ಅಪ್ಪ ಅಂದ್ರೆ ಮೇರು ಪರ್ವತ, ಹತ್ತಿ ನಿಂತಾಗಲೇ ಅದರ ಎತ್ತರದ ಅರಿವಾಗೋದು..

0
39

ಅಪ್ಪ, ಜಗತ್ತಿನ ಅದ್ಬುತ ಸೃಷ್ಠಿ. ಅಮ್ಮನಾದವಳು ಒಂಬತ್ತು ತಿಂಗಳು ತನ್ನ ಮಡಿಲಲ್ಲಿ ಹೊತ್ತು, ಹೆತ್ತು ಧರೆಗೆ ತಂದ ಮೇಲೆ ಆ ಮಗುವನ್ನು ತನ್ನ ಅಂಗೈಯಲ್ಲಿ ಎತ್ತಿಕೊಂಡು ಜೀವಮಾನದುದ್ದಕ್ಕೂ ಅದರ ಎಲ್ಲ ಜವಾಬ್ದಾರಿಗಳನ್ನು ಹೊರುವುದು ಅಪ್ಪನೇ. ಆದರೆ ಎಷ್ಟೋ ಸಲ ಅಮ್ಮನಿಗೆ ಸಿಕ್ಕ ಗೌರವಾದರಗಳು ಅಪ್ಪನಿಗೆ ಸಿಗೋದೇ ಇಲ್ಲ.

ಕಾರಣವಿಷ್ಟೇ, ಅಪ್ಪ ಕೋಪಿಷ್ಠ, ಅವನಿಗೆ ಪ್ರೀತಿಯೆಂದರೆ ಗೊತ್ತಿಲ್ಲ. ತುಂಬಾ ಸ್ಟ್ರಿಕ್ಟ್. ಉಪಯೋಗಕ್ಕೆ ಬಾರದ ಉಪದೇಶಗಳು. ಯಾವತ್ತೂ ಸಿಡುಕಿನ ಮೋರೆ, ನಗೋದೇ ಇಲ್ಲ. ತುಂಬಾ ಕಂಜೂಸು, ದುಡ್ಡೇ ಕೊಡಲ್ಲ. ಒಣ ಪ್ರತಿಷ್ಠೆಯ ಮನುಷ್ಯ, ಹಾಗೇ ಹೀಗೆ ಇದೆಲ್ಲ ಬಹುಪಾಲು ತಂದೆಯಂದಿರು ಪಡೆದುಕೊಂಡಿರೋ ಬಿರುದುಗಳು. ಆದ್ರೆ ಅಪ್ಪ ಅಂದ್ರೆ ಅದೇನಾ? ಅವನ ಅಂತರಂಗದ ಆಳ ಅಷ್ಟೇನಾ? ಅಲ್ಲ. ಅಪ್ಪ ಹಲಸಿನ ಹಣ್ಣು. ಹೊರಗೆ ಕಟುವಾಗಿ ಕಾಣೋ ಅಪ್ಪನ ಒಳಗೊಬ್ಬ ಅದ್ಭುತವಾದ ಅಮ್ಮನಿದ್ದಾಳೆ. ತಿದ್ದಿ ತೀಡುವ ಗುರುವಿದ್ದಾನೆ. ಸಲುಗೆಯ ಗೆಳೆಯನಿದ್ದಾನೆ. ನೋವನ್ನೆಲ್ಲ ನುಂಗಿ, ನಗುವ ಅಸಾಧ್ಯ ಶಕ್ತಿ ಅಪ್ಪನೊಳಗಿದೆ. ತನ್ನ ಸ್ವಾರ್ಥಕ್ಕಾಗಿ ಯಾರ ಮುಂದೆಯೂ ತಲೆ ತಗ್ಗಿಸದ ಅಪ್ಪ, ಮಗ, ಮಗಳಿಗೊಂದು LKG ಸೀಟು ಕೊಡಿಸಲು ಸ್ಕೂಲ್ ನ Peon ನಿಂದ principal ವರೆಗೂ ಎಲ್ಲರ ಮುಂದೆ ವಿಧೇಯನಾಗಿ ನಿಂತ್ಕೋತಾನೆ.

ಮಗಳು ಕೇಳಿದ ಗೊಂಬೆ ಕೊಡಿಸಲು ತನ್ನ ಖರ್ಚಿನ ದುಡ್ಡನ್ನು ಕೊಟ್ಟು ಬಿಡುತ್ತಾನೆ. ಮಕ್ಕಳು ತಪ್ಪು ಮಾಡಿದಾಗ ತಿದ್ದಿಕೊಳ್ಳಲಿ ಎಂದು ಉಪವಾಸದ ಶಿಕ್ಷೆ ನೀಡುವ ಅಪ್ಪನೂ ಆ ದಿನ ಊಟ ಮಾಡಲೇ ಇಲ್ಲ ಅನ್ನೋದು ಗೊತ್ತೇ ಆಗೋದಿಲ್ಲ. ಚೆನ್ನಾಗಿ ಓದದೇ, ದುಡಿಯದೇ, ಬದುಕನ್ನು Esay ಆಗಿ ತಗೊಂಡಿರೋ ಮಗನಿಗಾಗಿ ಒಂದು ಸುಂದರ ಬದುಕು ಕಟ್ಟುವ ಹೊಸದಾರಿಯ ಹುಡುಕಾಟಕ್ಕೆ ರಾತ್ರಿಯ ನಿದ್ದೆಗಳನ್ನೇ ಮರೆತಿರುವ ಅಪ್ಪನ ಕಣ್ಣಲ್ಲಿನ ಆಯಾಸ ಯಾರಿಗೂ ಕಾಣದೇ ಹೋಗುತ್ತದೆ. ತನ್ನ ಕಣ್ಣ ರೆಪ್ಪೆಯಲ್ಲಿಟ್ಟು ಬೆಳೆಸಿದ ಮಗಳನ್ನು ನಗು ನಗುತ್ತಲೇ ಧಾರೆಯೆರೆದು ಕೊಟ್ಟು, ಖುಷಿಪಡುವಂತೆ ಕಾಣುವ ಅಪ್ಪ ಆ ರಾತ್ರಿ ಗೋಡೆಗೆ ಮುಖಕೊಟ್ಟು ಸುರಿಸಿದ ಕಣ್ಣೀರಿನ ಲೆಕ್ಕ ಯಾವತ್ತು ಸಿಗೋದೇ ಇಲ್ಲ. ಅದು ಕಲ್ಲೆಂಬ ಅಪ್ಪ ಕರಗುವ ಸಮಯ.!

