ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ; ಜಿಲ್ಲೆಯ 250 ಹಾಡಿಗಳಲ್ಲಿ ಜಾಗೃತಿ ಅಭಿಯಾನ

0
96

ಮಡಿಕೇರಿ ನ.25 :-ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯುತ್ತಿದ್ದು, 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ 250 ಹಾಡಿಗಳಲ್ಲೂ ಮತದಾರರ ನೋಂದಣಿ ಅಭಿಯಾನ ನಡೆಯುತ್ತಿದೆ ಎಂದು ಸಮಗ್ರ ಗಿರಿಜನ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ 96, ಮಡಿಕೇರಿ ತಾಲ್ಲೂಕಿನಲ್ಲಿ 66 ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 88 ಹಾಡಿಗಳಿದ್ದು, ಸುಮಾರು 58,054 ಜನರಿದ್ದಾರೆ. ಆ ನಿಟ್ಟಿನಲ್ಲಿ ಹಾಡಿಗಳಲ್ಲಿ ವಾಸಿಸುವ ಮೂಲ ನಿವಾಸಿ ಜೇನುಕುರುಬ, ಯರವ, ಸೇರಿದಂತೆ ಎಲ್ಲಾ ಹಾಡಿಗಳಿಗೆ ಭೇಟಿ ನೀಡಿ 18 ವರ್ಷ ಪೂರ್ಣಗೊಂಡವರು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿ ಭಾವಚಿತ್ರ ಒಳಗೊಂಡ ಮತದಾರರ ಗುರುತಿನ ಚೀಟಿ ಪಡೆಯುವಂತಾಗಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಎಸ್.ಆಕಾಶ್ ಅವರು ಹಾಡಿಗಳಿಗೆ ಭೇಟಿ ನೀಡಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಚಾಲನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಐಟಿಡಿಪಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಂಡವಾಗಿ ತೆರಳಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೊನ್ನೇಗೌಡ ಅವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಹಾಡಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದರ ಜೊತೆಗೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಮುಂದಾಗಲಾಗಿದೆ ಎಂದರು.
ಹದಿನೆಂಟು ವರ್ಷ ಮೇಲ್ಪಟ್ಟ ಪರಿಶಿಷ್ಟ ಪಂಗಡದ ಜನರಿಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ವಿರಾಜಪೇಟೆ ತಾಲ್ಲೂಕಿನ ಗೇಟ್ ಹಾಡಿ, ಮಜ್ಜಿಗೆಹಳ್ಳ ಫಾರಂ, ಮಜ್ಜಿಗೆಹಳ್ಳ ಆನೆ ಕ್ಯಾಂಪ್, ಬೊಮ್ಮಾಡು, ದೇವರಕಾಡು ಪೈಸಾರಿ, ಕೊಳಂಗೆರೆ, ಚೊಟ್ಟೆಪಾರೆ, ದಿಡ್ಡಳ್ಳಿ, ನೆಹರು ಕಾಲೋನಿ, ಅಂಬುಕೋಟೆ, ಬೊಂಬುಕಾಡು, ಅರ್ವತೊಕ್ಲು, ಕಾರೆಕಾಡು, ಹಾಲುಗುಂದ, ಪಿಎಚ್‍ಎಸ್. ಕಾಲೋನಿ, ದೇವ ಕಾಲೋನಿ, ತಿರುನಾಡು ಪೈಸಾರಿ, ಸೀತಾ ಕಾಲೋನಿ, ಮಡಿಕೇರಿ ತಾಲ್ಲೂಕಿನ ಜೋಡುಪಾಲ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಹೇರೂರು, ಯಡವನಾಡು, ಬಾಳೆಗುಂಡಿ, ಕಡ್ಲೆಮಕ್ಕಿ, ಯಲಕನೂರು, ಮತ್ತಿಕಾಡು ಎಸ್ಟೇಟ್, ಭೂತನ ಕಾಡು ಎಸ್ಟೇಟ್‍ಗಳಲ್ಲಿ ಈಗಾಗಲೇ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಮಾತನಾಡಿ ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅರ್ಹರಿಗೆ ಅವಕಾಶ ಮಾಡಿದೆ. ಆ ನಿಟ್ಟಿನಲ್ಲಿ 18 ವರ್ಷ ಪೂರ್ಣಗೊಂಡ ಎಲ್ಲರೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕು ಎಂದರು.
ಬೂತ್ ಮಟ್ಟದ ಅಧಿಕಾರಿಗಳು ಹಾಡಿಗಳಿಗೆ ಭೇಟಿ ನೀಡಿದಾಗ ಸರಿಯಾದ ಮಾಹಿತಿ ನೀಡಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಬೇಕು. ಈಗಾಗಲೇ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ನೋಂದಣಿಯಾಗದೆ ಇದ್ದಲ್ಲಿ ನಮೂನೆ 6 ರಲ್ಲಿ ಅರ್ಜಿಯನ್ನು ಸ್ಥಳದಲ್ಲಿಯೇ ನೀಡಬಹುದಾಗಿದೆ. ಎಂದು ಜಿ.ಪಂ.ಸಿಇಒ ಅವರು ಕೋರಿದರು.
ಡಿಸೆಂಬರ್, 08 ರವರೆಗೆ ಆಯಾಯ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ತಾಲ್ಲೂಕು ಕಚೇರಿಗಳಿಗೆ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಮತದಾರರೇ https://www.nvsp.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಮತ್ತು https://voterportal.eci.gov.in ಮತ್ತು ವಿಎಚ್‍ಎ ಮೊಬೈಲ್ ಆ್ಯಪ್ ಮೂಲಕ ನಮೂನೆ 6ಎ, ನಮೂನೆ 7 ಮತ್ತು ನಮೂನೆ 8 ನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಅಭಿಯಾನ ಸಂದರ್ಭದಲ್ಲಿ ಮನೆ ಮನೆಗೆ ಬಿಎಲ್‍ಒಗಳು ಭೇಟಿ ನೀಡಿದಾಗ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಸ್ಥಳಾಂತರ, ತೆಗೆಯುವುದು ಮತ್ತಿತರ ಕಾರ್ಯಕ್ಕೆ ಸಹಕರಿಸುವಂತೆ ಜಿ.ಪಂ.ಸಿಇಒ ಅವರು ಕೋರಿದರು.
ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,39,039 ಮತದಾರರಿದ್ದು, 2,17,349 ಪುರುಷ ಮತ್ತು 2,21,671 ಮಹಿಳಾ ಮತದಾರರು, ಹಾಗೆಯೇ 19 ಇತರೆ ಮತದಾರರು ಇದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,23,412 ಮತದಾರರು ಇದ್ದು, 1,09,952 ಪುರುಷ ಮತ್ತು 1,13,452 ಮಹಿಳಾ ಮತದಾರರು ಹಾಗೆಯೇ 8 ಇತರೆ ಮತದಾರರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,15,627 ಮತದಾರರು ಇದ್ದು, 1,07,397 ಪುರುಷ ಮತ್ತು 1,08,219 ಮಹಿಳಾ ಮತದಾರರು, ಹಾಗೆಯೇ 11 ಇತರೆ ಮತದಾರರು ಇದ್ದಾರೆ.

LEAVE A REPLY

Please enter your comment!
Please enter your name here