ಒಂದು ವರ್ಷದ ಅವಧಿಯೊಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಸೂಚನೆ :- ಗೋವಿಂದ ಕಾರಜೋಳ

0
86

ಶಿವಮೊಗ್ಗ, ಜನವರಿ 02 : ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ಕಾರ್ಯಾರಂಭವಾಗಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಮುಂದಿನ ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ ಅವರು ಹೇಳಿದರು.
ಅವರು ಇಂದು ಶಿವಮೊಗ್ಗ ಸಮೀಪದ ಸೋಗಾನೆಯ ವಿಮಾನ ನಿಲ್ದಾಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. 770 ಎಕರೆ ಪ್ರದೇಶದಲ್ಲಿ ಸುಮಾರು 384ಕೋಟಿ ರೂ.ಗಳ ವೆಚ್ಚದಲ್ಲಿ 3.2ಕಿ.ಮೀ ರನ್‍ವೇ, ಸುಸಜ್ಜಿತ ಟರ್ಮಿನಲ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ ನಿಲ್ದಾಣ ಕಾರ್ಯಕ್ಕೆ ಕಳೆದ ಮೂರು ತಿಂಗಳ ಹಿಂದೆ ಚಾಲನೆ ನೀಡಲಾಗಿದೆ. ಈ ವಿಮಾನ ನಿಲ್ದಾಣದಲ್ಲಿ ಲಘು ಮತ್ತು ಸಾಮಾನ್ಯ ವಿಮಾನಗಳು ಹಗಲಿರುಳು ಏರಿಳಿಯುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ವಿಜಯಪುರ ಮತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ನಂತರ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಪುನಃ ಚಾಲನೆ ದೊರೆತು ಕಾರ್ಯಾರಂಭಗೊಂಡಿದೆ ಎಂದ ಅವರು ಸಂಕ್ರಾಂತಿಯ ದಿನದಂದು 220ಕೋಟಿ ರೂ.ಗಳ ವೆಚ್ಚದಲ್ಲಿ ವಿಜಯಪುರದ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಈ ವಿಮಾನ ನಿಲ್ದಾಣ ಕಾಮಗಾರಿ ಮುಂದುವರೆಯಲು ಯಾವುದೇ ಅಡ್ಡಿ ಆಕ್ಷೇಪಣೆಗಳಿಲ್ಲ. ಅಲ್ಲದೆ ಕೇಂದ್ರ ಏವಿಯೇಶನ್ ಮಂತ್ರಾಲಯದ ಅನುಮೋದನೆ ದೊರೆತಿದೆ. ಮುಂದಿನ ದಿನಗಳಲ್ಲಿ ನಿಲ್ದಾಣಕ್ಕೆ ಪೂರಕವಾಗಿರುವ ಯಂತ್ರಗಳನ್ನು ಅಳವಡಿಸುವ ಭರವಸೆ ಇದೆ. ಕಾಮಗಾರಿ ಪೂರ್ಣಗೊಳಿಸಿದ ನಂತರದಲ್ಲಿ ‘ಉಡಾನ್’ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಯತ್ನಿಸಲಾಗುವುದು ಎಂದರು.
ಕಳೆದ 2ವರ್ಷಗಳಲ್ಲಿ ಆಡಳಿತಾರೂಢ ಸರ್ಕಾರವು ಪ್ರವಾಹ, ಅತೀವೃಷ್ಠಿ, ಕೊರೋನದಂತಹ ಅನೇಕ ಸಮಸ್ಯೆ-ಸವಾಲುಗಳನ್ನು ಎದುರಿಸಿದೆ. 2019ರಲ್ಲಿ 35,000ಕೋಟಿ ರೂ. ಹಾಗೂ 2020ರಲ್ಲಿ 25,000ಕೋಟಿ ರೂ. ಸೇರಿದಂತೆ ಸುಮಾರು 60,000ಕೋಟಿ ಮೊತ್ತದ ರಸ್ತೆ, ಸೇತುವೆ, ಸಾರ್ವಜನಿಕ ಆಸ್ತಿ, ಬೆಳೆ ಮುಂತಾದವುಗಳಿಂದಾಗಿ ನಷ್ಟ ಉಂಟಾಗಿದೆ. ಕೊರೋನ ಸೋಂಕು ರಾಜ್ಯದಲ್ಲಿ ಇಳಿಮುಖವಾಗುತ್ತಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಹರಿದು ಬರುತ್ತಿರುವ ಆದಾಯದಲ್ಲಿ ಏರಿಕೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ಅನುದಾನ ಕಾಯ್ದಿರಿಸಲಾಗುವುದು ಎಂದರು.
ಪ್ರವಾಹದಿಂದಾಗಿ ಕಳೆದ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಗೆ ಸುಮಾರು 7,000ಕೋಟಿ ರೂ.ಗಳ ನಷ್ಟ ಉಂಟಾಗಿದೆ. ಪ್ರಸಕ್ತ ಸಾಲಿನಲ್ಲಿ 3500ಕೋಟಿ ಗಳನ್ನು ನಷ್ಟ ಉಂಟಾಗಿದೆ. 2019ನೇ ಸಾಲಿನಲ್ಲಿ 1850 ದುರಸ್ತಿ ಕಾಮಗಾರಿಗಳಿಗೆ 500ಕೋಟಿ ರೂ.ಗಳನ್ನು ಹಾಗೂ 2020ನೇ ಸಾಲಿನಲ್ಲಿ 1814ಕಾಮಗಾರಿಗಳಿಗೆ 500ಕೋಟಿಗಳನ್ನು ಬಿಡುಗಡೆ ಮಾಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.ಅಗತ್ಯವಾಗಿರುವ ಇನ್ನಷ್ಟು ಅನುದಾನ ಬಿಡುಗಡೆ ಮಾಡಲಾಗುವುದು. 2021-22ನೇ ಸಾಲಿನ ಆಯವ್ಯಯದಲ್ಲಿ ಹೆಚ್ಚಿನ ಅನುದಾನವನ್ನು ಕಾಯ್ದಿರಿಸಿ ಶಾಶ್ವತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶ ಹೊಂದಲಾಗಿದೆ. 2019ರಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ಬಳಸಿಕೊಂಡು ಶೇ.97ರಷ್ಟು ಕಾಮಗಾರಿಗಳನ್ನು ಹಾಗೂ 2020ರಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಶೇ.59ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
9601ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಯನ್ನು ರಾಜ್ಯ ರಸ್ತೆಯನ್ನಾಗಿ ಹಾಗೂ 15510ಕಿ.ಮೀ. ಗ್ರಾಮೀಣ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ರಸ್ತೆಗಳನ್ನು ಸಂಚಾರಕ್ಕೆ ಅನುಕೂಲವಾಗುವಂತೆ ರೂಪಿಸಲಾಗುವುದು ಅಲ್ಲದೆ ಅಗತ್ಯವಿರುವಲ್ಲಿ ದುರಸ್ತಿಗೊಳಿಸಲು ಮುಂದಿನ ಬಜೆಟ್‍ನಲ್ಲಿ ಅನುದಾನ ಕಾಯ್ದಿರಿಸಲು ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದರು. ಈ ಸಂದರ್ಭದಲ್ಲಿ ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಭಿಯಂತರರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here