ಶ್ವಾನಗಳು ಲೈಂಗಿಕ ಕ್ರಿಯೆಯಲ್ಲಿ ಅಂಟಿಕೊಳ್ಳುವುದೇಕೆ?

0
125

ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು ಹಾಗೂ ಹೆಣ್ಣು ಶ್ವಾನಗಳು ಸೇರುವಾಗ ಪರಸ್ಪರ ಅಂಟಿಕೊಂಡಂತೆ ಇರುವುದನ್ನು ನೀವುಗಳು ಗಮನಿಸಿರುತ್ತೀರಿ. ಅದಕ್ಕೆ ಕಾರಣವೇನೆಂದು ಅರಿಯುವ ಕುತೂಹಲ ಬಹುತೇಕರಿಗೆ ಇರುತ್ತದಾದರೂ ಕೇಳಿ ತಿಳಿಯಲು ಸಂಕೋಚವಿರುತ್ತದೆ.
ಇದನ್ನು ಓದಿದಾಗ ನಿಮ್ಮ ಕುತೂಹಲಕ್ಕೆ ಪರಿಹಾರ ಸಿಗಬಹುದು.

ವರ್ಷದಲ್ಲಿ ಸಾಮಾನ್ಯವಾಗಿ ಎರಡು ಭಾರಿ , ಅಂದರೆ ಆರು ತಿಂಗಳಿಗೊಮ್ಮೆ ಹೆಣ್ಣು ನಾಯಿಗಳು ಬೆದೆಗೆ ( ಹೀಟಿಗೆ ) ಬರುತ್ತವೆ. ಆ ಸಮಯದಲ್ಲಿ ಸುತ್ತ ಮುತ್ತಲಿನ ಗಂಡು ಶ್ವಾನಗಳು, ಬೆದೆಗೆ ಬಂದ ಹೆಣ್ಣು ನಾಯಿಯೊಂದಿಗೆ ಸೇರಲು ಪರಸ್ಪರ ಕಾದಾಡುತ್ತವೆ. ಕಾದಾಟದಲ್ಲಿ ಗೆದ್ದ ಬಲಿಷ್ಠವಾದ ಗಂಡು ಶ್ವಾನವು ಹೆಣ್ಣಿನೊಂದಿಗೆ ಸೇರುತ್ತದೆ. ಸಂಭೋಗ ಮುಗಿಯುವ ಸಂದರ್ಭದಲ್ಲಿ, ಗಂಡು ಹಿಂದೆ ತಿರುಗಿದಾಗ ಗಂಡು ಹಾಗೂ ಹೆಣ್ಣು ಶ್ವಾನಗಳು ಪರಸ್ಪರ ಅಂಟಿಕೊಂಡಂತೆ ಹಿಮ್ಮುಖ ಜೋಡಿಯಾಗಿ ಸುಮಾರು 10-45 ನಿಮಿಷಗಳ ಕಾಲ ಇರುತ್ತವೆ.

ಇದಕ್ಕೆ ಕಾರಣ ಗಂಡು ನಾಯಿಯ ಜನನಾಂಗದಲ್ಲಿ ಊದಿಕೊಂಡಂತೆ ಇರುವ ” ಬಲ್ಬಸ್” ( bulbus glandis) ಎಂಬ ರಚನೆ. ಅದು ಶಿಶ್ನದ ತುದಿಯಿಂದ ಸ್ವಲ್ಪ ಹಿಂದೆ ( ಚಿತ್ರದಲ್ಲಿ ಗಮನಿಸಿ) , ಎರಡೂ ಬದಿಯಲ್ಲಿ ಇರುತ್ತದೆ. ಸಂಭೋಗದ ಸಮಯದಲ್ಲಿ ಹೆಣ್ಣು ಶ್ವಾನದ ಜನನಾಂಗದ ಒಳ ಸೇರುವ “ಬಲ್ಬಸ್” ರಚನೆಗೆ ರಕ್ತ ಸಂಚಾರ ಹೆಚ್ಚಾಗಿ, ಊದಿಕೊಂಡು ಪರಸ್ಪರ “ಲಾಕ್” ಆಗಿ ಬಿಡುತ್ತವೆ. ಊದಿದ “ಬಲ್ಬಸ್ ” ತಕ್ಷಣ ಹೊರಬರಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ಹೆಣ್ಣು ಶ್ವಾನದ ಹೊರಭಾಗದ ಜನನೇಂದ್ರಿಯದಲ್ಲಿರುವ ಮಾಂಸಖಂಡಗಳಿಗೂ ರಕ್ತ ಸಂಚಾರ ಅಧಿಕವಾಗಿ, ಅವೂ ಸಹ ಗಾತ್ರದಲ್ಲಿ ಹಿಗ್ಗುತ್ತವೆ. ಇದರಿಂದ ಶಿಶ್ನ ಹಾಗೂ ಬಲ್ಬಸ್ ಅನ್ನು ಮತ್ತಷ್ಟು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ.

