ಕೋವಿಡ್ ಲಸಿಕಾ ಅಭಿಯಾನ ವಿಡಿಯೋ ಕಾನ್ಪರೆನ್ಸ್, ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಿಕೆಗೆ ಡಿಸಿ ಮಾಲಪಾಟಿ ಸೂಚನೆ

0
102

ಬಳ್ಳಾರಿ,ಜು.01: ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಲಸಿಕೆ ನೀಡಿ ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಲಸಿಕೆ ತಪ್ಪಿದ್ದಲ್ಲಿ ಕಾಲೇಜುಗಳು ತೆರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಎಲ್ಲಾ ತಾಲೂಕುಗಳ ತಹಸೀಲ್ದಾರರು, ಆರೋಗ್ಯ ಅಧಿಕಾರಿಗಳು, ತಾಪಂ ಇಒಗಳು ಹಾಗೂ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಗುರುವಾರ ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ಕಾಲೇಜುಗಳು ಆರಂಭಕ್ಕೂ ಮುನ್ನ 18 ವರ್ಷ ಮೇಲ್ಪಟ್ಟರಿಗೆ ಕೋವಿಡ್ ಲಸಿಕೆ ಹಾಕಿಸಿದರೆ ಯಾವುದೇ ರೀತಿಯ ಸಮಸ್ಯೆಯಿರುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ. ಕಾಲೇಜು ಶುರುವಾದ ನಂತರ ಯಾವೊಬ್ಬ ವಿದ್ಯಾರ್ಥಿ ಕೂಡ ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ. ಕಾಲೇಜು ವ್ಯಾಪ್ತಿಯಲ್ಲಿಯೇ ಲಸಿಕೆ ನೀಡಿ,ತಾಲೂಕು ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳ ಪಟ್ಟಿ ಮಾಡಿ ಅವಶ್ಯಕತೆಗೆ ತಕ್ಕಂತೆ ಕೋವಿಡ್ ಲಸಿಕೆ ಪಡೆಯಿರಿ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಪಂ ಸಿಇಒ ನಂದಿನಿ ಕೆ.ಆರ್ ಅವರು ಮಾತನಾಡಿ 0-6 ವರ್ಷದ ಮಕ್ಕಳಿಗೆ ಬಾಲ್ಯದಲ್ಲಿ ಕಾಡುವ ರೋಗಗಳಿಂದ ಮುಕ್ತಿ ಪಡೆಯಲು ನೀಡುವ ಲಸಿಕೆಯಿಂದ ದೂರ ಉಳಿದವರನ್ನು ಗುರುತಿಸಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಜು.6ರವರೆಗೆ ಮನೆ ಮನೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಸಮೀಕ್ಷೆ ಮಾಡಿ. ಈ ಸಮಯದಲ್ಲಿ ಲಸಿಕೆ ಪಡೆಯದ ಮಕ್ಕಳು ಕಂಡು ಬಂದಲ್ಲಿ ಅಂತವರಿಗೆ ಜು.12ರಿಂದ 16 ರವರೆಗೆ ಲಸಿಕೆ ನೀಡಲಾಗುತ್ತದೆ ಎಂದರು.
ಈಗಾಗಲೇ ಎಲ್ಲಾ ತಾಲೂಕುಗಳಲ್ಲಿ ಆರಂಭವಾಗಿರುವ ಬಾಲಚೈತನ್ಯ ಕೇಂದ್ರಗಳಿಗೆ ದಾಖಲಾಗುವ ಮಕ್ಕಳಿಗೆ ಲಸಿಕೆ ನೀಡಿ, 6 ವರ್ಷದೊಳಗೆ ಎಲ್ಲಾ ರೀತಿಯ ಲಸಿಕೆ ಪಡೆದ ನಂತರವಷ್ಟೇ ಶಾಲೆಗೆ ಸೇರಿಸಿಕೊಳ್ಳಲಾಗುತ್ತದೆ ಎಂದು ಪೋಷಕರಿಗೆ ತಿಳಿಸಿ, ಬಾಲ್ಯಾವಧಿಯಲ್ಲಿ ನೀಡುವ ಲಸಿಕೆಯ ಬಗ್ಗೆ ಅವರಲ್ಲಿ ಅರಿವು ಮೂಡಿಸಿ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ರಮೇಶ ಕೋನರೆಡ್ಡಿ,ಡಿಹೆಚ್‍ಒ ಡಾ.ಹೆಚ್.ಎಲ್.ಜನಾರ್ಧನ್,ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನಿಲ್‍ಕುಮಾರ್ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here