ಮೊಮ್ಮಕ್ಕಳು ಜೊತೆಯಾದಾಗ ಅಪ್ಪನಿಗೆ ಮತ್ತೊಂದು ಬಾಲ್ಯ. ನಾವೇ ಅಚ್ಚರಿಪಡುವಷ್ಟು ಅಪ್ಪ ಮಗುವಾಗುತ್ತಾನೆ. ಆವಾಗಲೇ ಅಪ್ಪ ಅದೆಷ್ಟು ಮಗು ಅನ್ನಿಸಿಬಿಡ್ತಾನೆ. ಮಕ್ಕಳಿಗಾಗಿ ಅದೆಷ್ಟೋ ತ್ಯಾಗಗಳನ್ನು ಮಾಡಿ, ನೋವನ್ನು ನುಂಗಿ, ಅವರಿಗೊಂದು ಸುಂದರ ಬದುಕು ಕಟ್ಟಿಕೊಡವವರೆಗೆ ಯಾವ ತಂದೆಯೂ ವಿರಮಿಸಲಾರ. ಅಪ್ಪನ ಕೋಪದ ಹಿಂದಿನ ಪ್ರೀತಿ, ಸಿಡುಕಿನ ಹಿಂದಿನ ಕಾಳಜಿ, ಕಂಜೂಸುತನದೊಳಗಿನ ದೂರಾಲೋಚನೆ, ಮೌನದ ಹಿಂದಿನ ಮಾತು, ನಗುವಿನೊಳಗಿನ ನೋವು, ಒಣ ಪ್ರತಿಷ್ಠೆಯಂತೆ ಕಂಡಿದ್ದ ಸ್ವಾಭಿಮಾನ ಎಲ್ಲವೂ ಅರ್ಥವಾಗೋದು ನಾವು ತಂದೆಯಾದಾಗಲೇ. ನಮಗೇ ಗೊತ್ತಿಲ್ಲದಂತೆ ನಾವು ಅಪ್ಪನ ಅನುಕರಣೆಗೆ ಇಳಿದುಬಿಡುತ್ತೇವೆ. ಆಗಲೇ ಅಪ್ಪ ಅದೆಷ್ಟು ಗ್ರೇಟ್ ಅನ್ನಿಸೋಕೆ ಶುರುವಾಗೋದು.

ನಾವು ಅಪ್ಪನಷ್ಟೇ ಯಶಸ್ವಿ ಅಪ್ಪ ಆಗೋದು ಹೇಗೆ ಎಂದು ಯೋಚಿಸುತ್ತಾ ಕುಳಿತಾಗ ಅಪ್ಪ ಏನೂ ತಿಳಿಯದವನಂತೆ ಮೊಮ್ಮಕ್ಕಳ ಜೊತೆಗೆ ಆಟಕ್ಕೆ ಇಳಿದಿರುತ್ತಾನೆ. ಅಪ್ಪ ಅಂದ್ರೆ ಮೇರು ಪರ್ವತ, ಹತ್ತಿ ನಿಂತಾಗಲೇ ಅದರ ಎತ್ತರದ ಅರಿವಾಗೋದು. ಅಂಥಾ ಅಪ್ಪನಿಗೆ ವರ್ಷಕ್ಕೊಂದು ಶುಭಾಶಯ ಹೇಳಿದರೆ ಸಾಕಾದೀತೇ? ಅಪ್ಪ ಅಮ್ಮನ ಹಾಗೆ ಭೂಮಿಯಷ್ಟು
ತಾಳ್ಮೆಯುಳ್ಳವನಲ್ಲದಿರಬಹುದು, ಆದರೆ ಆಕಾಶದಷ್ಟು ವಿಶಾಲ ಹೃದಯಿ. ಅಪ್ಪನ ಮುಂದೆ ಎಲ್ಲವೂ ಗೌಣ.ಅಪ್ಪ ಬದುಕಿನ ಪಾಠಗಳನ್ನೆಲ್ಲ ಕಳಿಸಿಕೊಡುವ ವಿಶಿಷ್ಟ ವಿಶ್ವವಿದ್ಯಾಲಯ. ಅಪ್ಪನಿಗೆ ಅಪ್ಪನೇ ಸಾಟಿ…….! I Love You Appa Happy Father’s Day

ತಂದೆಯಾಗಿರುವ ಎಲ್ಲರಿಗೂ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು..

LEAVE A REPLY

Please enter your comment!
Please enter your name here