ಹೀಗೆ ಸುಮಾರು 10-45 ನಿಮಿಷ ಕಳೆದ ನಂತರ ಉದ್ರೇಕ ಕಡಿಮೆಯಾದಂತೆ, ಆ ಭಾಗಕ್ಕೆ ರಕ್ತ ಸಂಚಾರವೂ ಸಹಜ ಸ್ಥಿತಿಗೆ ಬಂದು ಹಿಗ್ಗಿದ ಬಲ್ಬಸ್ ಕುಗ್ಗಿ ಗಾತ್ರದಲ್ಲಿ ಮುಂಚಿನಂತಾಗುತ್ತದೆ. ಆಗ ಅಂಟಿಕೊಂಡಂತಿದ್ದ ಜನನೇಂದ್ರಿಯಗಳು ಬೇರ್ಪಡುತ್ತವೆ.ಅಲ್ಲಿಗೆ ಆ ಹೊತ್ತಿನ ಶ್ವಾನಗಳ ಲೈಂಗಿಕ ಕ್ರಿಯೆ ಮುಕ್ತಾಯಗೊಳ್ಳುತ್ತದೆ.ಅದೇ ಕುಟುಂಬಕ್ಕೆ ಸೇರಿದ ನರಿ,ತೋಳಗಳಲ್ಲೂ ಹೀಗೆಯೇ ಆಗುತ್ತದೆ ಎಂದು ಹೇಳಲಾಗುತ್ತದೆ.

ಈ ರೀತಿ ಪರಸ್ಪರ ಅಂಟಿಕೊಂಡಂತೆ ಇರುವುದರಿಂದ ಅವುಗಳಿಗೆ ಗರ್ಭಧರಿಸಲು ಸ್ವಲ್ಪ ಮಟ್ಟಿಗೆ ಅನುಕೂಲತೆಗಳು ಆಗಲಿದೆ ಎಂದು ತಿಳಿದು ಬಂದಿದೆ. ವೀರ್ಯವು ಹೊರಬರದಂತೆ ತಡೆಯಲು ಹಾಗೂ ಗಂಡಿನ ಜನನಾಂಗ ವ್ಯೂಹದಲ್ಲಿರುವ ಗ್ರಂಥಿಯು ಶ್ರವಿಸುವ ದ್ರವ್ಯವು ಸಾಕಷ್ಟು ಪ್ರಮಾಣದಲ್ಲಿ ವೀರ್ಯದೊಂದಿಗೆ ಬೆರೆತು , ವೀರ್ಯಾಣುಗಳ ಚಲನೆಗೆ ಮತ್ತು ಅಂಡಾಣುಗಳೊಂದಿಗೆ ಸೇರಿ ಗರ್ಭಾಂಕುರವಾಗಲು ಸಹಾಯವಾಗುತ್ತದೆ ಎಂಬ ವೈಜ್ಞಾನಿಕ ಅಂಶಗಳಿವೆ.

ಈಗ ಕುತೂಹಲ, ಸಂಶಯಗಳಿಗೆ ಉತ್ತರ ಸಿಗ್ತಲ!!! ಇಂತವು ಸುಮಾರು ಬರೆಯಕ್ಕಿದೆ ಮಾರೇರ. ಸಮಯ ಸಿಕ್ಕಾಗ ಮತ್ತೆ ಸಿಗುವ. ಬರ್ತೇನೆ ಆಯ್ತ.

✍️ಡಾ.ಯುವರಾಜ ಹೆಗಡೆ
ಪಶು ವೈದ್ಯರು,ತೀರ್ಥಹಳ್ಳಿ

LEAVE A REPLY

Please enter your comment!
Please enter your name here