ಡಿ.18 ರಂದು ರಾಷ್ಟ್ರೀಯ ಲೋಕ ಅದಾಲತ್, ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ನ್ಯಾಯಾಧೀಶರ ಕರೆ.

0
106

ಶಿವಮೊಗ್ಗ, ಡಿಸೆಂಬರ್ 17: ರಾಜೀ ಸಂಧಾನದ ಮೂಲಕ ಶೀಘ್ರ, ಸುಲಭ ಮತ್ತು ಶುಲ್ಕರಹಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ರಾಷ್ಟ್ರೀಯ ಲೋಕ ಅದಾಲತ್ ಡಿ.18 ರಂದು ಜಿಲ್ಲೆಯಾದ್ಯಂತ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್.ಎಸ್.ಎ ಮನವಿ ಮಾಡಿದರು.
ಜಿಲ್ಲಾ ನ್ಯಾಯಾಲಯದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಡಿ.18 ರ ಶನಿವಾರದಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದರು.
ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್ ಬೌನ್ಸ್, ರಾಜೀಯಾಗಬಹುದಾದಂತಹ ಕ್ರಿಮಿನಲ್ ಪ್ರಕರಣಗಳು ಹಾಗೂ ಕಲಂ 6 ಹಿಂದೂ ವಾರಸು ಕಾಯ್ದೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನನ್ವಯ ಹೆಣ್ಣು ಮಕ್ಕಳಿಗೂ ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಸಮ ಪಾಲು, ವಿಭಜನಾ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳನ್ನು ಗುರುತಿಸಿ ಪ್ರಕರಣಗಳ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ಅವರ ಒಪ್ಪಿಗೆ ಪ್ರಕಾರ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

18 ಬೆಂಚ್ ಸ್ಥಾಪನೆ:
ಲೋಕ್ ಅದಾಲತ್ ಮೂಲಕ ರಾಜೀ ಸಂಧಾನದ ಮೂಲಕ ಪ್ರಕರಣಗಳ ವಿಲೇವಾರಿಗಾಗಿ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕು ಸೇರಿದಂತೆ ಒಟ್ಟು 18 ಬೆಂಚ್ ಗುರಿತಿಸಲಾಗಿದ್ದು, ಪ್ರತಿ ಬೆಂಚಿನಲ್ಲಿ ನ್ಯಾಯಾಧೀಶರು, ವಕೀಲರು ಪಾಲ್ಗೊಳ್ಳುವರು. ಈ ಬಾರಿ ವಿಶೇಷವಾಗಿ ವಿಭಜನೆ ಪ್ರಕರಣಗಳನ್ನು ಆದಷ್ಟು ರಾಜೀ ಸಂಧಾನದ ಮೂಲಕ ಇತ್ಯರ್ಥಕ್ಕೆ ಪ್ರಯತ್ನಿಸಲಾಗುತ್ತಿದೆ. ಕಳೆದ 02 ತಿಂಗಳಿನಿಂದ ಮರಳು ಪ್ರಕರಣದಲ್ಲಿ 455 ಪ್ರಕರಣಗಳು ಕೋರ್ಟ್ ಮುಂದೆ ಬಂದಿದ್ದು ಇದರಲ್ಲಿ ಸುಮಾರು 200 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಗಿದೆ ಎಂದರು.
ಶೀಘ್ರ ನ್ಯಾಯದಾನ : ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು, ವಿದ್ಯುಚ್ಚಕ್ತಿ, ಜಲಮಂಡಳಿ ಹಾಗೂ ನ್ಯಾಯಾಲಯಕ್ಕೆ ಬರಬಹುದಾದಂತಹ ಇತರೆ ಯಾವುದೇ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳೆಂದು ಪರಿಗಣಿಸಿ, ಅವುಗಳಲ್ಲಿ ಸಹ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ರಾಜೀ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಿ ಅವಾರ್ಡ್ ಪಾಸು ಮಾಡಲಾಗುವುದು. ಇಲ್ಲಿ ನೀಡಲಾದ ಅವಾರ್ಡ್ ನ್ಯಾಯಾಲಯದಲ್ಲಿ ಮಾಡಬಹುದಾದ ಡಿಕ್ರಿ ಇದ್ದಂತೆ. ಇಂತಹ ಅವಾರ್ಡ್‍ಗಳನ್ನು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಗಳಲ್ಲಿ ಅಮಲ್‍ಬಚಾವಣೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಇದರಿಂದ ಕಕ್ಷಿದಾರರಿಗೆ ನ್ಯಾಯಾಲಯದ ಖರ್ಚು ಹಾಗೂ ಅವರ ಅಮೂಲ್ಯ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಶೀಘ್ರವಾಗಿ ನ್ಯಾಯದಾನವಾಗುತ್ತದೆ.
13,318 ಪ್ರಕರಣ ಇತ್ಯರ್ಥಕ್ಕೆ ಗುರುತು: 2021 ರ ಡಿ.01 ರವರೆಗೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಒಟ್ಟು 54,477 ಪ್ರಕರಣ ಬಾಕಿ ಇದ್ದು ಈ ಪೈಕಿ 13,318 ಪ್ರಕರಣಗಳನ್ನು ಡಿ.18 ರಂದು ನಡೆಯುವ ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಹಾಗೂ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳನ್ನು ರಾಜೀ ಸಂಧಾನಕ್ಕಗಿ ಗುರುತಿಸಲಾಗುವುದು.
ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಸಹ ಸೆಪ್ಟೆಂಬರ್ 30 ರಂದು ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು ಅದರಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳು, ನ್ಯಾಯವಾದಿಗಳು, ವಿಮೆ ಕಂಪೆನಿ ಅಧಿಕಾರಿಗಳು, ಪ್ಯಾನಲ್ ವಕೀಲರುಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರದಿಂದ 12,644 ಪ್ರಕರಣಗಳನ್ನು ಗುರುತಿಸಲಾಗಿ, ಅವುಗಳ ಪೈಕಿ 10,776 ಪ್ರಕರಣಗಳು ವಿಲೇವಾರಿಗೊಂಡಿರುತ್ತವೆ.

