ಮುಕ್ಕಲ್ಲ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ;
ಜಿಲ್ಲಾಧಿಕಾರಿಗಳಿಗೆ ಭವ್ಯ ಸ್ವಾಗತ.

0
116

ಹುಬ್ಬಳ್ಳಿ:ಮಾ.21: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಕಲಘಟಗಿ ತಾಲೂಕಿನ ಮುಕ್ಕಲ್ಲ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕೈಗೊಳ್ಳಲು ಆಗಮಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಗ್ರಾಮಸ್ಥರು ಭವ್ಯ ಸ್ವಾಗತಕೋರಿದರು.

ಮುಕ್ಕಲ್ಲ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಬಳಿ ನೆರದಿದ್ದ ಅಪಾರ ಜನಸ್ತೋಮ ಜಿಲ್ಲಾಧಿಕಾರಿಗಳು ಆಗಮಿಸಿದ ವೇಳೆ ಉದ್ಘೋಷಗಳನ್ನು ಕೂಗಿದರು. ಗ್ರಾಮದ ಅಂಗನವಾಡಿ ಕಾರ್ಯಕ್ರರ್ತೆಯರು ಆರತಿ ಬೆಳಗಿದರು. ಗ್ರಾ.ಪಂ.ಅಧ್ಯಕ್ಷ ಲಿಂಗರೆಡ್ಡಿ ಚೆನ್ನಪ್ಪ ನಡುವಿನಮನಿ ಜಿಲ್ಲಾಧಿಕಾರಿಗಳಿಗೆ ಮೈಸೂರು ಪೇಟ ತೊಡಿಸಿ ಗ್ರಾಮಕ್ಕೆ ಸ್ವಾಗತಿಸಿದರು. ಅಲಂಕೃತ ಚಕ್ಕಡಿ ಬಂಡಿ‌ ಏರಿದ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಓ ಡಾ.ಸುರೇಶ್ ಇಟ್ನಾಳ್ ಮೆರವಣಿಗೆ ಮೂಲಕ ಗ್ರಾಮ ಪ್ರವೇಶಿಸಿದರು.

ಮೆರವಣಿಗೆಯಲ್ಲಿ ವೇಷದಾರಿಗಳು, ಕಂಸಾಳೆ, ಡೋಳ್ಳು ಕುಣಿತ ಪ್ರದರ್ಶಿಸಿದರು. ಲಂಬಾಣಿ ಮಹಿಳೆಯರು ಸಾಂಪ್ರದಾಯಿಕ ಲಂಬಾಣಿ‌ ನೃತ್ಯ ಮೆರವಣಿಗೆ ಆಕರ್ಷಣೆಯಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಜಿಲ್ಲಾಧಿಕಾರಿ ಗ್ರಾಮದ ಅಧಿದೇವತೆ ಮಾರಮ್ಮನಿಗೆ ನಮಸಿ, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದರು. ಮಕ್ಕಲ್ಲ ಗ್ರಾ.ಪಂ. ವ್ಯಾಪ್ತಿ ಅಡಿಯಲ್ಲಿ ಮಕ್ಕಲ್ಲ, ಬಿದರಗಡ್ಡಿ, ಕಾಲ್ಸಾ ಹುಣಸಿಗಟ್ಟಿ ಗ್ರಾಮಗಳು ಬರುತ್ತವೆ. ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಸಂಜೆಯವರೆಗೂ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಗ್ರಾಮದ ಸಮಸ್ಯೆಗಳನ್ನು ಆಲಿಸುವರು. ಸ್ಥಳದಲ್ಲಿಯೇ ಪರಿಹಾರ ಸೂಚಿಸಲಿದ್ದಾರೆ.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪುರುಷೋತ್ತಮ್.ಎನ್.ಆರ್. ಕಲಘಟಗಿ ತಹಶೀಲ್ದಾರ ಯಲ್ಲಪ್ಪ ಗೋಣೆನ್ನವರ್, ತಾ.ಪಂ.ಇಓ ಶಿವಪುತ್ರ ಮಠಮತಿ, ಗ್ರಾ.ಪಂ. ಉಪಾಧ್ಯಕ್ಷ
ಶ್ರೀಕಾಂತಗೌಡ ಪಾಟೀಲ್ , ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗರಾಜಕುಮಾರ್ ಎಸ್ ಬಿದರಳ್ಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here