿರನ್ನು ಸಾಗಿಸಿ ಲಾರಿಗಳನ್ನು ನಂಬಿ ಬದುಕುತ್ತಿರುವ ಲಾರಿ ಮಾಲೀಕರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದ್ದು ಅವರೆಲ್ಲರೂ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ.

ಡ್ರೈವರ್, ಕ್ಲಿನರ್ ಸಂಬಳ, ಲಾರಿಗಳ ಮೆಂಟನೆನ್ಸ್, ಲಾರಿಗಳ ರಿಪೇರಿಗೆ ಬಿಡಿಬಾಗಗಳ ಖರೀದಿ ಸೇರಿದಂತೆ ದಿನನಿತ್ಯ ಹಣದ ಅವಶ್ಯಕತೆ ಎದುರಾಗುತ್ತಿದ್ದು ಅದನ್ನು ತಪ್ಪಿಸಲು ಅದಿರು ಪೂರೈಕೆ ಮಾಡಿಕೊಳ್ಳುವ ಕಂಪನಿಯವರು ತ್ವರಿತವಾಗಿ ಲಾರಿ ಮಾಲಕರಿಗೆ ನೇರವಾಗಿ ಹಣವನ್ನು ಸಂದಾಯ ಮಾಡುವುದು ಒಳಿತು ಎಂಬ ಬೇಡಿಕೆಯನ್ನು ಸಹಾಯಕ ಆಯುಕ್ತ ಅನಮೋಲ್ ಜೈನ್, ಶಾಸಕ ಈ. ತುಕಾರಾಂ, ಇಓ ದಾರುಕೇಶ್ ಸಮ್ಮುಖದಲ್ಲಿ ನೇರವಾಗಿ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿದ್ದರು.

ಅದಲ್ಲದೆ ತಿಮ್ಮಪ್ಪನಗುಡಿ ಗಣಿ ಪ್ರದೇಶದ ರಸ್ತೆ ಮತ್ತು ಎಂಎಂಎಲ್ ಗಣಿ ಪ್ರದೇಶಕ್ಕೆ ರಸ್ತೆಗಳನ್ನು ದುರಸ್ತಿ ಮಾಡುವಂತೆ ಕೂಡ ಒತ್ತಾಯಿಸಿದ್ದರು.

‘ಸರಕು ಸಾಗಣೆ ಲಾರಿಗಳು 5-6 ವರ್ಷ ದುರಸ್ತಿಯಿಲ್ಲದೆ ಬಾಳಿಕೆ ಬರುತ್ತವೆ. ಆದರೆ, ಗಣಿ ಪ್ರದೇಶದಲ್ಲಿ ಸಂಚರಿಸುವ ಅದಿರು ಲಾರಿಗಳು ಎರಡು ವರ್ಷಕ್ಕೆ ಹಾಳಾಗುತ್ತವೆ. ಆದ್ದರಿಂದ ಜಿಲ್ಲಾಧಿಕಾರಿ, ಕಂದಾಯ, ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಈ ವಿಷಯ ಗಂಭೀರವಾಗಿ ಪರಿಗಣಿಸಿ, ಡಾಂಬರ್ ಅಥವಾ ಸಿಸಿ ರಸ್ತೆಗಳ ನಿರ್ಮಿಸಲು ಕ್ರಮವಹಿಸಬೇಕು.’

-ಡಿ.ಎಫ್.ಸುಭಾನ್ ಸಾಬ್
ಅಧ್ಯಕ್ಷರು, ಜೈಹಿಂದ್ ಲಾರಿ ಮಾಲೀಕರ ಸಂಘ. ಕೃಷ್ಣನಗರ

“ಈ ವಿಷಯ ಕುರಿತು ಈಗಾಗಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರಿಗೆ ಪತ್ರ ಬರೆಯಲಾಗಿದೆ ಉತ್ತರದ ನಿರೀಕ್ಷೆಯಲ್ಲಿದ್ದೇವೆ.”

-ಕೆ.ಎಂ.ಗುರುಬಸವರಾಜ್
ಸಂಡೂರು ತಹಶೀಲ್ದಾರ್

LEAVE A REPLY

Please enter your comment!
Please enter your name here