ಮಕ್ಕಳ ಹಕ್ಕುಗಳ ಸಂರಕ್ಷಣೆ ಇನ್ನಷ್ಟು ಪರಿಣಾಮಕಾರಿಯಾಗಿ ಗ್ರಾಮ ಮಟ್ಟದವರೆಗೂ ತಲುಪಬೇಕು.

0
119

ಹಾಸನ ಜ.5:-ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಪ್ರಯತ್ನಗಳು ಇನ್ನಷ್ಟು ಪರಿಣಾಮಕಾರಿಯಾಗಿ ಗ್ರಾಮ ಮಟ್ಟದವರೆಗೂ ತಲುಪಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶರಾದ ಬಿ.ಕೆ ರವಿಕಾಂತ್ ಅವರ ಉಪಸ್ಥಿತಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ ವತಿಯಿಂದ ಉಡುಪಿ ಮಕ್ಕಳ ರಕ್ಷಣಾ ನಿಯಾಮವಳಿ ಮಾದರಿ ಜಿಲ್ಲೆಗಳಲ್ಲಿ ಅಳವಡಿಸುವ ಕುರಿತು ಸಭೆ ನಡೆಸಿ ಮಾತನಾಡಿದರು.
ಮಕ್ಕಳ ರಕ್ಷಣಾಧಿಕಾರಿ ಕಚೇರಿಗೆ ಬರುವಂತಹ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ನೀಡುವಂತೆ ಕಾರ್ಯನಿರ್ವಹಿಸಬೇಕು ಹಾಗೂ ಗ್ರಾಮ ಸಭೆಗಳಿಗೆ ಭೇಟಿ ನೀಡಿದಾಗ ಅರಿವು ಮೂಡಿಸುವಂತಹ ಕಾರ್ಯವನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಮಕ್ಕಳ ಸಂರಕ್ಷಣೆ ಗ್ರಾಮ ಮಟ್ಟದಿಂದ ನಡೆಯಬೇಕು, ಯಾವುದೇ ಮಕ್ಕಳು ಬಾಲ್ಯವಿವಾಹ, ಬಾಲಕಾರ್ಮಿಕತೆ, ಲೈಂಗಿಕ ದೌರ್ಜನ್ಯ ನಡೆದಾಗ ಹಾಗೂ ಅನಾಥ, ಪರಿತ್ಯಕ್ತ ಮಕ್ಕಳು ಸಿಕ್ಕಾಗ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಬರುವವರೆಗೆ ಕಾಯದೆ ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗುರುತಿಸಿರುವ ಮಕ್ಕಳ ಮಿತ್ರ ಹಾಗೂ ಮಹಿಳಾ ಮಿತ್ರ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಸಂಕಷ್ಟದಲ್ಲಿರುವ ಮಕ್ಕಳ ಸಂರಕ್ಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚಿಸಿದರು.
ಈಗಾಗಲೆ ಗ್ರಾಮ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಕಾವಲು ಸಮಿತಿ ಕಾರ್ಯನಿರ್ವಹಿಸುತ್ತಿದೆ. ಈ ಸಮಿತಿಯು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮಿತಿಯ ಸಭೆ ನಡೆಸಬೇಕು ಹಾಗೂ ಸಮಸ್ಯೆಗಳಲ್ಲಿರುವ ಮಕ್ಕಳನ್ನು ಗುರುತಿಸಿ ಅವರ ರಕ್ಷಣೆಗೆ ಮಕ್ಕಳ ಸಹಾಯವಾಣಿ ತಂಡ ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕು. ಇದರಿಂದ ಮಕ್ಕಳನ್ನು ಶೀಘ್ರದಲ್ಲಿ ರಕ್ಷಿಸಲು ಸಾಧ್ಯವಾಗುತ್ತದೆ ಎಂದರು.
ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆಗೆ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತರು, ಅಂಗನವಾಡಿ ಮೇಲ್ವಿಚಾರಕಿಯರು ಹಾಗೂ ಶಿಕ್ಷಣ ಇಲಾಖೆಯ ಕ್ಲಸ್ಟರ್‍ನ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರು ಜೊತೆಗೆ ಆರೋಗ್ಯ ಇಲಾಖೆಯ ಆಶಾ ಹಾಗೂ ಕಿರಿಯ ಆರೋಗ್ಯ ಸಹಾಯಕರು ಜಂಟಿಯಾಗಿ ಗ್ರಾಮಗಳಲ್ಲಿ ಜರುಗುವ ಬಾಲ್ಯವಿವಾಹ, ಬಾಲಕಾರ್ಮಿಕತೆ ತಡೆ, ಇತರೆ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳ ಸಂರಕ್ಷಣೆಗೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾಫಿ ತೊಟಗಳು, ಗಣಿಗಾರಿಕೆ ಈ ರೀತಿಯ ಪ್ರದೇಶ ಭಾಗಗಳನ್ನು ಗುರುತಿಸಿ ಮೇಲ್ವಿಚಾರಕರು ಹಾಗೂ ಪೊಲೀಸ್ ಸಹಾಯದೊಂದಿಗೆ ಜಾಗೃತಿ ಕಾರ್ಯಕ್ರಮ ನಡೆಸಿ ಅರಿವನ್ನು ಮೂಡಿಸುವಂತಹ ಕೆಲಸಗಳನ್ನು ಮಾಡಬೇಕು ಎಂದು ಆರ್. ಗಿರೀಶ್ ತಿಳಿಸಿದರು.
ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ ಸಕಲೇಶಪುರ ತಾಲ್ಲೂಕಿನಲ್ಲಿ ವಲಸೆ ಬಂದಿರುವಂತಹವರು ಹೆಚ್ಚಾಗಿದ್ದು ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ ತೆಗೆದುಕೊಂಡು ಕಾರ್ಯನಿರ್ವಹಿಸಿ ಎಂದು ಹೇಳಿದರು.
ಸಭೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಕೋಮಲ ಎಚ್.ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here