ಸಂತ್ರಸ್ತ ಪರಿಹಾರ ಯೋಜನೆ :
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ 2011 ರ ಪ್ರಕಾರ ಮತ್ತೊಬ್ಬರ ಅಪರಾಧಿಕ ಕೃತ್ಯದಿಂದ ಮರಣ ಉಂಟಾಗಿ ಇಲ್ಲವೇ ಅತ್ಯಾಚಾರಕ್ಕೊಳಗಾಗಿ ಇಲ್ಲವೇ ಆ್ಯಸಿಡ್ ದಾಳಿಗೆ ತುತ್ತಾದವರಿಗೆ ಅಥವಾ ಇನ್ನಿತರ ಯಾವುದೇ ರೀತಿಯಿಂದ ಗಾಯಗೊಂಡು ನೊಂದ ವ್ಯಕ್ತಿಗಳಿಗೆ ಪರಿಹಾರ ಕೊಡುವಂತಹ ವಿಚಾರಣಾ ಪ್ರಕ್ರಿಯೆ ನಡೆಯುತ್ತಿದೆ.
2014 ರಿಂದ ಇಲ್ಲಿಯವರೆಗೆ ಒಟ್ಟು 301 ಪ್ರಕರಣ ದಾಖಲಾಗಿದ್ದು 299 ಪ್ರಕರಣಗಳಲ್ಲಿ ಒಟ್ಟು ರೂ. 4,53,12,500 ಬಿಡುಗಡೆ ಮಾಡಿ ನೊಂದ ವ್ಯಕ್ತಿಗಳಿಗೆ ಪರಿಹಾರವಾಗಿ ನೀಡಲಾಗಿದೆ. ಸಂತ್ರಸ್ತರು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು.
ಡಿ.18 ರಂದು ನಡೆಯುವ ಲೋಕ್ ಅದಾಲತ್ ನಲ್ಲಿ ನ್ಯಾಯಾಧೀಶರು, ಪ್ಯಾನಲ್ ವಕೀಲರು, ವಕೀಲರ ಸಂಘದ ಸಹಕಾರವಿದ್ದು ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆಯಬೇಕೆಂದು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್.ಮಾನು, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ.ಕೆ.ಎನ್, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಇದ್ದರು.

LEAVE A REPLY

Please enter your comment!
Please enter your name here